ಬೌರಿಂಗ್‌ ಹೊಸ ಕಟ್ಟಡ ಕಾಮಗಾರಿ ಶೀಘ್ರ

| Published : Oct 11 2024, 11:45 PM IST

ಸಾರಾಂಶ

ಹತ್ತು ಅಂತಸ್ತುಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿ 500 ಹಾಸಿಗೆ ಸಾಮರ್ಥ್ಯದೊಂದಿಗೆ ತಲೆ ಎತ್ತಲಿರುವ ಬೌರಿಂಗ್ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲ ಸಿದ್ಧತೆಯಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ.

ಮಯೂರ್‌ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಹತ್ತು ಅಂತಸ್ತುಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿ 500 ಹಾಸಿಗೆ ಸಾಮರ್ಥ್ಯದೊಂದಿಗೆ ತಲೆ ಎತ್ತಲಿರುವ ಬೌರಿಂಗ್ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲ ಸಿದ್ಧತೆಯಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ.

ಶಿವಾಜಿ ನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಬೌರಿಂಗ್ ಆಸ್ಪತ್ರೆಯ ಹಳೇ ಕಟ್ಟಡವನ್ನು ಎರಡು ತಿಂಗಳ ಹಿಂದೆಯೇ ನೆಲಸಮ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆಗಾಗಿ ಮುಖ್ಯಮಂತ್ರಿಗಳ ಸಮಯ ಕೋರಲಾಗಿದೆ. ಈ ಔಪಚಾರಿಕ ಕಾರ್ಯಕ್ರಮದ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ. ಒಟ್ಟು ₹212.23 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. 2027ರಲ್ಲಿ ಹೊಸ ಆಸ್ಪತ್ರೆ ಕಾರ್ಯಾರಂಭ ಮಾಡುವ ಗುರಿಯೊಂದಿಗೆ ಕಟ್ಟಡ ಕಾಮಗಾರಿ ಮುಗಿಸಲು ಎರಡು ವರ್ಷಗಳ ಗಡುವು ನೀಡಲಾಗಿದೆ. ಸದ್ಯಕ್ಕೆ ಬೌರಿಂಗ್‌ ಪಕ್ಕದಲ್ಲೇ ಇರುವ ಕಟ್ಟಡದಲ್ಲಿ ಅಸ್ಪತ್ರೆ ಸ್ಥಳಾಂತರಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಮೂರು ಹಂತದಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಆಗಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಹೊರ ರೋಗಿ ವಿಭಾಗ ಮತ್ತು ಶಸ್ತ್ರಚಿಕಿತ್ಸೆ ಕೊಠಡಿಗಳು ಇರುವ ತಳಮಹಡಿ, ನೆಲಮಹಡಿ ಸಿದ್ಧಗೊಳ್ಳಲಿದೆ. ಎರಡನೇ ಹಂತದಲ್ಲಿ 3ನೇ ಮಹಡಿಯಿಂದ 6ನೇ ಮಹಡಿವರೆಗೆ ನಾಲ್ಕು ಅಂತಸ್ತು ತಲೆ ಎತ್ತಲಿದೆ. ಇದು ಕೂಡ ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಒಳಗೊಂಡಿರಲಿದೆ. ಮೂರನೇ ಹಂತದಲ್ಲಿ 7ರಿಂದ 10ನೇ ಮಹಡಿವರೆಗೆ 360 ಹಾಸಿಗೆ ಸಾಮರ್ಥ್ಯದ ವಾರ್ಡ್‌ ಬ್ಲಾಕ್‌ಗಳು ಇರಲಿವೆ.

ಹಳೆಯ ಮೂಲ ಕಟ್ಟಡ ಮ್ಯೂಸಿಯಂ?

ಬ್ರಿಟಿಷ್‌ ಕಾಲದ ಬೌರಿಂಗ್‌ ಆಸ್ಪತ್ರೆ ಬೆಂಗಳೂರಿನ ಇತಿಹಾಸದಲ್ಲಿ ತನ್ನದೇ ಮಹತ್ವ ಪಡೆದಿದೆ. ಹೀಗಾಗಿ ಬೌರಿಂಗ್‌ ಆಸ್ಪತ್ರೆಯ ಚಿಕ್ಕದಾದ ಮೂಲ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ಬೌರಿಂಗ್‌ ಆಸ್ಪತ್ರೆ ನಿರ್ದೇಶಕ ಡಾ। ಮನೋಜ್‌ ಕುಮಾರ್‌ ಹೇಳಿದ್ದಾರೆ.

