ಭಕ್ತಿ ಶ್ರದ್ಧಾ ಭಾವಕ್ಕೆ ಸಾಕ್ಷಿಯಾದ ಬ್ರಹ್ಮ ದೇವಸ್ಥಾನ : ಡಾ. ಹೆಗ್ಗಡೆ

| Published : Feb 16 2025, 01:46 AM IST

ಸಾರಾಂಶ

ಫೆ 12ರಿಂದ 16ರ ವರೆಗೆ ನಡೆಯುವ ಮೂಡುಬಿದಿರೆಯ ನಾಡೂರು ಲಾಡಿಯಲ್ಲಿ ನವೀಕೃತ ಶಿಲಾಮಯ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು.

ಮೂಡುಬಿದಿರೆ: ಬ್ರಹ್ಮದೇವರ ದೇವಾಲಯವೇ ಅಪರೂಪ. ಅದರಲ್ಲೂ ಪುರಾತನ ದೇವಾಲಯಗಳ ಜೀರ್ಣೋದ್ಧಾರ ನವನಿರ್ಮಾಣಕ್ಕಿಂತಲ್ಲೂ ಕಷ್ಟಕರ. ಅಂತಹುದರಲ್ಲಿ ಭಕ್ತಿ, ಶ್ರದ್ಧೆ ಮತ್ತು ಕರ್ತವ್ಯ ಭಾವದಿಂದ ದೇವಾಲಯ ನಿರ್ಮಿಸಿರುವುದು ಅಭಿನಂದನಾರ್ಹ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು ನುಡಿದರು.

ಅವರು ಶನಿವಾರ ಸಂಜೆ ಫೆ 12ರಿಂದ 16ರ ವರೆಗೆ ನಡೆಯುವ ಮೂಡುಬಿದಿರೆಯ ನಾಡೂರು ಲಾಡಿಯಲ್ಲಿ ನವೀಕೃತ ಶಿಲಾಮಯ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ದೇವರ ಪ್ರತಿಷ್ಠಾಪನೆಯಾದರೆ ಸಾಲದು. ನಮ್ಮ ಎಳೆಯ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯ ಪ್ರತಿಷ್ಠೆಯಾಗುವ ಅಗತ್ಯವಿದೆ ಎಂದರು.

ಸಮ್ಮಾನ, ಗೌರವ: ಶ್ರೀ ದೇವಳದ ವೇಮೂ. ಶ್ರೀ ಮುರಳೀಧರ ತಂತ್ರಿ, ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ, ಶಿಲ್ಪಿ ಪದ್ಮನಾಭ, ಕಾಷ್ಠ ಶಿಲ್ಪದ ನಾಗೇಂದ್ರ ಆಚಾರ್ಯ ಅವರನ್ನು ಶ್ರೀ ದೇವಳದ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಗೌರ ವಿಸಲಾಯಿತು. ಇದೇ ವೇಳೆ ಕಳೆದ ಎರಡೂವರೆ ದಶಕಗಳಿಂದ

ಶ್ರೀ ದೇವಳದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅನಂತಕೃಷ್ಣ ರಾವ್ ಅವರನ್ನು ಸಮಿತಿಗಳ ಪದಾಧಿಕಾರಿಗಳು, ಗ್ರಾಮಸ್ಥರ ಪರವಾಗಿ ಕೃತಜ್ಞತಾಪೂರ್ವಕ ಸಮ್ಮಾನಿಸಿ ಗೌರವಿಸಿದರು.

