ರೈಲ್ವೆ ಕೆಳ ಸೇತುವೆ ನಿರ್ಮಾಣವಾದರೂ ದಾರಿಯೇ ಇಲ್ಲವಯ್ಯ

| Published : Feb 10 2024, 01:51 AM IST

ಸಾರಾಂಶ

ಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆ. ಇದಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದು ನಾಲ್ಕು ವರ್ಷವಾದರೂ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿಲ್ಲ. ಈಗಾಗಲೇ ಕೆಳಸೇತುವೆ ನಿರ್ಮಾಣವಾಗಿದ್ದರೂ ತಂತಿಬೇಲಿ ಹಾಕಲಾಗಿದೆ. ಪರಿಣಾಮ ಜನ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿದೆ. ಇದು ಈಗ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಸುಮಾರು ವರ್ಷಗಳ ಹೋರಾಟದ ಫಲವಾಗಿ ಕೊಪ್ಪಳ ಮತ್ತು ಭಾಗ್ಯನಗರ ಮಧ್ಯದ ರೈಲ್ವೆ ಗೇಟ್ ನಂ.63ಕ್ಕೆ ಕೆಳ ಸೇತುವೆಯನ್ನೇನೋ ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ಆದರೆ, ನಿರ್ಮಾಣವಾದ ಕೆಳಸೇತುವೆಗೆ ದಾರಿಯೇ ಇಲ್ಲದಾಗಿದೆ.ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆ. ಇದಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದು ನಾಲ್ಕು ವರ್ಷವಾದರೂ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿಲ್ಲ. ಈಗಾಗಲೇ ಕೆಳಸೇತುವೆ ನಿರ್ಮಾಣವಾಗಿದ್ದರೂ ತಂತಿಬೇಲಿ ಹಾಕಲಾಗಿದೆ. ಪರಿಣಾಮ ಜನ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿದೆ. ಇದು ಈಗ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ.ಏನಿದು ಸಮಸ್ಯೆ?:ರೈಲ್ವೆ ಗೇಟ್ 63ಕ್ಕೆ ಕೆಳ ಸೇತುವೆ ನಿರ್ಮಾಣ ಮಾಡಲಾಗಿದೆ. ಸೇತುವೆ ನಿರ್ಮಾಣವಾದಂತೆ ಈಗ ಕಿರಿದಾದ ರಸ್ತೆಯನ್ನು ಎರಡೂ ಬದಿ ಅಗಲೀಕರಣ ಮಾಡಬೇಕಾಗಿದೆ. ಆದರೆ, ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಅಭಿವೃದ್ಧಿ ಅಡಿ ಇದಕ್ಕೆ ಬೇಕಾದ ಅನುದಾನ ನೀಡಬೇಕಾಗಿದೆ. ಇದುವರೆಗೂ ಅನುದಾನ ನೀಡದೇ ಇರುವುದರಿಂದ ನಾಲ್ಕು ವರ್ಷಗಳ ಕಾಲ ಕಾದು ನೋಡಿದ ರೈಲ್ವೆ ಇಲಾಖೆ ಈಗ ಸೇತುವೆ ನಿರ್ಮಿಸಿ ತಂತಿಬೇಲಿ ಹಾಕಿದೆ. ಸೇತುವೆ ನಿರ್ಮಾಣ ಮಾಡಿದರೂ ಸಂಚಾರಕ್ಕೆ ಬಾರದಂತಾಗಿದೆ.ಪ್ರತಿಭಟನೆಗೆ ಸಜ್ಜು:ರೈಲ್ವೆ ಗೇಟ್ 63 ಹೋರಾಟ ಸಮಿತಿ ಈಗ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೆ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಭೇಟಿಯಾಗಲು ತೀರ್ಮಾನಿಸಿದೆ. ಶಾಸಕರ ಮೂಲಕವೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕೂಡಲೇ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡುವುದು. ಹಾಗೊಂದು ವೇಳೆ ಪ್ರಯತ್ನ ಕೈಗೂಡದಿದ್ದರೆ ಹೋರಾಟ ಮಾಡಲು ಚಿಂತನೆ ನಡೆಸಿದೆ. ಭಾಗ್ಯನಗರ ಮತ್ತು ಕೊಪ್ಪಳ ಭಾಗದಲ್ಲಿಯೂ ರಸ್ತೆಗಾಗಿ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಾಗಿದೆ.

ರಾಜ್ಯ ಸರ್ಕಾರ ಕೆಲಸ ಮಾಡಲಿ:

ರೈಲ್ವೆ ಗೇಟ್ ನಿರ್ಮಾಣಕ್ಕಾಗಿ ಕಳೆದ ನಾಲ್ಕು ವರ್ಷಗಳ ಕಾಲ ಕಳೆದರೂ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡಿಲ್ಲ. ಹೀಗಾಗಿ, ಅನಿವಾರ್ಯವಾಗಿ ಸೇತುವೆ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರದಿಂದ ಆಗಬೇಕಾಗಿರುವ ಕಾರ್ಯ ನಡೆಯಲಿ ಎನ್ನುತ್ತಾರೆ ಕೊಪ್ಪಳ ಸಂಸದ ಸಂಗಣ್ಣ ಕರಡಿ.ಹೋರಾಟ ಮಾಡುತ್ತೇವೆ:

ರೈಲ್ವೆ ಸೇತುವೆ ನಿರ್ಮಾಣ ಮಾಡಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೆ ಶಾಸಕರಿಗೆ ಮನವಿ ಮಾಡುತ್ತೇವೆ. ಕೊಡಿಸದಿದ್ದರೆ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ರೈಲ್ವೆ ಗೇಟ್ 63 ಹೋರಾಟ ಸಮಿತಿಯ ಪದಾಧಿಕಾರಿ ಬಸವರಾಜ ನಾಯಕ.ವಾರದೊಳಗೆ ಆದೇಶ:

ರೈಲ್ವೆ ಗೇಟ್ 63ಕ್ಕೆ ರಾಜ್ಯ ಸರ್ಕಾರದಿಂದ ಕೊಡಬೇಕಾದ ಅನುದಾನ ಮಂಜೂರು ಮಾಡಿಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ರುಜುವಿನೊಂದಿಗೆ ಪತ್ರವನ್ನು ಮೂಲಭೂತ ಸೌಕರ್ಯ ಇಲಾಖೆಗೆ ಸಲ್ಲಿಸಲಾಗಿದೆ. ವಾರದೊಳಗೆ ಆದೇಶವಾಗಲಿದೆ ಎನ್ನುತ್ತಾರೆ ಶಾಸಕ ರಾಘವೇಂದ್ರ ಹಿಟ್ನಾಳ.