ಸಾರಾಂಶ
ಕುಷ್ಟಗಿ:
ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ತೆಗೆಸಿರುವ ಪ್ರಕರಣ ಹಾಗೂ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪಟ್ಟಣದ ಬ್ರಾಹ್ಮಣ ಸಮಾಜ ಹಾಗೂ ಜನಿವಾರಧಾರಿ ಸಮಾಜದ ವತಿಯಿಂದ ಧರ್ಮ ರಕ್ಷಣೆಗಾಗಿ ಮೌನ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.ರ್‍ಯಾಲಿಯು ಪಟ್ಟಣದ ಶ್ರೀರಾಘವೇಂದ್ರ ಮಠದಿಂದ ಆರಂಭಗೊಂಡು ಬಸವೇಶ್ವರ ವೃತ್ತ, ಪುರಸಭೆ ಮುಂಭಾಗದ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಜನಿವಾರ ತೆಗೆಸಿರುವ ಪ್ರಕರಣ ಹಾಗೂ ಕಾಶ್ಮೀರದ ಪಹಲ್ಗಾಮ್‌ದಲ್ಲಿ ನಡೆದ ಉಗ್ರರ ದಾಳಿ ಖಂಡಿಸುವ ಮೂಲಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಸಮಾಜದ ಮುಖಂಡರು ಮಾತನಾಡಿ, ಕೆಇಎ ಅವರು ಸಿಇಟಿ ಪರೀಕ್ಷೆ ನಡೆಸುವ ವೇಳೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ್ದು ಖಂಡನೀಯವಾಗಿದೆ. ಇದೊಂದು ಧಾರ್ಮಿಕ ನಿಂದನೆ ಮತ್ತು ಭಾವನೆಗಳಿಗೆ ಧಕ್ಕೆ ತರುವ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸನಾತನ ಸಂಸ್ಕೃತಿಯ ಹಿಂದೂ ದೇಶ ನಮ್ಮದು. ಇಲ್ಲಿ ಅನೇಕ ರೀತಿಯ ಆಚರಣೆ, ಪದ್ಧತಿಗಳು ಇದ್ದು ಪರೀಕ್ಷಾ ವಸ್ತ್ರ ಸಂಹಿತೆಗೆ ಜನಿವಾರ ಸಂಬಂಧಪಡುವುದೇ ಇಲ್ಲ. ಜನಿವಾರದಿಂದ ಪರೀಕ್ಷೆಗೆ ಯಾವ ಹಾನಿಯಾಗುತ್ತಿತ್ತು. ಇದು ಜನಿವಾರ ಧರಿಸುವ ಸಮಾಜದಕ್ಕೆ ಮಾಡಿರುವ ಅಪಮಾನವಾಗಿದೆ. ಹಿಂದೂ ಸಮಾಜಕ್ಕೆ ಅಗೌರವ ತರುವ ನಡೆಯಾಗಿದೆ. ಮುಂದೆ ಈ ರೀತಿ ಆಗದಂತೆ ಸರ್ಕಾರ ನೋಡಿಕೊಳ್ಳಬೇಕೆಂದು ಎಚ್ಚರಿಕೆ ಸಂದೇಶ ರವಾನಿಸಿದರು.ಮುಂದಿನ ದಿನಗಳಲ್ಲಿ ಧಾರ್ಮಿಕತೆ, ಸನಾತನ ಧರ್ಮ ಹತ್ತಿಕ್ಕುವ ಕೆಲಸವಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಅಲ್ಪಸಂಖ್ಯಾತರ ಓಲೈಕೆಗೆ ಸರ್ಕಾರ ಕಸರತ್ತು ಮಾಡುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಹಿಂದೂಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ. ಇದು ಅಮಾನವೀಯ ಘಟನೆಯಾಗಿದ್ದು ಉಗ್ರಗಾಮಿಗಳನ್ನು ಮಟ್ಟಹಾಕಲು ಅವರಿಗೆ ಕುಮ್ಮಕ್ಕು ಕೊಡುವವರಿಗೂ ಸಹ ಉಗ್ರ ಶಿಕ್ಷೆ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಬ್ರಾಹ್ಮಣ ಸಮಾಜ ಹಾಗೂ ವಿವಿಧ ಸಮಾಜದವರು ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಟ್ಟು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದರು.
ಈ ವೇಳೆ ಜನಿವಾರಧಾರಿ ಸಮಾಜದ ಪ್ರಮುಖರಾದ ತಿಮ್ಮಪ್ಪಯ್ಯ ದೇಸಾಯಿ, ಶ್ರೀನಿವಾಸ ಜೋಶಿ, ಜಯತೀರ್ಥ ಸೌದಿ, ಜೆ.ಜೆ. ಆಚಾರ, ಶ್ರೀನಿವಾಸ ಚಳಗೇರಿ, ಮಾಲತೇಶ ನಾಡಿಗೇರ, ಶ್ರೀರಂಗ ಬಳೂಟಗಿ, ಭೀಮಸೇನರಾವ ಕುಲಕರ್ಣಿ, ವಾದಿರಾಜ ಆಚಾರ್, ಶ್ರೀಧರಾಚಾರ್ಯ ಪುರಾಣಿಕ, ಪಲ್ಲಣ್ಣ ದಿಗ್ಗಾವಿ, ನರಸಿಂಹ ಕಾರಟಗಿ, ವೀರೇಶ ಬಂಗಾರಶೆಟ್ರು, ಅಮರೇಶ ಶೆಟ್ಟರ್, ಹನುಮಂತ ಬಾಬು, ಮನೋಹರ್ ಶಿರಗುಂಪಿ, ಬಸವರಾಜ್ ವಾಸವಿ ಸಪ್ಲೈಯರ್, ಉಮೇಶ ಶೆಟ್ಟರ, ಮಾನಪ್ಪ ಕಮ್ಮಾರ, ನಾಗರಾಜ್ ಬಡಿಗೇರ, ಪಾಂಡುರಂಗ ಗೊಂದಳ, ಉಮೇಶ ಯಾದವ, ರವೀಂದ್ರ ಬಾಕಳೆ, ವಿಠ್ಠಲ್ ದಲಭಂಜನ್, ಅಮೃತ ರಾಜ್ ಜ್ಞಾನ ಮೋಟೆ, ಅಮರ್ಚಂದ್ ಜೈನ್, ಅಭಿನಂದನ ಗೋಗಿ, ಮೇಘಾ ದೇಸಾಯಿ, ಕೃಷ್ಣವೇಣಿ ಆಚಾರ್, ಜ್ಯೋತಿ ಆಶ್ರಿತ್, ಲಕ್ಷ್ಮಿ ತಿಕೋಟಿಕರ, ಅರುಂಧತಿ ಜೋಶಿ, ಸ್ಫೂರ್ತಿ ಲಕ್ಕುಂದಿನ್ನಿ, ಸುಮಾ ನಾಯಕ, ಭವಾನಿ ಪುರಾಣಿಕ ಸೇರಿದಂತೆ ಅನೇಕ ಸಮಾಜದವರು ಹಾಗೂ ಹನುಮಸಾಗರದ ಮುಖಂಡರು ಇದ್ದರು.