ಬ್ರಹ್ಮರಕೂಟ್ಲು: ಇದು ರಸ್ತೆಯೋ ಚಂದ್ರಗ್ರಹದ ಅಂಗಳವೋ...?

| Published : Sep 03 2025, 01:02 AM IST

ಸಾರಾಂಶ

ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದ ಬಳಿಯ ಸರ್ವೀಸ್ ರಸ್ತೆರ್‌ ದುಃಸ್ಥಿತಿಯ ನೋಟ ಇದು. ಇಲ್ಲಿನ ರಸ್ತೆಯ ಸಮಸ್ಯೆ ಬಗ್ಗೆ ಸಾರ್ವಜನಿಕ ಆರೋಪಗಳು ಕೇಳಿಬಂದಿದ್ದು, ರಸ್ತೆ ರಿಪೇರಿ ಮಾಡಿ ಕೊಡಿ ಎಂಬ ಒತ್ತಾಯಗಳು ಕೇಳಿ ಬಂದಿವೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಇದು ನೋಡಲು ರಸ್ತೆಯಂತಿದ್ದರೂ, ಇಲ್ಲಿ ಚಂದ್ರಗ್ರಹದಲ್ಲಿ ತೆಗೆದ ಛಾಯಾಚಿತ್ರದಂತಿದೆ. ಹೌದು, ಇದು ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದ ಬಳಿಯ ಸರ್ವೀಸ್ ರಸ್ತೆಯ ನೋಟ. ಇಲ್ಲಿನ ರಸ್ತೆಯ ಸಮಸ್ಯೆ ಬಗ್ಗೆ ಸಾರ್ವಜನಿಕ ಆರೋಪಗಳು ಕೇಳಿಬಂದಿದ್ದು, ರಸ್ತೆ ರಿಪೇರಿ ಮಾಡಿ ಕೊಡಿ ಎಂಬ ಒತ್ತಾಯಗಳು ಕೇಳಿ ಬಂದಿವೆ.

ರಾ.ಹೆ.75 ರ ಬಿ.ಸಿ.ರೋಡು ಸಮೀಪದ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಬಳಿಯ ಸರ್ವೀಸ್ ರಸ್ತೆಯು ಅವ್ಯವಸ್ಥೆಯಿಂದ ಕೂಡಿದ್ದು ಪರಿಹಾರ ಸಿಗುತ್ತಿಲ್ಲ. ಬಿ.ಸಿ.ರೋಡಿನಿಂದ ಸರ್ವೀಸ್ ರಸ್ತೆಯಲ್ಲಿ ಸಾಗಿದ ವಾಹನಗಳು ಬ್ರಹ್ಮರಕೂಟ್ಲು ಎಂಬಲ್ಲಿ ಹೆದ್ದಾರಿ ಸೇರುವ ಭಾಗದಲ್ಲಿ ಬೃಹತ್ ಹೊಂಡಗಳಿಂದ ಲಘು ವಾಹನಗಳು ಜಖಂಗೊಳ್ಳುವ ಸ್ಥಿತಿ ಇದ್ದರೂ, ಅದರ ದುರಸ್ತಿಗೆ ಯಾರೂ ಕ್ರಮವಹಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಹೆದ್ದಾರಿಗೆ ಸಂಪರ್ಕಿಸುವ ಏರು ರಸ್ತೆಯಲ್ಲಿ ಒಂದು ಅಡಿಗೂ ಆಳದ ಬೃಹತ್ ಗುಂಡಿಗಳಿದ್ದು, ಸಣ್ಣ ಕಾರುಗಳ ತಳ ಭಾಗಕ್ಕೆ ತಾಗಿ ನಿತ್ಯವೂ ವಾಹನಗಳಿಗೆ ಹಾನಿಯಾಗುತ್ತಿವೆ. ಇದರಿಂದ ವಾಹನಗಳು ಜಖಂಗೊಂಡ ಉದಾಹರಣೆಗಳು ಕೂಡ ಸಾಕಷ್ಟಿದೆ. ಈ ಭಾಗದಲ್ಲಿ ವಾಹನ ಸಂಚರಿಸುವ ಸಂದರ್ಭ ಗುಡ್ಡ ಹತ್ತುವ ಅನುಭವವಾಗಿದ್ದು, ಕಾರುಗಳ ಚಕ್ರಗಳು ಸಂಪೂರ್ಣ ಹೊಂಡದಲ್ಲಿ ಮುಳುಗಿ ಹೋಗುತ್ತದೆ.

ಸ್ಥಳೀಯ ವಾಹನಗಳು ನಿತ್ಯವೂ ಮೂರು ನಾಲ್ಕು ಬಾರಿ ಸಂಚರಿಸುವ ಸಂದರ್ಭ ಟೋಲ್ ಕಟ್ಟಿ ಸಾಗುವುದು ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸರ್ವೀಸ್ ರಸ್ತೆಗಳಿದ್ದು, ಆದರೆ ಈಗ ಇಂತಹ ರಸ್ತೆಯಲ್ಲಿ ಸಾಗುವುದಕ್ಕಿಂತ ಟೋಲ್ ಪಾವತಿಸಿ ಹೋಗುವುದೇ ಉತ್ತಮ ಎಂಬ ಸ್ಥಿತಿ ಇದೆ ಎಂಬ ಮಾತುಗಳು ಸ್ಥಳೀಯ ವಾಹನ ಮಾಲಕರದ್ದು ಆಗಿದೆ.

ವಾಹನಗಳು ಟೋಲ್ ತಪ್ಪಿಸಿಕೊಂಡು ಸರ್ವೀಸ್ ರಸ್ತೆಯಲ್ಲಿ ಸಾಗುತ್ತವೆ ಎಂಬ ಕಾರಣಕ್ಕೆ ಈ ಹೊಂಡಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಾಗೇ ಬಿಟ್ಟಿರುವ ಸಾಧ್ಯತೆ ಇದೆಯಾದರೂ ಇಲ್ಲಿನ ಸ್ಥಳೀಯ ವಾಹನ ಸವಾರರಿಗೆ ತೊಂದರೆಯಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ಸರ್ವೀಸ್ ರಸ್ತೆಯ ಹೊಂಡಗಳನ್ನು ಮುಚ್ಚಿ ಶಾಶ್ವತ ಪರಿಹಾರ ನೀಡುವಂತೆ ದ.ಕ.ಜಿಲ್ಲಾಧಿಕಾರಿ ಎನ್‌ಎಚ್‌ಎಐಗೆ ಸೂಚನೆ ನೀಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.