ಬದುಕಿನ ಅನುಭವ ಅಕ್ಷರ ರೂಪದಲ್ಲಿ ಹೊರತನ್ನಿ

| Published : Mar 25 2024, 12:48 AM IST

ಸಾರಾಂಶ

ಬೆಳಗಾವಿ: ಪ್ರತಿಯೊಬ್ಬರ ಬದುಕಿನಲ್ಲಿ ಸಾಕಷ್ಟು ಅನುಭವಗಳು ಮೂಡುತ್ತವೆ. ಆದರೆ, ಅವುಗಳನ್ನು ಅಕ್ಷರದ ರೂಪದಲ್ಲಿ ಹೊರತಂದಾಗ ಇದಕ್ಕೆ ಒಂದು ಅರ್ಥ ಕಲ್ಪಿಸಿದಂತಾಗುತ್ತದೆ. ಬಾಲ್ಯದಿಂದಲೇ ಓದಿನ ರುಚಿ ಪಡೆದ ನನಗೆ ಈಗಲೂ ಹವ್ಯಾಸವಾಗಿ ಮುಂದುವರಿದಿದೆ ಎಂದು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರತಿಯೊಬ್ಬರ ಬದುಕಿನಲ್ಲಿ ಸಾಕಷ್ಟು ಅನುಭವಗಳು ಮೂಡುತ್ತವೆ. ಆದರೆ, ಅವುಗಳನ್ನು ಅಕ್ಷರದ ರೂಪದಲ್ಲಿ ಹೊರತಂದಾಗ ಇದಕ್ಕೆ ಒಂದು ಅರ್ಥ ಕಲ್ಪಿಸಿದಂತಾಗುತ್ತದೆ. ಬಾಲ್ಯದಿಂದಲೇ ಓದಿನ ರುಚಿ ಪಡೆದ ನನಗೆ ಈಗಲೂ ಹವ್ಯಾಸವಾಗಿ ಮುಂದುವರಿದಿದೆ ಎಂದು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಹೇಳಿದರು.

ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಳಿಯ ಸಪ್ನ ಬುಕ್‌ಹೌಸ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುಧಾಮೂರ್ತಿ ಅವರೊಂದಿಗೆ ‘ಮನದ ಮಾತು’ ಮುಕ್ತ ಮಾತುಕತೆ, ಸಂವಾದ ಮತ್ತು ಸಲ್ಲಾಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷಿಕರಷ್ಟೇ ಅಲ್ಲ ಮರಾಠಿ ಭಾಷಿಕ ಮಹಿಳೆಯರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನೀವು ಯಾವುದೇ ಲೇಖಕರ ಪುಸ್ತಕವನ್ನಾದರೂ ಕೊಂಡು‌ ಓದಿ. ಮನುಷ್ಯ ಹಣ, ಅಂತಸ್ತಿನ ಕುರಿತು ವ್ಯಾಮೋಹ ಇಟ್ಟುಕೊಳ್ಳಬಾರದು. ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಹೊಂದುವುದಕ್ಕಿಂತ ಪುಸ್ತಕ ಇಟ್ಟುಕೊಂಡರೆ ಕಳ್ಳರ ಚಿಂತೆಯಿರಲ್ಲ. ಪುಸ್ತಕಗಳನ್ನು ಓದುವುದರಿಂದ ಮನಸ್ಸಿನ ನೆಮ್ಮದಿಯೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತಿವರ್ಷವೂ ಯುಗಾದಿ ಮತ್ತು ದೀಪಾವಳಿಯಲ್ಲಿ ಮಹಿಳೆಯರು ಸೀರೆ, ಹೊಸಬಟ್ಟೆ ಕೊಂಡು ಖುಷಿಪಡುತ್ತಾರೆ. ಎಂದಿನಂತೆಯೇ ಈ ಬಾರಿಯೂ ಸಂತಸದಿಂದ ಹಬ್ಬ, ಹರಿದಿನ ಆಚರಿಸಿ. ಆದರೆ, ಹಬ್ಬದಲ್ಲಿ ಹೊಸ ಬಟ್ಟೆ ಬದಲಿಗೆ ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಿ. ನಾನು ಬರೆದ ಪುಸ್ತಕಗಳನ್ನೇ ಓದಬೇಕು ಎಂದೇನಿಲ್ಲ. ನಿಮಗಿಷ್ಟವಾದ ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. ನಮ್ಮ ಮಧ್ಯೆ ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗಲು ಹಣವೇ ಬೇಕು ಎಂದೇನಿಲ್ಲ. ಅವರಿಗೆ ಸಹಾಯ ಮಾಡುವ ಮನಸ್ಸು ಇರಬೇಕಷ್ಟೆ. ದಾನಕ್ಕೆ ಸಹೃದಯ ಬೇಕು. ಯಾರಿಗೆ ಸಹೃದಯ ಇದೆಯೋ, ಮತ್ತೊಬ್ಬರ ಕಷ್ಟ ಕಂಡು ಮನಸ್ಸು ಕರಗುತ್ತದೆಯೋ, ಅಂಥವರು ಮಾತ್ರ ಸಹಾಯ ಮಾಡಬಲ್ಲರು ಎಂದು ಹೇಳಿದರು.

ಉತ್ತರ ಕರ್ನಾಟಕ ಎಂದರೆ ನನಗೆ ತುಂಬಾ ಇಷ್ಟ. ಆಡಿ, ಬೆಳೆದ ನೆಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅತ್ಯಂತ ಖುಷಿ ಕೊಡುತ್ತದೆ. ನನಗೆ ಲೇಖಕಿ ಎಂದು ಕರೆದರೆ ತುಂಬಾ ಸಂತೋಷವಾಗುತ್ತದೆ. ನಮ್ಮ ತಾಯಿ ಭಾಷೆಯಲ್ಲಿ ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪದಲ್ಲಿ ತರುವುದು ಸುಲಭ. ವಿದೇಶಿ ಸ್ಥಳಗಳಲ್ಲಿ ನನ್ನ ಪುಸ್ತಕ ಕಂಡಾಗ ನನಗೆ ಅತ್ಯಂತ ಸಂತೋಷವೆನಿಸುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕ ಬರೆಯುವುದರಿಂದ ಹೆಚ್ಚು ಜನರಿಗೆ ತಲುಪಲು ಸಹಕಾರಿಯಾಗುತ್ತಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ. ಶ್ರೀಮಂತನ ಹೆಂಡತಿ ಆಗುವುದು ಸುಲಭ. ಆದರೆ ಸುಧಾಮೂರ್ತಿ ಆಗುವುದು ತುಂಬಾ ಕಷ್ಟ. ಸದಾಕಾಲವೂ ಸಂಕಷ್ಟದಲ್ಲಿದ್ದವರ ಪರವಾಗಿಯೇ ಇವರ ಮನಸ್ಸು ತುಡಿಯುತ್ತದೆ. ಯಾವುದೇ ಸರ್ಕಾರಗಳು ಮಾಡಲಾಗದ ಕೆಲಸವನ್ನು ಇನ್ಫೋಸಿಸ್ ಸಂಸ್ಥೆಯ ಮುಖಾಂತರ ಇವರು ಸಾಧಿಸಿ ತೋರಿಸಿದ್ದಾರೆ. ಸುಧಾಮೂರ್ತಿ ರಚಿಸಿದ 46 ಕೃತಿಗಳು ಭಾರತದಲ್ಲಿ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕವನ ಹೊರತುಪಡಿಸಿ, ಎಲ್ಲ ಪ್ರಕಾರಗಳ ಸಾಹಿತ್ಯವನ್ನು ರಚಿಸಿದ್ದಾರೆ ಎಂದು ಹೇಳಿದರು.

ಒಬ್ಬ ಶ್ರೀಮಂತ ವ್ಯಕ್ತಿಯ ಪತ್ನಿಯಾಗಿ ಸಮಾನ್ಯರಂತೆ ಬದುಕುವುದು ತುಂಬಾ ಕಷ್ಟ. ಇಂಗ್ಲೆಂಡ್‌ ದೇಶದ ಪ್ರಧಾನಿಯ ಅತ್ತೆಯಾದ ಸುಧಾಮೂರ್ತಿ ಸಧ್ಯ ಜಗತ್ತಿನ ಅತ್ಯಂತ ಪ್ರಭಾವಿ ಅತ್ತೆಯಾಗಿದ್ದು, ನಮ್ಮ ಕರುನಾಡಿನವರು ಎಂಬುದು ಸಂತೋಷದ ವಿಷಯ. ದೇವದಾಸಿ ಮಹಿಳೆಯರ ಪರವಾಗಿ ಇವರು ಮಾಡಿರುವ ಕೆಲಸ ಅದ್ಭುತ. ಈಗ ಅದೇ ದೇವದಾಸಿ ಮಹಿಳೆಯರು ಸುಂದರ ಬದುಕು ಕಟ್ಟಿಕೊಳ್ಳಲು ಕಾರಣ ಸುಧಾಮೂರ್ತಿ ಅವರ ನಿಸ್ವಾರ್ಥ ಸೇವೆ ಎಂದು ಪ್ರಶಂಶಿಸಿದರು.

