ಅಧಿಕಾರದ ಗದ್ದುಗೆಗೆ ಅಧಿಕಾರಿಗಳಿಬ್ಬರ ಜಟಾಪಟಿ

| Published : Jan 24 2024, 02:05 AM IST

ಸಾರಾಂಶ

ಇಲ್ಲಿಯ ಮಿನಿ ವಿಧಾನಸೌಧದಲ್ಲಿರುವ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳ ಮಧ್ಯೆ ಪೈಪೋಟಿ ನಡೆದಿದೆ.

ಧಾರವಾಡ: ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷನ ಹುದ್ದೆಯಿಂದ ಹಿಡಿದು ಮುಖ್ಯಮಂತ್ರಿ ಹುದ್ದೆ ವರೆಗೂ ಖುರ್ಚಿಗಾಗಿ ನಾನಾ ರೀತಿಯ ರಾಜಕೀಯ ಕಸರತ್ತುಗಳು ನಡೆದಿರುವುದು ಗೊತ್ತಿರುವ ಸಂಗತಿ. ಆದರೆ, ಧಾರವಾಡದಲ್ಲೀಗ ಸರ್ಕಾರದ ಪ್ರಮುಖ ಇಲಾಖೆಯೊಂದರ ಜಿಲ್ಲಾ ಮಟ್ಟದ ಅಧಿಕಾರದ ಹುದ್ದೆಗೆ ತೀವ್ರ ರೀತಿಯ ಜಟಾಪಟಿ ಶುರುವಾಗಿದೆ.

ಇಲ್ಲಿಯ ಮಿನಿ ವಿಧಾನಸೌಧದಲ್ಲಿರುವ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳ ಮಧ್ಯೆ ಪೈಪೋಟಿ ನಡೆದಿದೆ. ಈ ಹಿಂದೇ ಇದೇ ಹುದ್ದೆಯಲ್ಲಿದ್ದು, ವರ್ಗಾವಣೆಯಾಗಿದ್ದ ಸರೋಜಾ ಹಳಕಟ್ಟಿ ಅವರು ನ್ಯಾಯಾಲಯದ ಆದೇಶದೊಂದಿಗೆ ನಾನೇ ಜಿಲ್ಲಾ ಅಧಿಕಾರಿ ಎಂದು ಕುರ್ಚಿ ಹಿಡಿದುಕೊಂಡಿದ್ದರೆ, ಸರೋಜಾ ಹಳಕಟ್ಟಿ ಅವರು ವರ್ಗಾವಣೆ ನಂತರ ಜಿಪಂ ಸಿಇಒ ಆದೇಶದ ಮೇರೆಗೆ ಸೇವೆ ಸಲ್ಲಿಸುತ್ತಿರುವ ಗೋಪಾಲ ಲಮಾಣಿ ಅವರು ನ್ಯಾಯಯುತವಾಗಿ ನಾನು ಅಧಿಕಾರ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.

ಈ ಹಿಂದೆ ಜಿಲ್ಲಾ ಅಧಿಕಾರಿಯಾಗಿದ್ದ ಸರೋಜಾ ಹಳಕಟ್ಟಿ ಅವರನ್ನು 2023ರ ಜುಲೈ 7ರಂದು ಹಾವೇರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ತಮ್ಮ ವರ್ಗಾವಣೆ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದರು. ಕೆಎಟಿ ಮತ್ತು ಹೈಕೋರ್ಟ್‌ನಲ್ಲಿಯೂ ಇವರ ವರ್ಗಾವಣೆಗೆ ಸಿಕ್ಕ ತಡೆ ತದನಂತರದಲ್ಲಿ ತೆರವುಗೊಂಡಿತ್ತು. ಹೈಕೋರ್ಟ್‌ನಲ್ಲಿ ವರ್ಗಾವಣೆಗೆ ತಡೆ ತೆರವುಗೊಂಡ ಬಳಿಕ ಸರೋಜಾ ಅವರು ಕೆಲ ದಿನ ರಜೆಗೆ ಹೋಗಿದ್ದರು. ಆ ವೇಳೆಯಲ್ಲಿಯೇ ಅವರನ್ನು ಹುದ್ದೆಯಿಂದ ಬಿಡುಗೊಳಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪಾ ಟಿ.ಕೆ. ಅವರು, ಆ ಜಾಗಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಗೋಪಾಲ ಲಮಾಣಿ ಅವರನ್ನು ಪ್ರಭಾರಿಯಾಗಿ ನಿಯೋಜಿಸಿ ಆದೇಶ ಹೊರಡಿಸಿದ್ದರು. ಆದರೆ, ಇದರ ವಿರುದ್ಧ ಹಳಕಟ್ಟಿ ಅವರು ಸುಪ್ರಿಂಕೋರ್ಟ್ ವರೆಗೆ ಹೋಗಿದ್ದರು. ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಆದೇಶ ಮಾಡಿತ್ತು. ಈ ಆದೇಶದೊಂದಿಗೆ ಬಂದಿರುವ ಹಳಕಟ್ಟಿ ಇದೀಗ ಕುರ್ಚಿ ಬಿಟ್ಟು ಅಲುಗಾಡುತ್ತಿಲ್ಲ.

