ಸಾರಾಂಶ
ಸಾಹಿತಿ ಬಂಜಗೆರೆ ಜಯಪ್ರಕಾಶ ಅವರು ಕನ್ನಡಕ್ಕೆ ಅನುವಾದಿಸಿರುವ ತೆಲುಗಿನ ಕೆ.ರಾಜಗೋಪಾಲ್ ಅವರ ‘ಅಭಿವೃದ್ಧಿ ಎಂಬ ವಿನಾಶ’ ಕೃತಿಯನ್ನು ಲೋಕಾರ್ಪಣೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೇರೆ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವುದರಿಂದ ಲೇಖಕರ ನಡುವೆ ಪರಸ್ಪರ ಸಂವಹನ ನಡೆದು ಸಹೋದರತ್ವ ಬೆಳೆಯುತ್ತದೆ. ಇದು ಉತ್ತಮ ಬೆಳವಣಿಗೆ ಎಂದು ಲೇಖಕ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ ಅವರು ಕನ್ನಡಕ್ಕೆ ಅನುವಾದಿಸಿರುವ ತೆಲುಗಿನ ಕೆ.ರಾಜಗೋಪಾಲ್ ಅವರ ‘ಅಭಿವೃದ್ಧಿ ಎಂಬ ವಿನಾಶ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭಾರತೀಯ ಭಾಷೆಗಳ ಅನುವಾದವು ನಮ್ಮ ಒಕ್ಕೂಟ ವ್ಯವಸ್ಥೆಗೆ ಪೂರಕವಾದ ಕಾರ್ಯವಾಗಿದೆ. ಹಿಂದಿ, ಸಂಸ್ಕೃತ, ಇಂಗ್ಲಿಷ್ ಬಳಸಲು ಆದ್ಯತೆ ನೀಡುತ್ತಿರುವ ಆಡಳಿತ ವ್ಯವಸ್ಥೆಯಲ್ಲಿ ನಮ್ಮತನ ಕಾಯ್ದುಕೊಳ್ಳಲು ಅನುವಾದ ಸಹಕಾರಿಯಾಗಿದೆ. ಲೇಖಕರ ನಡುವೆ ಸಮನ್ವಯ ಉಂಟಾಗಿ ಸಹೋದರತ್ವ ಬೆಳೆಯುತ್ತದೆ. ಬೇರೆ ಭಾಷೆಯ ಕೃತಿಗಳನ್ನು ನಾವು ಅನುವಾದಿಸುತ್ತಿದ್ದು ಕನ್ನಡ ಕೃತಿಗಳು ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಿಗೆ ಅನುವಾದವಾಗುತ್ತಿವೆಯೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಬ್ಯಾರಿ, ತುಳು, ಲಂಬಾಣಿಯೂ ಅನುವಾದವಾಗಲಿ:
ಬ್ಯಾರಿ, ಲಂಬಾಣಿ, ತುಳು ಭಾಷೆಯಲ್ಲೂ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇವುಗಳ ಅನುವಾದವಾಗಿ ಅನುಸಂಧಾನ ಆಗಬೇಕು. ಕನ್ನಡದಲ್ಲಿ ಮೂರು ಅನುವಾದಗಳಿವೆ. ಜಗತ್ತಿನ ಅತ್ಯತ್ತಮ ಸಾಹಿತ್ಯವನ್ನು ಇಂಗ್ಲಿಷ್‌ನಿಂದ ಅನುವಾದಿಸಿದ್ದೇವೆ. ಜಗತ್ತಿನ ಹಲವು ಭಾಷೆಗಳನ್ನು ಕಲಿತು ಅನುವಾದ ಮಾಡಿದ್ದೇವೆ. ಭಾರತೀಯ ಭಾಷೆಗಳನ್ನು ಕಲಿತು ಅನುವಾದ ಮಾಡಲಾಗುತ್ತಿದೆ. ಇತ್ತೀಚೆಗೆ ಈ ಟ್ರೆಂಡ್ ಹೆಚ್ಚಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಆಂಧ್ರದ ಬಹುಮುಖ ಪ್ರತಿಭೆ ಕೆ.ಬಾಲಗೋಪಾಲ್ ಅವರ ಹೋರಾಟದಿಂದ ನಾವು ಕೆಲ ವಿಷಯಗಳ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳುತ್ತಿದ್ದೆವು. ಬಾಲಗೋಪಾಲ್ ಜನಕೇಂದ್ರಿತ ದೃಷ್ಟಿಕೋನ ಹೊಂದಿದ್ದು ಬಡವರು, ದಲಿತರು, ಮಹಿಳೆಯರು, ಆದಿವಾಸಿಗಳ ವಿಮೋಚನೆಗೆ ಶ್ರಮಿಸಿದ್ದರು. ಜನತೆಯ ಬುದ್ಧಿಜೀವಿ ಆಗಿದ್ದರಿಂದ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಕರ್ನಾಟಕದಲ್ಲಿ ಎಡ ಪಂಥೀಯ ಚಳವಳಿ ಹಲವು ಭಾಗಗಳಾಗಿದ್ದು ನಾನು ಬಾಲಗೋಪಾಲ್ ಅವರ ವಿಚಾರಧಾರೆಗಳಿಂದೆ ಪ್ರೇರೇಪಿತವಾಗಿ ಪರ್ಯಾಯ ಹೋರಟವನ್ನೇನೂ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಚಿಂತಕ ಶ್ರೀಪಾದ್ ಭಟ್, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಪ್ರವೀಣ್ ತಲ್ಲೆಪಲ್ಲಿ, ಸಾಮಾಜಿಕ ಕಾರ್ಯಕರ್ತ ವಿ.ಎಲ್.ನರಸಿಂಹಮೂರ್ತಿ ಉಪಸ್ಥಿತರಿದ್ದರು.