ರಾಮನಗರ: ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲಸೌಲಭ್ಯ ವಿತರಿಸುವ ಪ್ರಕ್ರಿಯೆ ಮುಂದುವರಿಸುವುದು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಿಎಸ್‌ಆರ್ ಅನುದಾನದ ವ್ಯಾಪ್ತಿಗೆ ತರಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನು ರಾಜ್ಯಸರ್ಕಾರ ಸೆಳೆಯಬೇಕಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ತಿಳಿಸಿದರು

ರಾಮನಗರ: ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲಸೌಲಭ್ಯ ವಿತರಿಸುವ ಪ್ರಕ್ರಿಯೆ ಮುಂದುವರಿಸುವುದು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಿಎಸ್‌ಆರ್ ಅನುದಾನದ ವ್ಯಾಪ್ತಿಗೆ ತರಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನು ರಾಜ್ಯಸರ್ಕಾರ ಸೆಳೆಯಬೇಕಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ತಿಳಿಸಿದರು.

ತಾಲೂಕಿನ ಯರೇಹಳ್ಳಿ ಪಿಎಸಿಎಂಎಸ್ ನೂತನ ಅಧ್ಯಕ್ಷ ಸಂತೋಷ್ ಕುಮಾರ್(ತೇಜು) ಮತ್ತು ಉಪಾಧ್ಯಕ್ಷ ಮಾಯಣ್ಣ ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡು ಗಂಭೀರ ವಿಚಾರಗಳ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕರಾದ ಬಾಲಕೃಷ್ಣ, ಇಕ್ಬಾಲ್ ಹುಸೇನ್, ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿಯಾಗಿ ಶೀಘ್ರದಲ್ಲಿಯೇ ಮನವಿ ಸಲ್ಲಿಸಲಾಗುವುದು ಎಂದರು.

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದ ಕಾರಣ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ವಿತರಣೆ ಮಾಡಲಾಗುತ್ತಿತ್ತು. ಇದು ಎಲ್ಲ ರಾಜ್ಯಗಳಲ್ಲಿಯೂ ಸುಗಮವಾಗಿ ಸಾಗುತ್ತಿತ್ತು. ಆದರೀಗ ಅಮಿತ್ ಶಾ ಕೇಂದ್ರ ಸಹಕಾರ ಖಾತೆಯ ಸಚಿವರಾದ ಮೇಲೆ ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತಿದ್ದ ಎಲ್ಲ ಸಾಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಈಗಾಗಲೇ ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲಸೌಲಭ್ಯಗಳನ್ನು ಶೇಕಡ 60ರಷ್ಟು ನಿಲ್ಲಿಸಿದೆ. ಇನ್ನುಳಿದಂತೆ ಶೇಕಡ 40ರಷ್ಟಿರುವ ಸಾಲಸೌಲಭ್ಯಗಳನ್ನೂ ಸ್ಥಗಿತಗೊಳಿಸುವ ಪ್ರಯತ್ನಗಳು ಸಾಗಿವೆ. ಇದರಿಂದಾಗಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ನೀಡುವುದು ಕಠಿಣವಾಗಲಿದೆ. ಏಕೆಂದರೆ ಇಲ್ಲಿವರೆಗೆ ರಿಯಾಯಿತಿ ಬಡ್ಡಿ ದರದಲ್ಲಿ ಈ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇಕಡ 50ರಷ್ಟು ನೀಡುತ್ತಿದ್ದವು.

ಬಡ್ಡಿಗೆ ಸಾಲ ಪಡೆದು ಶೂನ್ಯ ಬಡ್ಡಿಯಲ್ಲಿ ಸಾಲ ಕೊಡಲಾಗದು:

ಈಗ ಕೇಂದ್ರ ಸರ್ಕಾರ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇನ್ನು ಕೇಂದ್ರದ ಸ್ವಾಮ್ಯಕ್ಕೆ ಒಳಪಟ್ಟಿರುವ ನಬಾರ್ಡ್ ಬಡ್ಡಿ ದರದಲ್ಲಿ ಸಾಲ ಕೊಡಲು ಸಿದ್ಧವಿದೆ. ನಬಾರ್ಡ್ ನಿಂದ ಬಡ್ಡಿಗೆ ಸಾಲ ಪಡೆದು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೊಡಲು ಸಾಧ್ಯವಾಗುವುದಿಲ್ಲ. ಇದರಿಂದ ಡಿಸಿಸಿ ಬ್ಯಾಂಕ್ ಗಳು ಅಭಿವೃದ್ಧಿ ಕಾಣಲಾಗದೆ ಅವನತಿಯತ್ತ ಸಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಡಿಸಿಸಿ ಬ್ಯಾಂಕ್ ವತಿಯಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ರೈತರಿಗೆ 800 -850 ಕೋಟಿ ರು.ಗೂ ಹೆಚ್ಚಿನ ಮೊತ್ತದ ಕೆಸಿಸಿ ಬೆಳೆ ಸಾಲ ವಿತರಣೆ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರದ ಹೊಸ ನೀತಿಯಿಂದ ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಣೆ ಪ್ರಕ್ರಿಯೆಯೇ ಸ್ಥಗಿತಗೊಳ್ಳುತ್ತದೆ ಎಂದು ಯರೇಹಳ್ಳಿ ಮಂಜು ಎಚ್ಚರಿಸಿದರು.

