ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸ್ಕ್ಯಾನ್ ಗೆ ಬ್ರೇಕ್ !

| Published : Dec 19 2024, 12:30 AM IST

ಸಾರಾಂಶ

ಈ ಹಿಂದೆ ಆಧಾರ್ ಕಾರ್ಡ್, ಬಿಪಿಎಲ್, ಎಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ತೋರಿಸಿದರೆ ಉಚಿತವಾಗಿ ತಕ್ಷಣವೇ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು.

ಶಿವಕುಮಾರ ಕುಷ್ಟಗಿ ಗದಗ

ರಾಜ್ಯಾದ್ಯಂತ ಆತಂಕಕ್ಕಿಡು ಮಾಡಿದ್ದ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿನ ಬಾಣಂತಿಯರ ಸಾವಿನಿಂದ ಬಡವರು ಸರ್ಕಾರಿ ಆಸ್ಪತ್ರೆ ನೋಡಿದರೆ ಭಯಪಡುವಂತಾಗಿದೆ. ಈ ಮಧ್ಯೆ ಸರ್ಕಾರ ಜಿಲ್ಲೆ ಮತ್ತು ಇನ್ನುಳಿದ ದೊಡ್ಡ ಆಸ್ಪತ್ರೆಗಳಲ್ಲಿ ಇದುವರೆಗೂ ಲಭ್ಯವಿದ್ದ ಉಚಿತ ಸ್ಕ್ಯಾನ್ ಸೌಲಭ್ಯ ಸ್ಥಗಿತಗೊಳಿಸಿದ್ದರಿಂದ ಬಡವರು ಮತ್ತಷ್ಟು ಪರದಾಡುವಂತಾಗಿದೆ.

27-11-2024ರ ಸರ್ಕಾರದ ನಡಾವಳಿ ಉಲ್ಲೇಖಿಸಿ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಅನುಮತಿ ಸಿಕ್ಕರೆ ಮಾತ್ರ ಉಚಿತ ಸ್ಕ್ಯಾನ್ ಪಡೆಯಲು ಸಾಧ್ಯ ಎಂದು ಎಲ್ಲ ಆಸ್ಪತ್ರೆಗಳಿಗೆ ತಿಳಿಸಿದ್ದಾರೆ. ಇಲ್ಲವಾದರೆ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಖಾಸಗಿ ಸಹಭಾಗಿತ್ವದ ಸ್ಕ್ಯಾನ್ ಸೆಂಟರ್ ಗಳಲ್ಲಿ ಸಾವಿರಾರು ಹಣ ಖರ್ಚು ಮಾಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕಿದೆ.

ಅನುಮತಿ ಕಡ್ಡಾಯ: ಈ ಹಿಂದೆ ಆಧಾರ್ ಕಾರ್ಡ್, ಬಿಪಿಎಲ್, ಎಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ತೋರಿಸಿದರೆ ಉಚಿತವಾಗಿ ತಕ್ಷಣವೇ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಈ ರೀತಿಯ ಸ್ಕ್ಯಾನ್ ಮಾಡುವ ಸೆಂಟರ್ ಪಿಪಿಪಿ ಮಾದರಿಯಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ಸ್ಥಾಪನೆ ಮಾಡಲಾಗಿತ್ತು. ಆದರೆ, ಈಗ ಎಬಿಆರ್ ಕೆ (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ)ದ ಅನುಮತಿ ಕಡ್ಡಾಯಗೊಳಿಸಿದ್ದಾರೆ. ಈ ಅನುಮತಿ ದೊರೆತರೆ ಮಾತ್ರ ಸ್ಕ್ಯಾನ್ ಇಲ್ಲವಾದರೆ ಎಷ್ಟೇ ಬಡವರಿದ್ದರೂ ಹಣ ಭರಿಸಿ ಸೌಲಭ್ಯ ಪಡೆಯಬೇಕು ಎನ್ನುವ ನಿಯಮ ಸರ್ಕಾರ ಜಾರಿಗೊಳಿಸಿದೆ.

