ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸಮಾಜದಲ್ಲಿ ಪತ್ರಕರ್ತರು ಹಾಗೂ ವೈದ್ಯರಿಬ್ಬರು ನಿಭಾಯಿಸುತ್ತಿರುವ ವೃತ್ತಿಯಲ್ಲಿ ಸವಾಲಿನ ಸರಮಾಲೆಯೇ ಇದೆ. ಸಮಯದ ಜೊತೆಗೇ ಸಾಗಬೇಕಾದ ಇವರು ಎಲ್ಲಿಯೂ ತಮ್ಮ ವೃತ್ತಿ ಜಾಣತನದೊಂದಿಗೆ ರಾಜೀಯಾಗೋ ಹಾಗಿಲ್ಲ. ಹೀಗಾಗಿ ಎಲ್ಲವನ್ನು ಬದಿಗೊತ್ತಿ ಸವಾಲಿನ ಕೆಲಸಗಳನ್ನು ಸುರಳೀತವಾಗಿ ಮಾಡುವ ಮೂಲಕ ಸಮಾಜಕ್ಕೆ ಸೇವೆ ನೀಡುತ್ತಿರುವ, ಸಮಾಜದ ಸ್ವಾಸ್ಥ, ವೈಯಕ್ತಿಕ ಸ್ವಾಸ್ಥ ಕಾಪಾಡುತ್ತಿರುವ ಪತ್ರಕರ್ತರು ಹಾಗೂ ವೈದ್ಯರ ಸೇವೆಗೆ ಸಮಾಜ ಋಣಿಯಾಗಿರಬೇಕು ಎಂದು ಕಲಬುರಗಿ ನಗರ ಪೊಲೀಸ್ ಕಮೀಷ್ನರ್ ಆರ್. ಚೇತನ ಹೇಳಿದ್ದಾರೆ.ಪತ್ರಕರ್ತರ ಹಾಗೂ ಕುಟುಂಬದವರಿಗಾಗಿ ನಗರದ ಯುನೈಟೆಡ್ ಆಸ್ಪತ್ರೆಯವರು ಪತ್ರಕರ್ತರು, ಹಾಗೂ ವೈದ್ಯರ ದಿನದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಈಗಂತೂ ಇಂಟರ್‌ನೆಟ್ ಬಂದಾದ ಮೇಲೆ ವೈದ್ಯರು, ಪತ್ರಕರ್ತರಿಬ್ಬರಿಗೂ ತೊಂದರೆ ಯಾಗಿದೆ. ಸುದ್ದಿ ಆಗುತ್ತಲೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಡುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತ ವೈದ್ಯರು ಔಷಧಿ ಹೇಳಿದರೂ ಅದನ್ನೇ ಗೂಗಲ್ ಶೋಧ ಮಾಡಿ ಇದ್ಯಾಕೆ, ಅದ್ಯಾಕೆ ಎಂದು ಕಿರಿಕ್ ಮಾಡುವವರೂ ಹೆಚ್ಚುತ್ತಿದ್ದಾರೆ. ಇವೆರಡರ ನಡುವೆಯ ನಿಜವಾದ ಪತ್ರಕರ್ತರು, ವೈದ್ಯರು ಸವಾಲಿನ ವೃತ್ತಿ ಜಾಣತನ ಮೆರೆಯಬೇಕಾಗಿದೆ. ಆದಾಗ್ಯೂ ಅನೇಕರು ಇಂತಹ ಸವಾಲಿನ ಕೆಲಸದ್ಲಿ ತಮ್ಮನ್ನು ತೊಡಗಿಸಿಕೊಂಡು ನಿತ್ಯವೂ ವೃತ್ತಿಪರರಾಗಿ ಸೇವೆಯಲ್ಲಿದ್ದಾರೆ. ಅದಕ್ಕಾಗಿಯೇ ಸಮಾಜ, ದೇಶದ ಸ್ವಾಸ್ಥ್ಯ ಉತ್ತಮವಾಗಿದೆ ಎಂದು ಎರಡೂ ರಂಗಗಳಲ್ಲಿನ ಪ್ರಾಮಾಣಿಕ ಕೆಲಸಗಾರರಿಗೆ ಚೇತನ್ ಅವರು ಬೆನ್ನು ತಟ್ಟಿದರು.ಆರೋಗ್ಯವೇ ಭಾಗ್ಯ, ಆರೋಗ್ಯ ಕಾಪಾಡುವ ವೈದ್ಯರು ದೇವರು. ಸಮಾಜದ ಆರೋಗ್ಯ ಕಾಪಾಡುವ ಪತ್ರಕರ್ತರೂ ಸಹ ಅಭಿನಂದನೆಗೆ ಅರ್ಹರು. ಹೀಗಾಗಿ ಜು.1ರಂದು ವೈದ್ಯರು ಹಾಗೂ ಪತ್ರಕರ್ತರ ದಿನವಾಗಿ ಆಚರಿಸುತ್ತ ಅವರನ್ನ ಅಭಿನಂದಿಸೋದು ಸೂಕ್ತವೆಂದರು. ಎಎಸ್ಪಿ ಶ್ರೀನಿಧಿಯವರು ಮಾತನಾಡಿ ಉಭಯ ರಂಗದ ಕೆಲಸ ಮಾಡುವವರಿಗೆ ಶುಭ ಕೋರಿದರು.