ಈಗ ಸಿಎಸ್ ಆರ್ ಅನುದಾನವನ್ನು ಶಿಕ್ಷಣ, ಪಾರ್ಕ್, ದೇವಸ್ಥಾನ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಂತಹ ಕಾರ್ಯಗಳಿಗೆ ವಿನಿಯೋಗ ಮಾಡಲಾಗುತ್ತಿದೆ. ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಿಎಸ್ ಆರ್ ಅನುದಾನದ ವ್ಯಾಪ್ತಿಗೆ ತಂದಲ್ಲಿ ಸಂಘಗಳು ಸ್ವಂತ ಸೂರು ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ರೈತರು ರಾಷ್ಟ್ರೀಯ ಬ್ಯಾಂಕ್ ಗಳಿಗಿಂತ ಹೆಚ್ಚಾಗಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವಹಿವಾಟು ನಡೆಸುತ್ತಾರೆ. ಚಿನ್ನಾಭರಣ ಸಾಲ, ಹಣ ಠೇವಣಿ ಮಾಡುತ್ತಾರೆ. ಹಾಗಾಗಿ ಒಂದೊಂದು ಸಂಘಗಳು 40ರಿಂದ 500 ಕೋಟಿ ರುಪಾಯಿವರೆಗೆ ವಹಿವಾಟು ನಡೆಸುತ್ತಿವೆ. ಆದರೆ, ಲಾಭ ಕಡಿಮೆ ಇರುವ ಸೊಸೖಟಿಗಳು ಸಂಕಷ್ಟದಲ್ಲಿ ಸಿಲುಕಿವೆ. ಆ ಸಂಘಗಳು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಅವಲಂಬಿಸುವಂತಾಗಿದೆ. ಬಿಡಿಸಿಸಿ ಬ್ಯಾಂಕ್ ನಿಂದ ಕೊಡುವ 5 ಲಕ್ಷ ರು.ಗಳಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಸಿಎಸ್ ಆರ್ ಅನುದಾನದ ವ್ಯಾಪ್ತಿಗೆ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತರಬೇಕು. ಇದರಿಂದ ಸೊಸೈಟಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಅನೇಕ ಅನುಕೂಲಗಳು ಆಗಲಿವೆ. ಇಲ್ಲದಿದ್ದರೆ ಸಂಘಗಳು ಬಾಗಿಲು ಮುಚ್ಚುವ ಸ್ಥಿತಿ ಉಂಟಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವಿತರಣೆ ಹಾಗೂ ಸಿಎಸ್ ಆರ್ ಅನುದಾನದ ವ್ಯಾಪ್ತಿಗೆ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತರಬೇಕೆಂದು ಯರೇಹಳ್ಳಿ ಮಂಜು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಯೋಗರಾಜ್, ಜಯಪಾಲ್, ಮಂಗಮ್ಮ, ಕವಿತಾ ಆನಂದ್, ಕೃಷ್ಣಯ್ಯ, ಲೋಕೇಶ್, ಬಿಳಿಯಪ್ಪ, ಪ್ರಶಾಂತ್, ರತ್ನಮ್ಮ, ಟಿಎಪಿಸಿಎಂಎಸ್ ನಿರ್ದೇಶಕ ಮಹದೇವಯ್ಯ, ಯರೇಹಳ್ಳಿ ಟಿಎಪಿಸಿಎಂಎಸ್ ಸಿಇಒ ದಿನೇಶ್, ಮುಖಂಡರಾದ ರವಿ, ಕೃಷ್ಣ, ಹಾಪ್‌ಕಾಮ್ಸ್ ಪುಟ್ಟಸ್ವಾಮಿ, ಅಶೋಕ್ ಮತ್ತಿತರರು ಭಾಗವಹಿಸಿದ್ದರು.

16ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಯರೇಹಳ್ಳಿ ಪಿಎಸಿಎಂಎಸ್ ನೂತನ ಅಧ್ಯಕ್ಷ ಸಂತೋಷ್ ಕುಮಾರ್ (ತೇಜು) ಮತ್ತು ಉಪಾಧ್ಯಕ್ಷ ಮಾಯಣ್ಣ ಅವರನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಅಭಿನಂದಿಸಿದರು.