ಕೆಟ್ಟು ಕಣ್ಮುಚ್ಚಿದ ಸಿಸಿಟಿವಿ ಕ್ಯಾಮೆರಾಗಳು

| Published : Apr 03 2024, 01:36 AM IST

ಸಾರಾಂಶ

ಜನನಿಬಿಡ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದಲ್ಲಿ, ಅಪರಾಧ ಪ್ರಕರಣ, ಅಪಘಾತ, ಇನ್ನಿತರ ಸಾಕ್ಷಿಗಾಗಿ ಬಳಕೆ ಮಾಡಿಕೊಳ್ಳಬಹುದು. ಆದರೆ, ನಗರದಲ್ಲಿ ನಿರ್ವಹಣೆ ಕೊರತೆಯಿಂದ ಸಿಸಿಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್‌ ಆಗದೇ ಎರಡು ವರ್ಷದಿಂದ ಕಣ್ಣುಮುಚ್ಚಿವೆ.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಪ್ರಮುಖ ವೃತ್ತಗಳಲ್ಲಿ ಜನನಿಬಿಡ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದಲ್ಲಿ, ಅಪರಾಧ ಪ್ರಕರಣ, ಅಪಘಾತ, ಇನ್ನಿತರ ಸಾಕ್ಷಿಗಾಗಿ ಬಳಕೆ ಮಾಡಿಕೊಳ್ಳಬಹುದು. ಆದರೆ, ನಗರದಲ್ಲಿ ನಿರ್ವಹಣೆ ಕೊರತೆಯಿಂದ ಸಿಸಿಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್‌ ಆಗದೇ ಎರಡು ವರ್ಷದಿಂದ ಕಣ್ಣುಮುಚ್ಚಿವೆ.

ನಗರದ ಪ್ರಮುಖ ವೃತ್ತ ಹಾಗೂ ಜನನಿಬಿಡ ಪ್ರದೇಶದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದೆ 2 ವರ್ಷಗಳಿಂದ ಧೂಳು ತಿನ್ನುತ್ತಿವೆ. ಕೇವಲ ತೋರಿಕೆಗೆ ಮಾತ್ರ ಸಿಸಿಟಿ ಎಂಬಂತಿವೆ.

ಅಕ್ರಮ ಚಟುವಟಿಕೆ, ಅಪರಾಧ, ಅಪಘಾತ ಹಾಗೂ ಮಹಿಳೆಯರ ದೌರ್ಜನ್ಯಗಳ ಪ್ರಕರಣಗಳಿಗೆ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ನಗರಸಭೆ ಹಾಗೂ ಪೊಲೀಸ್ ಇಲಾಖೆಯ ನಿಷ್ಕಾಳಜಿಗೆ ಸಾಕ್ಷಿಯಾಗಿದೆ. ಕಾನೂನು ಸುರಕ್ಷತೆಗಾಗಿ ಕೂಡಲೇ ನಗರದಲ್ಲಿ ಕೆಟ್ಟು ನಿಂತ ಸಿಸಿ ಕ್ಯಾಮೆರಾ ಗಳನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರದ ಬಸವೇಶ್ವರ ವೃತ್ತದಲ್ಲಿ 4 ಕ್ಯಾಮೆರಾಗಳು, ಗ್ರಾಮಾಂತರ ಬಸ್ ನಿಲ್ದಾಣದ ಮುಂದುಗಡೆ 2, ಹೊಸ ಬಸ್ ನಿಲ್ದಾಣ ಮುಂದುಗಡೆ 2, ಸಿಬಿ ಕಮಾನ್ 2, ವಾಲ್ಮೀಕಿ ವೃತ್ತ ಹಾಗೂ ಮೋಚಿಗಡ್ಡದಲ್ಲಿ 2 ಸೇರಿ 14 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಪೊಲೀಸ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಕಂಟ್ರೋಲ್​ ರೂಂ ಮೂಲಕ ನಗರದ ಚಲನ-ವಲನಗಳ ಮೇಲೆ ನಿಗಾ ಇಡಲಾಗುತ್ತಿತ್ತು.

ಇವು ಸುಮಾರು 2 ವರ್ಷಗಳ ಹಿಂದೆ ಕೆಟ್ಟು ನಿಂತಿವೆ. ಸಾರ್ವಜನಿಕರು ಸಿಸಿ ಕ್ಯಾಮೆರಾಗಳನ್ನು ದುರಸ್ತಿ ಮಾಡುವಂತೆ ಅನೇಕ ಬಾರಿ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಗರಸಭೆ ಹಾಗೂ ಪೊಲೀಸ್ ಇಲಾಖೆ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಸಚಿವರ ಸ್ವಕ್ಷೇತ್ರದಲ್ಲಿ ಸಿಸಿ ಕ್ಯಾಮೆರಾಗಳು ಕೆಟ್ಟು ನಿಂತರೂ ದುರಸ್ತಿಗೆ ಕ್ರಮ ವಹಿಸದೆ ಇರುವುದು ಆಚ್ಚರಿಗೆ ಕಾರಣವಾಗಿದೆ.

ನಿರ್ವಹಣೆ ಕೊರತೆ: ಕಳಪೆ ಕಾಮಗಾರಿ ಹಾಗೂ ಸರಿಯಾದ ನಿರ್ವಹಣೆ ಕೊರತೆಯಿಂದ ಕ್ಯಾಮೆರಾಗಳು ಕೆಟ್ಟು ಹೋಗಿದ್ದು, ನಗರದಲ್ಲಿ ಎಟಿಎಂ ಕಳ್ಳತನ, ಬೈಕ್ ಮನೆ ಹಾಗೂ ಅಂಗಡಿಗಳನ್ನು ರಾಜಾರೋಷವಾಗಿ ಕಳ್ಳತನ ಮಾಡುತ್ತಿದ್ದಾರೆ. ಸರಿಯಾದ ಕಣ್ಗಾವಲು ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ನಗರ ನಿವಾಸಿ ಭಾರತಿ ಬೇಸರ ವ್ಯಕ್ತಪಡಿಸಿದ್ದಾರೆ.

ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು: ನಗರದ ದರ್ಶನಾಪುರ ಶಿಶು ಆಸ್ಪತ್ರೆ ಪಕ್ಕದಲ್ಲಿರುವ ಗೋಲಗೇರಿ ತೆಂಗಿನಕಾಯಿ ವ್ಯಾಪಾರಿಯ ಅಂಗಡಿಯಲ್ಲಿ ಕಳೆದ ಎರಡು ವರ್ಷದ ಹಿಂದೆ 4 ಲಕ್ಷ ರು.ಗಳಿಗೂ ಅಧಿಕ ನಗದು ಕಳ್ಳತನ ವಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಳ್ಳನ ಮುಖ ಚಹರೆ ಸೆರೆಯಾಗಿದ್ದರೂ ಇನ್ನು ಪೊಲೀಸರಿಗೆ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲದೆ ಇತ್ತೀಚೆಗೆ ಪಡಿತರ ಅಕ್ಕಿ ತುಂಬಿದ ಲಾರಿ ಕಳ್ಳತನ ನಡೆದಿದೆ. ಅಲ್ಲದೆ ಎಕ್ಸಿಸ್ ಬ್ಯಾಂಕಿನ ಎಟಿಎಂ ಹಾಗೂ ಗ್ಯಾರೇಜ್ ಲೈನನಲ್ಲಿ ಸರಣಿ ಅಂಗಡಿ ಕಳ್ಳತನ, ಮನೆ ಕಳ್ಳತನ, ಬೈಕ್ ಕಳ್ಳತನದಂತಹ ಪ್ರಕರಣಗಳು ವರದಿಯಾಗಿವೆ.

ಆದರೂ ಪೊಲೀಸರು ನಗರದಲ್ಲಿ ಸಿಸಿಟಿವಿ ಅಳವಡಿಸಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕಾರಣ ಇಷ್ಟೇ ಮರಳು ಮಾಫಿಯಾ ಹಾಗೂ ಅಕ್ರಮ ದಂಧೆಕೋರರನ್ನು ರಕ್ಷಿಸುವ ಸಲುವಾಗಿ ಪೊಲೀಸರು ನಗರದಲ್ಲಿ ಸಿಸಿ ಕ್ಯಾಮೆರಾ ದುರಸ್ತಿ ಮಾಡಲು ಆಸಕ್ತಿ ತೋರುವುದಿಲ್ಲ ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಚನ್ನಪ್ಪ ಆನೆಗುಂದಿ ಆರೋಪಿಸಿದ್ದಾರೆ.

