ಬಿ.ಎಸ್.ಎನ್.ಎಲ್ ಕಚೇರಿ ಆವರಣದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಕ್ಕೂ ಅಧಿಕ ನಿವೃತ್ತ ನೌಕರರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನೊಳಗೊಂಡ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಡಿಎ ಪಾವತಿ ತಡೆಹಿಡಿದಿರುವುದು ನಿವೃತ್ತ ನೌಕರರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆಯೆಂದು ಆರೋಪಿಸಿದರು. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಪಿಂಚಣಿದಾರರು ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಡಿಎ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿ.ಎಸ್.ಎನ್.ಎಲ್ ನಿವೃತ್ತ ನೌಕರರ ಎಲ್ಲಾ ಸಂಘಟನೆಗಳ ವತಿಯಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಭಾಗವಾಗಿ ಹಾಸನ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.ನಗರದ ಬಿ.ಎಂ. ರಸ್ತೆ ಬಳಿ ಇರುವ ಬಿ.ಎಸ್.ಎನ್.ಎಲ್ ಕಚೇರಿ ಆವರಣದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಕ್ಕೂ ಅಧಿಕ ನಿವೃತ್ತ ನೌಕರರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನೊಳಗೊಂಡ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಡಿಎ ಪಾವತಿ ತಡೆಹಿಡಿದಿರುವುದು ನಿವೃತ್ತ ನೌಕರರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆಯೆಂದು ಆರೋಪಿಸಿದರು. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಪಿಂಚಣಿದಾರರು ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ನೌಕರ ಎಸ್. ನಾಗರಾಜು, ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಹೊಸ ನಿಯಮಗಳನ್ನು ಸೇರಿಸುವ ಮೂಲಕ ಪೆನ್ಷನ್ ರಿವಿಷನ್ ಹಾಗೂ ಟಿಎ ನೀಡುವ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡಿದೆ ಎಂದು ಟೀಕಿಸಿದರು. ಇತ್ತೀಚಿನ ನೀತಿಗಳ ಪ್ರಕಾರ ಭವಿಷ್ಯದಲ್ಲಿ ಯಾವುದೇ ಪೇಕಮಿಷನ್ ಅಥವಾ ರಿವಿಷನ್ ನಡೆದರೂ ಅದರ ಅನುಸಾರ ಪಿಂಚಣಿ ಪರಿಷ್ಕರಣೆ ಮಾಡುವುದಿಲ್ಲ ಹಾಗೂ ಟಿಎ ನೀಡುವುದಿಲ್ಲ ಎಂಬ ರೀತಿಯ ಅಸ್ಪಷ್ಟತೆ ಉಂಟಾಗಿದೆ ಎಂದು ಅವರು ಹೇಳಿದರು. ಅದರ ಜೊತೆಗೆ, ಜನವರಿ 2026ರಿಂದ ನೀಡಬೇಕಾಗಿದ್ದ ಡಿಎ ಪಾವತಿಯನ್ನು ಸರ್ಕಾರ ತಡೆಹಿಡಿದಿರುವುದು ಅತ್ಯಂತ ಖಂಡನೀಯ. ಶರತ್ತು ವಿಧಿಸುವ ಮೂಲಕ ಸರ್ಕಾರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಇದು ನಿವೃತ್ತ ನೌಕರರ ಮೇಲಿನ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದಿನ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಹೆಚ್ಚಾಗುತ್ತಿದ್ದು, ಸಾಮಾನ್ಯ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಡಿಎ ತಡೆಹಿಡಿದಿರುವುದು ಪಿಂಚಣಿದಾರರ ಬದುಕಿಗೆ ಮತ್ತಷ್ಟು ಹೊರೆತಂದಿದೆ. ಆದ್ದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಬಾಕಿ ಇರುವ ಡಿಎ ಬಿಡುಗಡೆ ಮಾಡಬೇಕು ಹಾಗೂ ಪೆನ್ಷನ್ ಸಂಬಂಧಿತ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಎಲ್ಲಾ ಪೆನ್ಷನ್ ಸಂಘಟನೆಗಳು ಒಗ್ಗಟ್ಟಿನಿಂದ ಈ ಹೋರಾಟ ನಡೆಸುತ್ತಿದ್ದು, ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ
ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು. ಏಪ್ರಿಲ್ 30 ಮತ್ತು ಮೇ 1ನೇ ದಿನಾಂಕದಂದು ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಈ ಪ್ರತಿಭಟನೆಯಲ್ಲಿ ನಿವೃತ್ತ ನೌಕರರಾದ ರಾಜು, ಶಿವಣ್ಣ, ಸಂಪತ್ ಕುಮಾರ್, ಕಾಂತರಾಜು, ಐಯ್ಯಂಗಾರ್, ದೇವರಾಜು, ನಾಗರಾಜ್, ರಾಮಚಂದ್ರ, ನಿರ್ವಹಣೆಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.