ಉಗಾರ-ಕುಡಚಿ ಮಾರ್ಗದ ಸೇತುವೆ ಜಲಾವೃತ

| Published : Jul 24 2024, 12:25 AM IST

ಸಾರಾಂಶ

ರ್ನಾಟಕ- ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಉಗಾರ-ಕುಡಚಿ ಮಾರ್ಗದ ನಡುವಿನ ಸೇತುವೆಯ ಮೇಲೆ 3 ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ಸೋಮವಾರ ತಡ ರಾತ್ರಿಯಿಂದಲೇ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಮಹಾರಾಷ್ಟ್ರ ಪಶ್ಚಿಮಘಟ್ಟ ಹಾಗೂ ಕೃಷ್ಣಾ ತೀರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಕರ್ನಾಟಕ- ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಉಗಾರ-ಕುಡಚಿ ಮಾರ್ಗದ ನಡುವಿನ ಸೇತುವೆಯ ಮೇಲೆ 3 ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ಸೋಮವಾರ ತಡ ರಾತ್ರಿಯಿಂದಲೇ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ನದಿತೀರದ ತಗ್ಗು ಪ್ರದೇಶ ಜಲಾವೃತಗೊಂಡು ಜಮೀನುಗಳಿಗೆ ನೀರು ನುಗ್ಗಿದೆ. ಕುಡಚಿ ಸೇತುವೆ ಮುಳುಗಡೆಯಾಗಿ ಸಂಚಾರ ಬಂದ್ ಆಗಿದೆ. ಮಂಗಳವಾರ ಸಂಜೆಯಿಂದಲೇ ಕಾಗವಾಡ ಹಾಗೂ ಕುಡಚಿ ಪೊಲೀಸರು ಎರಡು ಬದಿಗೆ ಬ್ಯಾರಿಕೇಡ್‌ ಹಾಕಿ ವಾಹನಗಳು ಓಡಾದಂತೆ ಬಂದೋಬಸ್ತ್‌ ಏರ್ಪಡಿಸಿದ್ದಾರೆ.

ಗುಡ್ಡ ಸುತ್ತಿ ಮೈಲಾರಕ್ಕೆ ಹೋದಂತೆ:

ಬಾಗಲಕೋಟೆ, ಜಮಖಂಡಿ, ಮುಧೋಳ, ಮಹಾಲಿಂಗಪುರ, ಹಾರೂಗೇರಿ ಸೇರಿದಂತೆ ಹಲವಾರು ಪಟ್ಟಣಗಳಿಂದ ವ್ಯಾಪಾರ ವಹಿವಾಟಿಗೆ ಈ ರಸ್ತೆ ಬಹಳ ಅನುಕೂಲವಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಕಡಿತಗೊಂಡಿರುವುದರಿಂದ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ, ಮಾರ್ಗವಾಗಿ 50 ಕಿ.ಮೀ ಹೆಚ್ಚಿಗೆ ಕ್ರಮಿಸಿ ಹೋಗುವ ಸ್ಥಿತಿ ಬಂದೋದಗಿದೆ.

ಉಗಾರ ಕುಡಚಿ ಮಾರ್ಗದ ಕೃಷ್ಣಾ ನದಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಹಲವು ನಡೆಯುತ್ತಿದ್ದರೂ ಆಮೆಗತಿಯಲ್ಲಿ ಸಾಗಿದ್ದರಿಂದ ಅರ್ಧಕ್ಕೆ ನಿಂತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

ನೀರಿನ ಮಟ್ಟ; ಮಹಾರಾಷ್ಟ್ರದ ಕೋಯ್ನಾ ಜಲಾಶಯದಲ್ಲಿ 64.55 ಟಿಎಂಸಿ (ಶೇ.61.33ರಷ್ಟು) ನೀರು ಸಂಗ್ರಹವಾಗಿದೆ ಎಂದು ನೀರಾವರಿ ಇಲಾಖೆಯ ನಿವೃತ್ತ ಅಭಿಯಂತರ ಅರುಣಕುಮಾರ ಯಲಗುದ್ರಿ ತಿಳಿಸಿದ್ದಾರೆ.