ಸುಧಾಮೂರ್ತಿ ಅವರು ಅನೇಕ ಸಾಮಾಜಿಕ ಕೆಲಸ ನಿರ್ವಹಿಸಿದ್ದಾರೆ. ಆದರೆ, ಯಾವತ್ತೂ ಪ್ರಚಾರ ಬಯಸಲಿಲ್ಲ. ಗಲ್ಫ್ ದೇಶದಲ್ಲಿ ಕೆಲಸಕ್ಕೆ ತೆರಳಿದ್ದ ಮಹಿಳೆಯರನ್ನು ಅಲ್ಲಿ ಜೀತದಾಳುಗಳಾಗಿ ಬಳಸಿಕೊಂಡಿದ್ದರು. ಅವರನ್ನು ವಿವಿಧ ಚಟುವಟಿಕೆಗಳಿಗೂ ಬಳಿಸಿಕೊಳ್ಳುತ್ತಿದ್ದರು. ಇಂತಹ 500ಕ್ಕೂ ಅಧಿಕ ಮಹಿಳೆಯರನ್ನು ರಕ್ಷಿಸಿದ್ದು ಸುಧಾಮೂರ್ತಿ. ಆದರೆ ಈ ವಿಷಯವನ್ನು ಎಲ್ಲಿಯೂ ಪ್ರಚಾರಕ್ಕೆ ಬಳಸಿಕೊಳ್ಳದಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು. ಸಪ್ನ ಬುಕ್ ಹೌಸ್ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೆಗೌಡ, ಬೆಳಗಾವಿ ಶಾಖೆ ವ್ಯವಸ್ಥಾಪಕ ರಘು ಎಂ.ವಿ. ಇತರರು ಉಪಸ್ಥಿತರಿದ್ದರು.

------ಕೋಟ್‌-----

ಶ್ರೀಮಂತಿಕೆಯ ಬಗ್ಗೆ ಹೆಚ್ಚು ವ್ಯಾಮೋಹ ಹೊಂದಬಾರದು. ನಮಗಿಂತ ಮತ್ತೊಬ್ಬರು ಶ್ರೀಮಂತರು ಸಿಗುತ್ತಾರೆ. ಹಾಗೆಯೇ ಸೌಂದರ್ಯವೂ ಕೂಡ. ಬೇರೆಯವರಲ್ಲಿ ಮತ್ತೊಂದನ್ನು ಹುಡುಕುವುದಕ್ಕಿಂತ ನಮ್ಮೊಳಗಿನ ಒಳ್ಳೆಯತನ ಕುರಿತು ಅಭಿಮಾನ ಬೆಳೆಸಿಕೊಳ್ಳಬೇಕು. ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ತನ್ನ ಮರಣಾನಂತರದಲ್ಲಿ ಒಂದು ಕೈಯಲ್ಲಿ ಕತ್ತಿ ಹಾಗೂ ಮತ್ತೊಂದು ಖಾಲಿ ಕೈ ಹೊರಜಗತ್ತಿಗೆ ತೋರಿಸುವಂತೆ ಹೇಳಿದ್ದ, ಇದರ ಅರ್ಥ ನಾವು ಎಷ್ಟೇ ಶ್ರೀಮಂತಿಕೆ ಹೊಂದಿದ್ದರೂ ಕೊನೆಯ ಕ್ಷಣದಲ್ಲಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುತ್ತೇವೆ.

-ಸುಧಾಮೂರ್ತಿ, ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್‌ ಫೌಂಡೇಶನ್ ಸಹ ಸಂಸ್ಥಾಪಕಿ