ಸಾರಾಂಶ
ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಶಿರಾ ಕ್ಷೇತ್ರದಲ್ಲಿ ಮುಂದಿನ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕರಾಗುವುದು ನಿಶ್ಚಿತ. ಶಿರಾದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಯಾವುದೇ ಅನುಮಾನ ಬೇಡ - ಚಿದಾನಂದ್
ಶಿರಾ : ನಾನು ರಾಜಕೀಯಕ್ಕೆ ಸ್ವಾರ್ಥ ಇಟ್ಟುಕೊಂಡು ಬಂದವನಲ್ಲ. ನಿಸ್ವಾರ್ಥವಾಗಿ ಜನಸೇವೆ ಮಾಡಿಕೊಂಡಿದ್ದ ನಾನು ಜನರಿಗೆ ಏನನ್ನಾದರೂ ಸಹಾಯ ಮಾಡಬೇಕು ಅದಕ್ಕಾಗಿ ರಾಜಕೀಯ ಅಧಿಕಾರ ಇದ್ದರೆ ಹೆಚ್ಚು ಸಹಾಯ ಮಾಡಬಹುದೆಂಬ ಉದ್ದೇಶದಿಂದ ಬಂದಿದ್ದೇನೆ. ನನ್ನ ಅಧಿಕಾರದಲ್ಲಿ ಕೈಲಾದಷ್ಟು ಸೇವೆ ಮಾಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷರಾದ ಚಿದಾನಂದ್ ಎಂ.ಗೌಡ ಹೇಳಿದರು.
ಅವರು ನಗರದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ಹನುಮಂತೇಗೌಡ ಅವರಿಂದ ಬಿಜೆಪಿ ಬಾವುಟ ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸಿ ಮಾತನಾಡಿದರು. ದೇಶದಲ್ಲಿ ಬಿಜೆಪಿ ಪಕ್ಷ ಸಮರ್ಥವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಶಿರಾ ಕ್ಷೇತ್ರದಲ್ಲಿ ಮುಂದಿನ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕರಾಗುವುದು ನಿಶ್ಚಿತ. ಶಿರಾದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವುದೇ ನನ್ನ ಗುರಿ.
ಯಾವುದೇ ಅನುಮಾನ ಬೇಡ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನನ್ನನ್ನು ಗುರುತಿಸಿ ಬಿಜೆಪಿ ಹಿರಿಯರಾದ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ನನಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿ ಮಾಡುವುದಿಲ್ಲ ಎಂದರು.
ಶಿರಾ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೇಟ್ ಸ್ಟೇಡಿಯಂ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಶಿರಾದಲ್ಲಿ ಮಾಡುವುದಾಗಿ ಶಾಸಕರು ಜನರಿಗೆ ಆಸೆ ಹುಟ್ಟಿಸಿದರು. ಆದರೆ ಎಲ್ಲೋಯ್ತು ಎಂದು ಪ್ರಶ್ನಿಸಿದ ಅವರು ತಾಲೂಕಿನ ತಾವರೆಕೆರೆಯಲ್ಲಿ ಸುಮಾರು ೪೨ ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಿರುವ ವಧಾಗಾರ ಉದ್ಘಾಟನೆಯಾಗಿಲ್ಲ. ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಗೋವಿಂದ ಕಾರಜೋಳ , ಮಾತನಾಡಿ ಒಂದು ಪಕ್ಷಕ್ಕೆ ಆಸ್ತಿ ಎಂದರೆ ಕಾರ್ಯಕರ್ತರು. ಆ ಕಾರ್ಯಕರ್ತರಿಂದಲೇ ಬಿಜೆಪಿ ಪಕ್ಷ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.2023 ರ ಚುನಾವಣೆಯಲ್ಲಿ ಬಿಜೆಪಿ ಸೋಲಲು ಕಾಂಗ್ರೆಸ್ನವರ ಮೋಸದಾಟ ಕಾರಣ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಒಂದು ಅಭಿವೃದ್ಧಿ ಕಾರ್ಯಗಳಾಗಿಲ್ಲ. ರಾಜ್ಯದಲ್ಲಿ ದುರಾಡಳಿತ ನಡೆಯುತ್ತಿದೆ.
ಇತ್ತೀಚಿಗಷ್ಟೆ 11 ಅಮಾಯಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದರು. ರಾಜ್ಯದಲ್ಲಿ ಭ್ರಷ್ಟಾಚಾರದಿಂದ ಅನೇಕ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೆಟ್ಟ ಸರಕಾರ ಸ್ವಾತಂತ್ರ್ಯ ಬಂದು ೭೫ ವರ್ಷಗಳಲ್ಲಿ ಬಂದಿರಲಿಲ್ಲ. ಇದು ಅವರ ಕೊನೆಯ ಆಡಳಿತ ಇನ್ನೆಂದು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದ ಅವರು ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷರನ್ನಾಗಿ ಚಿದಾನಂದ್ ಎಂ.ಗೌಡ ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ.
ಯುವಕರಾದ ಚಿದಾನಂದ್ ಗೌಡ ಅವರು ಉತ್ತಮವಾಗಿ ಪಕ್ಷ ಸಂಘಟಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ಚಿಕ್ಕಣ್ಣ, ಎಂಜಲಗೆರೆ ಮೂರ್ತಿ, ಮಾಗೋಡು ಪ್ರತಾಪ್, ಚಂಗಾವರ ಮಾರಣ್ಣ, ಕೊಟ್ಟ ರಂಗನಾಥ್, ಎಂ ಶಿವಲಿಂಗಯ್ಯ, ಬೊಪ್ಪರಾಯಪ್ಪ, ಪದ್ಮಮಂಜುನಾಥ್ , ನಾಗರತ್ನಮ್ಮ, ಕವಿತಾ, ಗೋಪಿಕುಂಟೆ ಕುಮಾರ್ ಮಾಷ್ಟ್ರು, ಬರಗೂರು ಶಿವಕುಮಾರ್, ಜಿ.ಜೆ ನರಸಿಂಹಮೂರ್ತಿ, ಮುಖಂಡರಾದ ನಾಗರಾಜ್ ಗೌಡ, ಮೂಗನಹಳ್ಳಿ ರಾಮು, ಗಂಜಲಗುಂಟೆ ಮುನಿರಾಜು, ಸೈಯದ್ ಬಾಬಾ, ಹಂದಿಕುಂಟೆ ಪಾಂಡುರಂಗಪ್ಪ, ಕಳ್ಳಂಬೆಳ್ಳ ವಾಸು, ಜಗದೀಶ್, ಕೃಷ್ಣಪ್ಪ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))