ಕನ್ನಡಪ್ರಭ ವಾರ್ತೆ ಭಟ್ಕಳ
ಇಲ್ಲಿಯ ಸುಪ್ರಸಿದ್ಧ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಮಾ. 27 ರಂದು ಶುಕ್ರವಾರ ಸಂಜೆ ಸಂಭ್ರಮ ಸಡಗರದಿಂದ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಯುಗಾದಿಯಂದು ಧ್ವಜಾರೋಹಣ, ಶಿಭಿಕಾ ಯಂತ್ರೋತ್ಸವದೊಂದಿಗೆ ಗರುಡನ ಪಟ ಕಟ್ಟುವ ಕಾರ್ಯದೊಂದಿಗೆ ಚಾಲನೆ ಕೊಡಲಾಗಿತ್ತು. ಅಂದಿನಿಂದ ದೇವಸ್ಥಾನದಲ್ಲಿ ರಥೋತ್ಸವಕ್ಕೆ ಸಂಬಂಧಪಟ್ಟ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿ ಶಿಖಿ ವಾಹನೋತ್ಸವ, ಡೋಲಾ ಯಂತ್ರೋತ್ಸವ, ಪುಷ್ಪ ಮಂಟಪೋತ್ಸವ, ಅತೀವೇಗ ವಾಹನೋತ್ಸವ, ಗಜವಾಹನೋತ್ಸವ, ರಾತ್ರಿ ಪುಷ್ಪರಥೋತ್ಸವ, ಸಿಂಹ ವಾಹನೋತ್ಸವ, ರಾತ್ರಿ ಪುಷ್ಪರಥೋತ್ಸವ ವಿಜ್ರಂಭಣೆಯಿಂದ ನಡೆಯಿತು. ರಾಜ್ಯದಲ್ಲಿಯೇ ಕೆಲವೇ ಕೆಲವು ದೇವಸ್ಥಾನಗಳಲ್ಲಿ ಆಗಮೋಕ್ತ ಪದ್ಧತಿಯಂತೆ ದೇವಾಲಯದ ಪ್ರಧಾನ ದೇವರಾಗಿ ಹನುಮಂತನನ್ನು ಪೂಜಿಸುವುದು ಭಟ್ಕಳ ಚೆನ್ನಪಟ್ಟಣ ಹನುಮಂತ ದೇವರ ವಿಶೇಷವಾಗಿದೆ. ಭಟ್ಕಳ ಚೆನ್ನಪಟ್ಟಣ ದೇವಸ್ಥಾನ ತನ್ನದೇ ಆದ ಇತಿಹಾಸ ಹೊಂದಿದೆ. ಇಲ್ಲಿನ ಹನುಮಂತನನ್ನು ಭಟ್ಕಳದ ಗ್ರಾಮ ದೇವತೆ ಎಂತಲೂ ಕರೆಯುತ್ತಾರೆ. ರಾಮನವಮಿಯಂದು ಸಂಜೆ ನಡೆಯುವ ಬ್ರಹ್ಮರಥೋತ್ಸವಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀಧರ ಎಂ. ಮೊಗೇರ, ಪದಾಧಿಕಾರಿಗಳು, ಪ್ರಧಾನ ಅರ್ಚಕರು ಹಾಗೂ ದೇವಸ್ಥಾನದ ಭಕ್ತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶುಕ್ರವಾರ ಸಂಜೆ ೫ ಗಂಟೆಯ ಸುಮಾರಿಗೆ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಬ್ರಹ್ಮರಥವನ್ನು ರಥಬೀದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಗುತ್ತದೆ. ರಥೋತ್ಸವದ ಹಿನ್ನೆಲೆ ಪಟ್ಟಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲಾ ಕಡೆ ನಿಗಾ ಇಡಲಾಗಿದೆ.ಪಲ್ಲಕ್ಕಿ ಉತ್ಸವದ ವೇಳೆ ಕಲ್ಲು ತೂರಾಟ: ದೂರು ದಾಖಲು
ಭಟ್ಕಳ ನಗರದಲ್ಲಿ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಶ್ರೀ ರಾಮನವಮಿಯ ಬ್ರಹ್ಮ ರಥೋತ್ಸವದ ಪ್ರಯುಕ್ತ ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಗಜಾನನ ಬೀದಿಯಲ್ಲಿ ಸಾಗುತ್ತಿರುವಾಗ ಕಂಪೌಂಡ್ ಒಳಗಿನಿಂದ ಕೆಲವು ಹುಡುಗರು ಕಲ್ಲು ತೂರಿದ ಕುರಿತು ದೇವಸ್ಥಾನದ ಆಡಳಿತ ಮಂಡಳಿ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ ಶನಿವಾರ ಸಂಜೆ ಪಲ್ಲಕ್ಕಿ ಉತ್ಸವವು ಆರಂಭವಾಗಿ ಮೂಡಭಟ್ಕಳದ ಕೇತಪೈ ನಾರಾಯಣ ದೇವಸ್ಥಾನ ತಲುಪಿ ಅಲ್ಲಿಂದ ಹಿಂದಿರುಗಿ ಗಜಾನನ ಸ್ಟ್ರೀಟ್ ಮಾರ್ಗವಾಗಿ ಬರುವಾಗ ಸಂಜೆ ೭.೩೦ರ ಸುಮಾರಿಗೆ ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ಗೌಸ್ ಕುಟುಂಬ ವಾಸಿಸುವ ಕಂಪೌಂಡಿನಿಂದ ಕೆಲವು ಅನ್ಯ ಕೋಮಿನ ಮಕ್ಕಳು ಶ್ರೀ ದೇವರ ಮೂರ್ತಿ ಇರುವ ಪಲ್ಲಕ್ಕಿಯ ಮೇಲೆ ಕಲ್ಲು ಎಸೆದು ಗೊಂದಲ ಸೃಷ್ಟಿಸಿ ಭಯ ಹುಟ್ಟುಸುವ ಹಾಗೂ ಶಾಂತಿ ಭಂಗಕ್ಕೆ ಪ್ರಯತ್ನಿಸುವ ಕಾರ್ಯ ಮಾಡಿದ್ದಾರೆ. ಅವರ ಮೇಲೆ ಹಾಗೂ ಅವರಿಗೆ ಇಂತಹ ಶಿಕ್ಷಣ ನೀಡಿದ ಸಂಸ್ಥೆಯ ಮೇಲೆ ಹಾಗೂ ಗೌಸ್ ಕುಟುಂಬದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಲಾಗಿದೆ. ಡಿವೈಎಸ್ಪಿಗೆ ದೂರು ನೀಡಲಾಗಿದೆ.