ಇದು 1890ರವರೆಗೆ ಬೆಂಗಳೂರಿನ ಏಕೈಕ ಸಾರ್ವಜನಿಕ ಆಸ್ಪತ್ರೆಯಾಗಿತ್ತು. 1866ರಲ್ಲಿ ಮೈಸೂರು ಕಮಿಷನರ್‌ ಆಗಿದ್ದ ಲೆವಿನ್‌ ಬೆಂಥಾನ್‌ ಬೌರಿಂಗ್‌ ಈ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಪ್ಯಾರಿಸ್‌ನಲ್ಲಿದ್ದ ಲಾ ರಿಬೋಸಿ ಕಟ್ಟಡದ ನಕ್ಷೆಯನ್ನು ಆಧಾರವಾಗಿಟ್ಟುಕೊಂಡು ಈ ಆಸ್ಪತ್ರೆ ನಿರ್ಮಿಸಲಾಗಿತ್ತು. 1868ರಲ್ಲಿ ಕಟ್ಟಡ ಕಾರ್ಯ ಮುಗಿಸಿ ಸೇವೆ ಆರಂಭವಾಗಿತ್ತು. ಇದಕ್ಕೆ ಕಾರಣೀಕೃತರಾದ ಹಿನ್ನೆಲೆಯಲ್ಲಿ ‘ಬೌರಿಂಗ್‌’ ಹೆಸರನ್ನು ಆಸ್ಪತ್ರೆಗೆ ಇಡಲಾಯಿತು.

ಮುಂದೆ 1900ರಲ್ಲಿ ಮಹಿಳೆಯರಿಗೆ ಮಹಿಳಾ ವೈದ್ಯರಿಂದಲೇ ಚಿಕಿತ್ಸೆ ನೀಡುವ ಉದ್ದೇಶ ಮತ್ತು ಬ್ರಿಟಿಷ್‌ ಮಹಿಳೆಯರಿಗೆ ವೈದ್ಯಕೀಯ ಶಿಕ್ಷಣ ನೀಡಲು ಆಸ್ಪತ್ರೆಯನ್ನು ವಿಸ್ತರಿಸಲಾಗಿತ್ತು. ಇದನ್ನು ವೈಸ್‌ರಾಯ್‌ ಲಾರ್ಡ್‌ ಜಾರ್ಜ್‌ ನಥಾನಿಯಲ್‌ ಕರ್ಜನ್‌ ಪತ್ನಿ ಲೇಡಿ ಕರ್ಜನ್‌ ಉದ್ಘಾಟಿಸಿದ್ದರು. 104 ಹಾಸಿಗೆ ಸಾಮರ್ಥ್ಯದ ಮೈಸೂರು ರಾಜ್ಯಕ್ಕೆ ಸೇರಿದ್ದ ಈ ವೈದ್ಯಕೀಯ ಸಂಸ್ಥೆಯನ್ನು 1884ರಲ್ಲಿ ನಾಗರಿಕ ಮತ್ತು ಮಿಲಿಟರಿ ಆಡಳಿತಕ್ಕೆ ವಹಿಸಲಾಯಿತು.

ಹೀಗಾಗಿ ಐತಿಹಾಸಿಕ ಮಹತ್ವವುಳ್ಳ ಕಟ್ಟಡದ ಛಾಯಾಚಿತ್ರಗಳು ಸೇರಿ ಇನ್ನಿತರ ಮಾಹಿತಿಗಳನ್ನು ಒಳಗೊಂಡು ಇಲ್ಲಿ ಮ್ಯೂಸಿಯಂ ರೂಪಿಸುವ ಚಿಂತನೆಯೂ ಇದೆ. ಇತಿಹಾಸ ತಜ್ಞರೂ ಈ ಬಗ್ಗೆ ಒತ್ತಾಯಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಜನತೆಗೆ ಕುತೂಹಲಕರ ಮಾಹಿತಿಯೂ ಸಿಗಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

ಐತಿಹಾಸಿಕ ಮಹತ್ವದ ಮೂಲ ಚಿಕ್ಕ ಕಟ್ಟಡ ಉಳಿಸಿಕೊಳ್ಳಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಪೂರ್ವ ಸಿದ್ಧತೆಗಳು ಆಗಿವೆ. ಹೊಸ ಬೌರಿಂಗ್‌ ಆಸ್ಪತ್ರೆ ಪೂರ್ಣಗೊಳಿಸಲು ಎರಡು ವರ್ಷ ಗಡುವು ನೀಡಲಾಗಿದೆ.

-ಡಾ। ಮನೋಜ್‌ ಕುಮಾರ್‌, ಬೌರಿಂಗ್‌ ಆಸ್ಪತ್ರೆ ನಿರ್ದೇಶಕ.