ಪ್ರಸಾದ್ ಮುನಿಯಂಗಳ ಸಮ್ಮಾನಿತರ ಪರವಾಗಿ ಮಾತನಾಡಿ, ನವೀಕೃತ ಶಿಲಾಮಯ ದೇವಾಲಯಗಳ ಬೆಳವಣಿಗೆಗೆ ಮೂಡುಬಿದಿರೆ ಮುನ್ನುಡಿ ಬರೆದಂತಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅನಂತಕೃಷ್ಣ ರಾವ್ ದಶಕಗಳ ಕನಸು ನನಸಾಗಿದೆ. ಮುಂದೆ ಭಜಕರು ಇದರ ಅಭಿವೃದ್ಧಿಗೆ ಶ್ರಮಿಸಬೇಕು. ಸಭಾಂಗಣ, ಸಹಿತ ಇನ್ನಷ್ಟು ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಪ್ರವಾಸೋದ್ಯಮ ನೆಲೆಯಲ್ಲೂ ಬ್ರಹ್ಮನ ದೇವಸ್ಥಾನಕ್ಕೆ ಆದ್ಯತೆ ದೊರೆಯುವಂತಾಗಲಿ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಜಗತ್ತಿನ ಮನೆಗೆ ಭಾರತವೇ ದೇವರ ಕೋಣೆ. ಭಾರತಕ್ಕೆ ತುಳುನಾಡೇ ದೇವರ ಕೋಣೆಯಾಗಿರುವುದು ನಮ್ಮ ಭಾಗ್ಯ ಎಂದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಚಿವ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ , ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಪುರಸಭಾಧ್ಯಕ್ಷೆ ಶ್ರೀಮತಿ ಜಯಶ್ರೀ ಕೇಶವ,ಸದಸ್ಯ ಸುರೇಶ್ ಪ್ರಭು ಮುಖ್ಯ ಅತಿಥಿಯಾಗಿದ್ದರು. ಸ್ವಾಗತ ಸಮಿತಿಯ ಸುದರ್ಶನ ಎಂ. ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ ವಂದಿಸಿದರು. ಎಂ. ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.-------------ಪುನಃಪ್ರತಿಷ್ಠಾ ಸಂಭ್ರಮ!ದೇಶದಲ್ಲೇ ಅಪರೂಪ ಎನ್ನಲಾಗುವ ಚತುರ್ಮುಖ ಶ್ರೀ ಬ್ರಹ್ಮ ದೇವರ ಆಕರ್ಷಕ ಶಿಲಾಮಯ ದೇವಾಲಯದಲ್ಲಿ ಶನಿವಾರ ಕುಂಭ ಲಗ್ನ ಸುಮೂಹೂರ್ತದಲ್ಲಿ ಪರಮಪೂಜ್ಯ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಶಿಖರ ಪ್ರತಿಷ್ಠೆ, ನೂತನ ಶಿಲಾಮಯ ದೇವಳದ ಅನಾವರಣ,ಚತುರ್ಮುಖ ಬ್ರಹ್ಮ- ಬಲಮುರಿ ಗಣಪತಿ, ನಾಡು ಸಹಿತ ಕುಂಭಕಂಠಿಣಿ, ರಕೇಶ್ವರಿ ದೈವಗಳ ಬಿಂಬ ಪ್ರತಿಷ್ಠೆ ತನ್ನ ಹೋಮ, ತತ್ವಕಲಶಾಭಿಷೇಕ ಜರಗಿತು. ಸಂಜೆ ಮಂಡಲ ಪೂಜೆ,ಸಹಸ್ರ (1001) ಕಲಶ ಬ್ರಹ್ಮ ದೇವರಿಗೆ 108 ಕಲಶ, ಗಣಪತಿ ದೇವರಿಗೆ 48 ಕಲಶ ನಾಡುವಿಗೆ 48 ಕಲಶ, ಪರಿವಾರ ದೈವಗಳಿಗೆ ದ್ರವ್ಯ ಸಹಿತ ಬ್ರಹ್ಮಕಲಶ ಪ್ರತಿಷ್ಠೆ, ಅಧಿವಾಸ ಹೋಮಗಳು, ಸಾಂಸ್ಕೃತಿಕ ಕಲಾಪಗಳು, ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡ ಭಜಕರಿಗೆ ಅಪರಾಹ್ನ ಮತ್ತು ರಾತ್ರಿ ವಿಶೇಷ ಅನ್ನಸಂತರ್ಪಣೆ, ಸುವ್ಯವಸ್ಥೆಯಲ್ಲಿ ನೂರಾರು ಸ್ವಯಂ ಸೇವಕರು ಶ್ರಮಿಸಿದರು. ಭಾನುವಾರ ಪೇಜಾವರ ಶ್ರೀಗಳವರಿಂದ ಬ್ರಹ್ಮ ಕಲಶೋತ್ಸವ ಸಂಭ್ರಮ ಜರಗಲಿದೆ.