1ರಿಂದ 10 ಕನ್ನಡದಲ್ಲೇ ಕಡ್ಡಾಯ ಶಿಕ್ಷಣಕ್ಕೆ ಸುಗ್ರೀವಾಜ್ಞೆ ತರಲಿ: ಡಾ.ಪ್ರಭಾಕರ ಶಿಶಿಲ ಆಶಯ

| Published : Feb 21 2025, 11:46 PM IST

1ರಿಂದ 10 ಕನ್ನಡದಲ್ಲೇ ಕಡ್ಡಾಯ ಶಿಕ್ಷಣಕ್ಕೆ ಸುಗ್ರೀವಾಜ್ಞೆ ತರಲಿ: ಡಾ.ಪ್ರಭಾಕರ ಶಿಶಿಲ ಆಶಯ
Share this Article
  • FB
  • TW
  • Linkdin
  • Email

ಸಾರಾಂಶ

ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಕಡ್ಡಾಯ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂದು ಹಿರಿಯ ಸಾಹಿತಿ ಡಾ.ಬಿ.ಪ್ರಭಾಕರ ಶಿಶಿಲ ಆಶಯ ವ್ಯಕ್ತಪಡಿಸಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಶುಕ್ರವಾರ ಎರಡು ದಿನಗಳ ದ.ಕ.ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ (ಬಿ.ಎಂ.ಇದಿನಬ್ಬ ವೇದಿಕೆ, ಶ್ರೀನಿವಾಸ ಮಲ್ಯ ಸಭಾಂಗಣ) ಕೊಣಾಜೆ

ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಕಡ್ಡಾಯ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂದು ಹಿರಿಯ ಸಾಹಿತಿ ಡಾ.ಬಿ.ಪ್ರಭಾಕರ ಶಿಶಿಲ ಆಶಯ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಶುಕ್ರವಾರ ಎರಡು ದಿನಗಳ ದ.ಕ.ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಐರೋಪ್ಯ ದೇಶಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿ ಪ್ರಾಂತ್ಯದ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅದನ್ನೇ ಶಿಕ್ಷಣದಲ್ಲಿ ಬಳಸುತ್ತಾರೆ. ಇಂಗ್ಲಿಷ್‌ ಭಾಷೆಯನ್ನು ಲಿಂಕ್ ಭಾಷೆಯಾಗಿ ಬಳಕೆ ಮಾಡುತ್ತಾರೆ. ಯುನೆಸ್ಕೋ ಕೂಡ ಕನ್ನಡ ಭಾಷೆಗೆ ಬಹಳ ವರ್ಷಗಳ ಬಳಿಕ ಅಪಾಯದ ಮಾತನ್ನು ಹೇಳಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಗ್ಗೆ ಅವಜ್ಞೆ ಈಗಲೂ ಮುಂದುವರಿದಿದೆ. ಆದ್ದರಿಂದ 1ರಿಂದ 10ನೇ ತರಗತಿ ವರೆಗೆ ಕನ್ನಡದಲ್ಲೇ ಶಿಕ್ಷಣ ನೀಡುವ ಬಗ್ಗೆ ಸುಗ್ರೀವಾಜ್ಞೆಯನ್ನು ಸರ್ಕಾರ ಪಾಸು ಮಾಡಿ ರಾಜ್ಯಪಾಲರಿಗೆ ಕಳುಹಿಸಬೇಕು. ರಾಜ್ಯಪಾಲರು ಅಂಕಿತ ಹಾಕುವ ಭರವಸೆ ಇದೆ ಎಂದರು.

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಎರಡು ವರ್ಷಗಳ ಹಿಂದೆ 50 ಸಾವಿರ ಶಿಕ್ಷಕರು ನಿವೃತ್ತರಾಗಿದ್ದರು, 2026ರಲ್ಲಿ 38 ಸಾವಿರ ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಬದಲಿ ಶಿಕ್ಷಕರ ನೇಮಕ ಆಗದಿದ್ದರೆ, ಅಲ್ಲಿಗೆ ಸರ್ಕಾರಿ ಕನ್ನಡ ಶಾಲೆಗಳೂ ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕೋಮುವಾದ ಬೇಡ:

ಶಾಲಾ ಕಾಲೇಜು ಮಕ್ಕಳಲ್ಲಿ ಕೋಮುವಾದಕ್ಕಿಂತ ಕತ್ತಿ, ದೊಣ್ಣೆ ಹಿಡಿಯುವ ರಾಜಕೀಯ ಕೋಮುವಾದ ಗಂಭೀರ ಸಂಗತಿಯಾಗಿದೆ. ಜಾತಿ ಮುನ್ನೆಲೆಗೆ ಬಂದ ಕೂಡಲೇ ಕಲೆ, ಸಂಸ್ಕೃತಿ ಬದಿಗೆ ತಳ್ಳಲ್ಪಟ್ಟಿದೆ. ಕೋಮುವಾದದ ಇನ್ನೊಂದು ಸ್ವರೂಪವೇ ಸಂವಿಧಾನವನ್ನು ಬದಲಾಯಿಸುವುದು. ಪೀಠಾಧಿಪತಿಗಳು ಜಗದ್ಗುರುಗಳಾಗುವ ಬದಲು ಅವರ ಬಾಯಿಯಿಂದಲೇ ಕೋಮುವಾದದ ಮಾತು ಹೊರಬರುತ್ತಿರುವುದು ಖೇದಕರ ಎಂದರು.

ಪಂಪನಿಂದ ಎಡಪಂಥೀಯ ಹೋರಾಟ:

ಎಡ-ಬಲ ಪಂಥದ ವಿರುದ್ಧ ದೊಡ್ಡ ಹೋರಾಟವೇ ಪಂಪನ ಕಾಲದಿಂದ ನಡೆಯುತ್ತಿದೆ. ಪಂಪ ಎಡಪಂಥೀಯ ಹೋರಾಟಗಾರನಾಗಿದ್ದು, ಅಲ್ಲಿಂದ ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಸಿದ್ಧಲಿಂಗಯ್ಯ ವರೆಗೂ ಹೋರಾಟ ನಡೆಯುತ್ತಲೇ ಇದೆ. ಕನ್ನಡ ಸಾಹಿತ್ಯ ಜಾತೀಯ ವ್ಯವಸ್ಥೆಯನ್ನು ವಿರೋಧಿಸುತ್ತಲೇ ಬಂದಿದೆ. ಪುಸ್ತಕೋದ್ಯಮ ಎನ್ನುವುದು ಸಂಸ್ಕೃತಿಯ ಭಾಗವಾಗಬೇಕು. ಲೇಖಕರು ಇದಕ್ಕೆ ಧ್ವನಿಯಾಗಬೇಕು. ಪ್ರತಿ ಮನೆಗಳಲ್ಲಿ ಪುಟ್ಟ ಗ್ರಂಥಾಲಯ ಇರಲಿ ಎಂದರು.

ಶಿಕ್ಷಣ, ಸಾಲಕ್ಕೆ ಚಿನ್ನ ಬಳಸಿ: ಧಾರ್ಮಿಕ ಕೇಂದ್ರಗಳಲ್ಲಿರುವ ಚಿನ್ನವನ್ನು ಪುರೋಹಿತಶಾಹಿಗಳು ದೋಚುತ್ತಿದ್ದಾರೆ, ಬದಲು ಅದನ್ನೇ ಶಿಕ್ಷಣಕ್ಕೆ, ದೇಶದ ಸಾಲ ನಿವಾರಣೆಗೆ ಬಳಲು ಯೋಚಿಸಿದರೆ ಉತ್ತಮವಿತ್ತು. ಭಾರತ 185 ಲಕ್ಷ ಕೋಟಿ ರು.ಗಳ ಸಾಲ ಹೊಂದಿದ್ದು, ಒಬ್ಬೊಬ್ಬರ ಮೇಲೆ 1.1 ಲಕ್ಷ ರು. ಸಾಲ ಇದೆ. ಈ ಮಧ್ಯೆ ದೊಡ್ಡ ಕೈಗಾರಿಕೋದ್ಯಮಿಗಳ 17 ಲಕ್ಷ ಕೋಟಿ ಸಾಲದ ಮೊತ್ತವನ್ನು ಕೇಂದ್ರ ಮನ್ನಾ ಮಾಡುತ್ತದೆ. ಮಲ್ಯ, ನೀರವ್‌ ಮೋದಿ, ಗುಜರಾತ್‌ ಉದ್ಯಮಿಗಳ ಇಂತಹ ಸಂಪತ್ತನ್ನು ಮನ್ನಾ ಮಾಡುವುದರಿಂದ ರೈತರಿಗೆ ಏನೂ ಪ್ರಯೋಜನ ಇಲ್ಲದಂತಾಗಿದೆ ಎಂದು ಅವರು ಟೀಕಿಸಿದರು.