ಯುನೈಟೆಡ್ ಆಸ್ಪತ್ರೆಯ ರೂವಾರಿ ಡಾ. ವಿಕ್ರಂ ಸಿದ್ದಾರೆಡ್ಡಿ ಮಾತನಾಡಿ, ವೈದ್ಯರು, ಪಕತ್ರಕರ್ತರ ಸೇವೆ ಸಮಾಜಕ್ಕೆ ಬೇಕು. ಇವರಿಬ್ಬರೂ ಆರೋಗ್ಯವಾಗಿದ್ದರೆ ಇಡೀ ದೇಶವೇ ಆರೋಗ್ಯವಾಗಿರುತ್ತದೆ. ಪತ್ರಕರ್ತರ ದಿನದಂದು ತಾವು ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡ ಶಿಬಿರಕ್ಕೆ ಉತ್ತಮ ಸ್ಪಂದನೆ ಪತ್ರಕರ್ತರಿಂದ ಬಂದಿರೋದು ಸಂತಸ ತಂದಿದೆ ಎಂದರು.ಡಾ. ವೀಣಾ ಸಿದ್ದಾರೆಡ್ಡಿ, ಡಾ. ಉಡಪಿಕೃಷ್ಣ ಜೋಶಿ, ಡಾ. ಲಾಖೆ, ಡಾ. ರಾಜು ಕುಲಕರ್ಣಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಹಿರಿಯ ಪತ್ರಕರ್ಥರಾದ ಎಸ್ಬಿ ಜೋಶಿ, ಹಣಮಂತರಾವ ಭೈರಾಮಡಗಿ, ಜಯತೀರ್ಥ ಪಾಟೀಲ್, ಶೇಷಮೂರ್ತಿ ಅವಧಾನಿ, ಶೇಷಗಿರಿ ಹಣಸಗಿ, ದೇವಯ್ಯ ಗುತ್ತೇದಾರ್ ಸೇರಿದಂತೆ ನಗರದ ಪತ್ರಕರ್ತರೆಲ್ಲರೂ ಪಾಲ್ಗೊಂಡಿದ್ದರು. ಪತ್ರಕರ್ತ ಸಂಗಮನಾಥ ರೇವತಗಂವ್ ನಿರೂಪಿಸಿ ವಂದಿಸಿದರು. ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ದಾವುದ್, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರು- ಪರಿವಾರದ ಸದಸ್ಯರು: ಯುನೈಟೆಡ್ ಆಸ್ಪತ್ರೆ ಸೋಮವಾರ ಇಡೀ ದಿನ ಆಯೋಜಿಸಿದ್ದ ಆರೋಗ್ಯ ಸಿಬಿರದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಕ್ತದ ಸಕ್ಕರೆ ಪ್ರಮಾಣ, ರಕ್ತದೊತ್ತಡ, ಜನರಲ್ ಮೆಡಿಸಿನ್, ನ್ಯೂರಾಲಜಿ, ಹೃದ್ರೋಗ ಕಾಯಿಲೆ ತಪಾಸಣೆ, ಇಸಿಜಿ, ಬ್ಲಡ್ ಶುಗರ್, ನೇತ್ರ ಸಮಸ್ಯೆ, ಎಳಬು- ಮೂಳೆ ಸಮಸ್ಯೆ ಸೇರಿದಂತೆ ಹಲವು ತಪಾಸಣೆಗಳನ್ನೆಲ್ಲ ಶಿಬಿರದಲ್ಲಿ ಉಚಿತವಾಗಿ ನಡೆಸಲಾಯ್ತು. ಜೊತೆಗೇ ಹಲವು ಕಾಯಿಲೆಗಳಿಗೆ ಅಗತ್ಯವಿದ್ದಂತಹ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ವಿತರಿಸಲಾಯ್ತು. ಆರೋಗ್ಯ ತಪಾಸಣೆ ಜತೆಗೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ಯುನೈಟೆಡ್ ಆಸ್ಪತ್ರೆಯ ತಜ್ಞ ವೈದ್ಯರು ಮಾಡಿದರು. ಹೀಗಾಗಿ ಶಿಬಿರದಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಹಾಗೂ ಪತ್ರಿಕೆಗಳ ಎಲ್ಲ ಉದ್ಯೋಗಿಗಳು ಹಾಗೂ ಕುಟುಂಬದವರು ಹೆಚ್ಚಿಗೆ ಪಾಲ್ಗೊಂಡು ಶಿಬಿರದ ಲಾಭ ಪಡೆದರು.