ಗದಗನ ಜಿಮ್ಸ್ ಆಸ್ಪತ್ರೆ ಸೇರಿದಂತೆ ರಾಜ್ಯದ 15 ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಹಾಗೂ 5 ಜಿಲ್ಲಾಸ್ಪತ್ರೆಗಳಲ್ಲಿ ಎಂಆರ್ ಐ ಸ್ಕ್ಯಾನ್ ಮಷಿನ್ 2017-18 ರಿಂದ ಅಳವಡಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಸರ್ಕಾರಿ ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಕಾಯಿಲೆಗೆ ತಕ್ಕಂತೆ ಸಿಟಿ ಮತ್ತು ಎಂಆರ್ ಐ ಸ್ಕ್ಯಾನ್ ಉಚಿತವಾಗಿ ಮಾಡುತ್ತಿದ್ದರು. ನಂತರ‌ ಖಾಸಗಿ ಸಹಭಾಗಿತ್ವದವರು ಸರ್ಕಾರದಿಂದ ಅದರ ಮೊತ್ತ (ಪಿಪಿಪಿ ಮಾದರಿಯಲ್ಲಿ) ಭರಿಸಿಕೊಳ್ಳುತ್ತಿದ್ದರು. ಇದರಿಂದ ಮಧ್ಯಮ ಹಾಗೂ ಬಡ ವರ್ಗದವರಿಗೆ ಸಾಕಷ್ಟು‌ ಅನುಕೂಲವಾಗಿತ್ತು, ಈಗ ಅದು ಸ್ಥಗಿತಗೊಂಡಿದೆ.

ಬೇಕಾಬಿಟ್ಟಿ ತಡೆಗೆ ಕ್ರಮ: ಅನಗತ್ಯವಾಗಿ ರೋಗಿಗಳನ್ನು ಸ್ಕ್ಯಾನ್ ಗೆ ಒಳಪಡಿಸುತ್ತಿರುವುದು, ರೋಗಿಗೆ ಅಗತ್ಯತೆ ಇಲ್ಲದಿದ್ದರೂ (Multiple Scans) ಸ್ಕ್ಯಾನ್‌ ಮಾಡಿಸುತ್ತಿರುವುದು, ಸ್ಕ್ಯಾನ್ ಗೆ ಸಂಬಂಧಿಸಿದ ಪ್ರಯೋಗಾಲಯದ ಪರೀಕ್ಷೆ ಮಾಡಿಸದೇ ರೆಫೆರ್ ಮಾಡುತ್ತಿರುವುದು, ತಮ್ಮ ತಜ್ಞತೆಗೆ ಸಂಬಂಧವಿಲ್ಲದ ಸ್ಕ್ಯಾನ್ ಗೆ ಶಿಫಾರಸ್ಸು ನೀಡುವುದು ಸೇರಿದಂತೆ ಸ್ಕ್ಯಾನಿಂಗ್ ನಲ್ಲಿ ಆಗುತ್ತಿರುವ ಲೋಪ ತಪ್ಪಿಸುವುದು ಸೇರಿದಂತೆ ಈ ಯೋಜನೆಯಲ್ಲಿ ಶಿಸ್ತನ್ನು ತರುತ್ತೇವೆ ಎಂಬ ಕಾರಣ ನೀಡಿ ಪ್ರತಿ ಸ್ಕ್ಯಾನ್ ಗೂ ಸರ್ಕಾರಿ ದರ ನಿಗದಿ ಮಾಡಿರುವುದು ಬಡಜನರ ಜೀವಕ್ಕೆ ಕುತ್ತಾಗಿ ಪರಿಣಮಿಸಲಿದೆ.

