ಕನ್ನಡಪ್ರಭ ವಾರ್ತೆ ಹುಳಿಯಾರು

ಶಾಲೆಯಿಂದ ಮನೆಗೆ ಮರಳಿದ ಕೆಲವೇ ನಿಮಿಷಗಳಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಹೋದ ಮೂರನೇ ತರಗತಿಯ ಬಾಲಕನೊಬ್ಬ, ಮಳೆ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ಹುಳಿಯಾರು ಮತಿಘಟ್ಟ ಸಮೀಪದ ಸೈಯದ್ ಸಾಬ್ ಪಾಳ್ಯದಲ್ಲಿ ನಡೆದಿದೆ.ಸ್ಥಳೀಯ ನಿವಾಸಿಯಾದ ರಾಮನ್ (೯ ವರ್ಷ) ಮೃತಪಟ್ಟ ದುರ್ದೈವಿ ಬಾಲಕ.ಘಟನೆಯ ವಿವರ:ಸಂಜೆ ಸುಮಾರು ೪:೪೫ರ ವೇಳೆಗೆ ರಾಮನ್ ಶಾಲೆಯಿಂದ ಮನೆಗೆ ಮರಳಿದ್ದನು. ಮನೆಯೊಳಗೆ ತನ್ನ ಶಾಲಾ ಬ್ಯಾಗ್ ಇಟ್ಟು, ತಕ್ಷಣವೇ ಎಂದಿನಂತೆ ಹತ್ತಿರದಲ್ಲೇ ಇದ್ದ ತನ್ನ ಸ್ನೇಹಿತರೊಂದಿಗೆ ಆಟವಾಡಲು ತೆರಳಿದ್ದನು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ತೋಟಗಳಿಗೆ ನೀರು ಹರಿಸಲು ಮಾಡಿಕೊಳ್ಳಲಾಗಿದ್ದ ತಗ್ಗಿನ ಪ್ರದೇಶದ ಸಣ್ಣ ಹೊಂಡವೊಂದರಲ್ಲಿ ಭಾರಿ ಪ್ರಮಾಣದ ನೀರು ಬಂದು ನಿಂತಿತ್ತು. ಆಟದ ರಭಸದಲ್ಲಿ ಬಾಲಕನು ಆ ಹೊಂಡಕ್ಕೆ ಜಿಗಿದಿದ್ದಾನೆ ಎನ್ನಲಾಗಿದೆ.ಬಾಲಕನು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಜೊತೆಯಲ್ಲಿದ್ದ ಮತ್ತೊಬ್ಬ ಬಾಲಕ ತಕ್ಷಣವೇ ಓಡಿ ಬಂದು ಮನೆಯವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೋಷಕರು ಮತ್ತು ಗ್ರಾಮಸ್ಥರು ಬಾಲಕನನ್ನು ನೀರಿನಿಂದ ಹೊರತೆಗೆದಿದ್ದಾರೆ.ಮಾರ್ಗಮಧ್ಯೆ ಉಸಿರು ಚೆಲ್ಲಿದ ಬಾಲಕ:ಹೊಂಡದಿಂದ ಹೊರತೆಗೆದಾಗ ಬಾಲಕನಿಗೆ ಶೇಕಡಾ ೬೦ ರಷ್ಟು ಉಸಿರಾಟ (ಪಲ್ಸ್) ಇತ್ತು ಎನ್ನಲಾಗಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ತಿಪಟೂರು ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ಆದರೆ ತಿಪಟೂರಿಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಅ್ಯಂಬುಲೆನ್ಸ್ ವಿಳಂಬ ಹಾಗೂ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಬಾಲಕನು ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.ಪುಟ್ಟ ಬಾಲಕನ ಹಠಾತ್ ಸಾವಿನಿಂದ ಸೈಯದ್ ಸಾಬ್ ಪಾಳ್ಯ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.