ಪೋಲಿಸ್ ಇಲಾಖೆ ಹೇಳುವುದೇ ಬೇರೆ: ನಗರದಲ್ಲಿ ಅಪರಾಧ ಪ್ರಕರಣಗಳು ಪತ್ತೆಹಚ್ಚಲು ಸಿಸಿ ಕ್ಯಾಮೆರಾಗಳು ಸಹಕಾರಿ ಆಗುತ್ತೇವೆ ಎನ್ನುವ ಉದ್ದೇಶದಿಂದ ಕೆಟ್ಟು ನಿಂತ ಕ್ಯಾಮೆರಾಗಳನ್ನು ಕೂಡಲೇ ದುರಸ್ತಿ ಮಾಡುವಂತೆ ನಗರಸಭೆಗೆ ಐದಾರು ಪತ್ರಗಳನ್ನು ಬರೆದಿದ್ದೇವೆ. ಪೌರಾಯುಕ್ತರಿಗೆ ಅನೇಕ ಬಾರಿ ಮೌಖಿಕವಾಗಿ ಹಾಗೂ ಖುದ್ದಾಗಿ ಭೇಟಿ ಮಾಡಿ ಕೂಡಲೆ ಕ್ಯಾಮೆರಾ ದುರಸ್ತಿ ಮಾಡುವಂತೆ ಹೇಳಿದರೂ ಸ್ಪಂದಿಸಿಲ್ಲ. ಇದಲ್ಲದೆ ಸಚಿವರ ಗಮನಕ್ಕೂ ತರಲಾಗಿದೆ. ಅಲ್ಲದೆ ಸಿಸಿಟಿವಿ ಆಪರೇಟರಗೆ ಆರೇಳು ತಿಂಗಳ ಮೊದಲೇ ನನ್ನ ಸ್ವಂತ ಹಣ 50 ಸಾವಿರ ರು.ಗಳು ನೀಡಿ ಕ್ಯಾಮೆರಾ ದುರಸ್ತಿ ಮಾಡಲು ಹೇಳಿದ್ದೆ. ಆದರೆ, ನಗರಸಭೆ ಅಧಿಕಾರಿಗಳು ಆ ವ್ಯಕ್ತಿಗೆ ದುರಸ್ತಿ ಮಾಡಬೇಡ ಎಂದು ಹೇಳಿದ್ದಾರೆಂದು ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ. ಪಾಟೀಲ್ ತಿಳಿಸಿದ್ದಾರೆ.ನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಿಸಿ ಕ್ಯಾಮೆರಾಗಳನ್ನು ದುರಸ್ತಿ ಮಾಡುವಂತೆ ನಗರಸಭೆಗೆ ಸೂಚಿಸಿದ್ದೇನೆ. ಆದಷ್ಟು ಬೇಗ ದುರಸ್ತಿ ಮಾಡುವ ವ್ಯವಸ್ಥೆ ಮಾಡುತ್ತೇನೆ.

- ಶರಣಬಸಪ್ಪಗೌಡ ದರ್ಶನಾಪೂರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.ಪೊಲೀಸ್ ಇಲಾಖೆಯವರು ಮೊದಲು ಸಿಸಿ ಕ್ಯಾಮೆರಾ ದುರಸ್ತಿ ಮಾಡುವಂತೆ ಪತ್ರ ನೀಡಿದ್ದರು. ನಂತರ ರಿಪೇರಿ ಬೇಡ, ಹೊಸದು ಅಳವಡಿಸುವಂತೆ ಪತ್ರ ಬರೆದಿದ್ದಾರೆ. ಅದರಂತೆ ಹೊಸ ಕ್ಯಾಮೆರಾಗಳಿಗೆ ಎಸ್ಟೆಮೆಂಟ್ ಮಾಡಿದ್ದು, ಮಂಜೂರಾತಿಯಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಚುನಾವಣೆ ಮುಗಿದ ತಕ್ಷಣ ಹೊಸ ಕ್ಯಾಮೆರಾ ಗಳನ್ನು ಅಳವಡಿಸಲಾಗುವುದು.

- ರಮೇಶ್ ಬಡಿಗೇರ್, ಪೌರಾಯುಕ್ತರು ನಗರಸಭೆ ಶಹಾಪುರ.

ಸುರಪುರ ಪೊಲೀಸರು ನಗರದಲ್ಲಿ ಸುಮಾರು 200 ಸಿಸಿ ಕ್ಯಾಮೆರಾ ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. 48 ಲಕ್ಷ ರೂಪಾಯಿಗಳು ಮಂಜೂರಾಗಿದೆ. ಶಹಾಪುರ ನಗರದಲ್ಲಿ ಅವಶ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಲು ವರದಿ ಸಿದ್ಧಪಡಿಸಲಾಗುತ್ತಿದೆ.

- ಜಾವೇದ್ ಇನಾಂದಾರ್‌, ಡಿವೈಎಸ್ಪಿ, ಸುರಪುರ ಉಪವಿಭಾಗ.