ಹೊಸ ನಿಯಮದ ಪ್ರಕಾರ ಸೌಲಭ್ಯ ಬೇಕಾದಲ್ಲಿ ಎಬಿಆರ್ ಕೆ ಮೂಲಕ ರೋಗಿಯು ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಅರ್ಜಿ ಹಾಕಬೇಕು. ನಂತರ ಪರಿಣಿತ ವೈದ್ಯರ ತಂಡ ವೈದ್ಯರು ಬರೆದಿರುವ ಸ್ಕ್ಯಾನ್ ಅವಶ್ಯಕತೆ ಇದೆಯೋ ಇಲ್ಲವೋ? ಎಂದು ಪರಿಶೀಲಿಸಿ ಅವಶ್ಯವಿದ್ದರೆ ಮಾತ್ರ ಶಿಫಾರಸ್ಸು ಮಾಡಿದ ನಂತರವೇ ಉಚಿತ ಸ್ಕ್ಯಾನ್ ಸೌಲಭ್ಯ ಸಿಗಲಿದೆ. ರೋಗಿಯನ್ನು ಪರೀಕ್ಷಿಸಿದ ವೈದ್ಯರು, ಸ್ಕ್ಯಾನ್ ಬರೆದುಕೊಟ್ಟ ನಂತರವೂ ಎಬಿಆರ್ ಕೆ (ABRK) ಯಲ್ಲಿ ಒಪ್ಪಿಗೆ ಸಿಗದೇ ಇದ್ದಲ್ಲಿ ಆ ಸ್ಕ್ಯಾನಿಂಗ್ ವೆಚ್ಚ ಪರೀಕ್ಷಿಸಿದ ವೈದ್ಯರು ಇಲ್ಲವೇ ರೋಗಿಯೇ ಭರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಸರ್ಕಾರದ ಹೊಸ ನಿಯಮದಂತೆ ಎಬಿಆರ್ ಕೆ ಮೂಲಕ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ರೋಗಿಗೆ ಗಂಭೀರತೆ ಇರಲಿ ಅಥವಾ ಇರದೇ ಇರಲಿ, ಆತನಿಗೆ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆ ನಿರಂತರ ಇದ್ದೇ ಇರುತ್ತದೆ. ಸ್ಕ್ಯಾನ್ ಸಲುವಾಗಿ ರೋಗಿಗೆ ಚಿಕಿತ್ಸೆ ಕೊಡುವುದನ್ನು ವೈದ್ಯರ ವಿಳಂಬ ಮಾಡುವುದಿಲ್ಲ. ಮುಖ್ಯವಾಗಿ (ABRK) ಎಬಿಆರ್ ಕೆ ಮೂಲಕ ಒಪ್ಪಿಗೆ ಪಡೆಯೋದಕ್ಕೂ ಸಹ ಬಹಳಷ್ಟು ಸಮಯ ಹಿಡಿಯುವದಿಲ್ಲ ಎಂದು ಜೀಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.ಈ ಹಿಂದೆ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಈಗ ಎಬಿಆರ್ ಕೆ ಅನುಮೋದನೆ ತೆಗೆದುಕೊಂಡು ಬಂದರೆ ಮಾತ್ರ ಉಚಿತ ಸ್ಕ್ಯಾನಿಂಗ್ ಸಿಗುತ್ತಿದೆ. ಇದರಿಂದ ತುರ್ತು ಚಿಕಿತ್ಸೆ ಅವಶ್ಯವಿರುವ ರೋಗಿಗಳು ನಾಲ್ಕೈದು ತಾಸು ಕಾಯಬೇಕಾಗಿದೆ. ಗದಗ ಜಿಮ್ಸ್ ಹೊಸ ಕಟ್ಟಡದಲ್ಲಿಯೂ ಸ್ಕ್ಯಾನಿಂಗ್ ಸೆಂಟರ್ ಇದೆ, ಅಲ್ಲಿಯೂ ಉಚಿತವಾಗಿ ಸ್ಕ್ಯಾನಿಂಗ್ ಮಾಡುತ್ತಿಲ್ಲ. ಸರ್ಕಾರ ಉಚಿತ ಸ್ಕ್ಯಾನಿಂಗ್ ರದ್ದುಪಡಿಸಿ ದರ ನಿಗದಿಯ ಆದೇಶ ಹೊರಡಿಸಿದ್ದರೆ, ಕೂಡಲೇ ಆ ಆದೇಶ ರದ್ದು ಪಡಿಸಿ ಉಚಿತ ಸ್ಕ್ಯಾನಿಂಗ್ ಆದೇಶ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಮುತ್ತು ಬಿಳಿಯಲಿ ಹೇಳಿದರು.