--------------ಯಕ್ಷಗಾನ ರಾಜ್ಯದ ಕಲೆಯಾಗಲಿ: ಡಾ.ಪ್ರಭಾಕರ ಶಿಶಿಲ

ಯಕ್ಷಗಾನದಿಂದ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ಕೋಮು ಸೌಹಾರ್ದತೆಯ ಸಾಧ್ಯತೆ ಇದೆ. ಅದರಲ್ಲಿ ಕೋಮು ಸೌಹಾರ್ದತೆಯ ಪ್ರಸಂಗಗಳೂ ಹಾಗೆಯೇ ಮುಂದುವರಿಯಬೇಕು. ಕರಾವಳಿಯಲ್ಲಿ 21 ಮಂದಿ ಶಾಸಕರಿದ್ದರೂ ಯಕ್ಷಗಾನವನ್ನು ರಾಜ್ಯದ ಕಲೆಯಾಗಿ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ನಾನು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಅದನ್ನು ಸಂಸ್ಕೃತಿ ಇಲಾಖೆಯ ಮುಖ್ಯಕಾರ್ಯದರ್ಶಿಗೆ ಕಳುಹಿಸಲಾಗಿದೆ ಎಂಬ ಉತ್ತರ ಬಂದಿದೆ. ಆದರೆ ಕಾರ್ಯದರ್ಶಿಯಿಂದ ಯಾವ ಉತ್ತರವೂ ನನಗೆ ಬರಲಿಲ್ಲ. ಕರಾವಳಿಯ ರಾಜಕಾರಣಿಗಳೇ ಯಕ್ಷಗಾನ ಬಣ್ಣ ಹಾಕಿ ಕುಣಿದಿದ್ದಾರೆ. ಕನಿಷ್ಠ ಸ್ಪೀಕರ್‌ ಅವರಾದರೂ ಯಕ್ಷಗಾನವನ್ನು ರಾಜ್ಯ ಕಲೆಯಾಗಿ ಮಾಡುವ ಬಗ್ಗೆ ಪ್ರಯತ್ನಿಸುತ್ತಾರೆ ಎಂದು ಡಾ.ಪ್ರಭಾಕರ ಶಿಶಿಲ ವಿಶ್ವಾಸ ವ್ಯಕ್ತಪಡಿಸಿದರು. ಮುದ್ರಿತ ಪ್ರತಿ ನೋಡದೆ ನಿರರ್ಗಳ ಭಾಷಣ!

ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಸರ್ವಾಧ್ಯಕ್ಷರು ಅಧ್ಯಕ್ಷ ಭಾಷಣವನ್ನು ಪೂರ್ತಿಯಾಗಿ ಓದುವುದು ವಾಡಿಕೆ. ಇಲ್ಲವೇ ಮುದ್ರಿತ ಪ್ರತಿಯನ್ನು ಹಿಡಿದುಕೊಂಡೇ ಅಲ್ಲಲ್ಲಿ ನೇರ ಮಾತನಾಡುವುದೂ ಇದೆ. ಆದರೆ ಸಮ್ಮೇಳನಾಧ್ಯಕ್ಷ ಡಾ.ಪ್ರಭಾಕರ ಶಿಶಿಲ ಅವರು ಈ ಎಲ್ಲದಕ್ಕೂ ಅಪವಾದ. ಸುಮಾರು 1.35 ಗಂಟೆಗಳ ಕಾಲ ಅಧ್ಯಕ್ಷ ಪೀಠದ ಎದುರೇ ನಿಂತುಕೊಂಡು ಮುದ್ರಿತ ಪ್ರತಿಯ ಸಹಾಯವಿಲ್ಲದೆಯೇ ನಿರರ್ಗಳ ಮಾತನಾಡಿ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಡಾ.ಪ್ರಭಾಕರ ಶಿಶಿಲ ಅವರ 76 ವಯಸ್ಸಿನ ಹುರುಪಿನ ನೇರ ಭಾಷಣಕ್ಕೆ ತಲೆದೂಗಿದ ಪ್ರೇಕ್ಷಕರು, ಭಾಷಣ ಮುಕ್ತಾಯ ಬಳಿಕ ಎದ್ದು ನಿಂತು ಭಾರಿ ಕರತಾಡನದೊಂದಿಗೆ ಗೌರವ ಸಲ್ಲಿಸಿದರು. ಅಧ್ಯಕ್ಷರ ಭಾಷಣದ ಪ್ರತಿಯನ್ನು ಭಾಷಣ ಮುಕ್ತಾಯದ ಬಳಿಕ ಎಲ್ಲರಿಗೆ ಹಂಚಲಾಯಿತು.

--------------