ಆದರೆ, ಜಿಪಂ ಸಿಇಒ ಆದೇಶದ ಪ್ರಕಾರ ನಾನೇ ಪ್ರಭಾರ ಅಧಿಕಾರಿ. ನನಗೇ ಎಲ್ಲ ಅಧಿಕಾರ ಇದೆ ಎಂದು ವಾದ ಮಂಡಿಸುತ್ತಿರುವ ಗೋಪಾಲ ಲಮಾಣಿ, ಸರೋಜಾ ಅವರ ವರ್ಗಾವಣೆ ನಂತರ ಸಿಇಒ ನನಗೆ ಆದೇಶ ಮಾಡಿದ್ದಾರೆ. ಹೀಗಾಗಿ, ಈಗಲೂ ನಾನೇ ಬಿಸಿಎಂ ಜಿಲ್ಲಾ ಅಧಿಕಾರಿ. ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳಲು ಹೇಳಿದೆಯೇ ಹೊರತು ಅಧಿಕಾರ ಸ್ವೀಕರಿಸಲು ಹೇಳಿಲ್ಲ. ಹಳಕಟ್ಟಿ ಅವರು ದಬ್ಬಾಳಿಕೆ ಮಾಡಿ ಖುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಈಗಾಗಲೇ ಧಾರವಾಡದಲ್ಲಿ ವಸತಿ ನಿಲಯಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸಾಕಷ್ಟು ಅರ್ಜಿಗಳು ಬಾಕಿ ಉಳಿದಿದ್ದು, ನಿತ್ಯ ಹಾಸ್ಟೆಲ್‌ಗಾಗಿ ಇಲಾಖೆಗೆ ಅಲೆದಾಡುವ ಸ್ಥಿತಿ ಉಂಟಾಗಿದೆ. ಜತೆಗೆ ಹಣ ಪಡೆದು ಹಾಸ್ಟೆಲ್‌ ಕೊಡಲಾಗುತ್ತಿದೆ ಎಂಬ ಆರೋಪವೂ ಇದೆ. ಇಂತಹ ಸ್ಥಿತಿಯಲ್ಲಿ ಅಧಿಕಾರಿಗಳಿಬ್ಬರು ಖುರ್ಚಿಗಾಗಿ ಕಿತ್ತಾಡುತ್ತಿದ್ದು ಜಿಲ್ಲಾಡಳಿತಕ್ಕೂ ತಲೆನೋವಾಗಿದೆ.

ಹಿಂದುಳಿದ ಇಲಾಖೆ ಅಧಿಕಾರದ ಕುರಿತು ಸದ್ಯ ಆಗಿರುವ ಬೆಳವಣಿಯ ಬಗ್ಗೆ ಕೋರ್ಟ್‌ ಆದೇಶ ಸೇರಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ. ಇಲಾಖೆಯ ಹಿರಿಯ ಅಧಿಕಾರಿಗಳಿಂದ ಬರುವ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.