ಕಾಂತರಾಜ್‌ ಆಯೋಗದ ವರದಿ ಜಾರಿಗೆ ಬಿಎಸ್ಪಿ ಆಗ್ರಹ

| Published : Oct 29 2023, 01:00 AM IST

ಸಾರಾಂಶ

ಕಾಂತರಾಜ್‌ ಆಯೋಗದ ವರದಿ ಜಾರಿಗೆ ಬಿಎಸ್ಪಿ ಆಗ್ರಹ
- ಒಳ ಮೀಸಲಾತಿ ಕೂಡಲೇ ಜಾರಿಗೆ ತರಬೇಕು । ಎಸ್ಸಿ ಎಸ್ಟಿಗೆ ಮೀಸಲಾದ ಹಣ ಬೇರೆ ಉದ್ದೇಶಕ್ಕೆ ಬಳಸಬಾರದು: ಮಾರಸಂದ್ರ ಮುನಿಯಪ್ಪ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ಮಾಡಲು ನೇಮಿಸ ಲಾಗಿದ್ದ ಕಾಂತರಾಜ್‌ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಅಂಗೀಕರಿಸಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯದ ಕೊರತೆ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಈ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸಬೇಕಾಗಿದೆ ಎಂದರು. ಈಗಿನ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಅಧಿಕಾರ ನಡೆಸಿದ್ದ ಎಲ್ಲಾ ಪಕ್ಷಗಳು ಒಳ ಮೀಸಲಾತಿಯನ್ನು ಜಾರಿಗೆ ತರುವುದಾಗಿ ಹೇಳಿದ್ದವು. ಸಿದ್ದರಾಮಯ್ಯ ಸರ್ಕಾರ ರಚಿಸಿ ಮೊದಲ ಸಂಪುಟ ಸಭೆಯಲ್ಲಿಯೇ ಒಳ ಮೀಸಲಾತಿ ಯನ್ನು ಘೋಷಿಸಿ ಜಾರಿ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೆ ಆ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದರು. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಎಸ್ ಸಿಪಿಡಿಎಸ್ ಪಿ ಹಣ ಸಮರ್ಪಕವಾಗಿ ಅನುಷ್ಠಾನವಾಗದಿದ್ದರೆ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಿದ್ದರು. ಆದರೆ, ಹಿಂದಿನ ಸರ್ಕಾರ ಸುಮಾರು ಒಂದು ಲಕ್ಷ ಸಾವಿರ ಕೋಟಿ ಹಣವನ್ನು ಮೆಟ್ರೋ ಹಾಗೂ ಇನ್ನಿತರ ನೀರಾವರಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸುಮಾರು 11 ಸಾವಿರ ಕೋಟಿ ಎಸ್ಸಿ, ಎಸ್ಟಿ ಅನುದಾನವನ್ನು 5 ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಆ ಸಮುದಾಯದ ಜನರಿಗೆ ಅನ್ಯಾಯ ಮಾಡಿದ್ದಾರೆ. ಅದೇ 11 ಸಾವಿರ ಕೋಟಿ ಹಣವನ್ನು ಸಮುದಾಯದ ನಿರುದ್ಯೋಗ ನಿವಾರಣೆ ಇನ್ನಿತರ ಉದ್ದೇಶಗಳಿಗೆ ಬಳಸಿಕೊಂಡಿದ್ದರೆ ಪರಿಶಿಷ್ಠ ಸಮುದಾಯ ಅಭಿವೃದ್ಧಿ ಆಗುತ್ತಿತ್ತು ಎಂದು ಹೇಳಿದರು. ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಗಮನ ಹರಿಸಿದ್ದು ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿದೆ. ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ, ಲೋಡ್ ಶೆಡ್ಡಿಂಗ್‌ನಿಂದ ಕೈಗಾರಿಕೋದ್ಯಮಗಳು, ರೈತರು ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ ಎಂದು ತಿಳಿಸಿದರು. ಈ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಮನೆ, ನಿವೇಶನ ಇಲ್ಲದೆ ಭೂ ರಹಿತರಾಗಿದ್ದಾರೆ. ಫಾರಂ ನಂ. 53, 57 ಮತ್ತು 94 ಸಿ, 94 ಸಿಸಿ ಯಡಿ ಜನರು ಅರ್ಜಿ ಸಲ್ಲಿಸಿ 6 ತಿಂಗಳು ಕಳೆದರೂ ಸಮಿತಿ ರಚಿಸಿ ಜಮೀನು ಮತ್ತು ನಿವೇಶನ ಮಂಜೂರು ಮಾಡಿಲ್ಲ, ಕೂಡಲೇ ಅರ್ಹ ಫಲಾನುಭವಿಗಳಿಗೆ ಜಮೀನು ಮತ್ತು ನಿವೇಶನದ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಹಾಗೂ ಕಾರ್ಮಿಕರು ತೊಂದರೆ ಅನುಭವಿ ಸುತ್ತಿದ್ದಾರೆ. ಸರ್ಕಾರ ಕೂಡಲೆ ಗಮನಹರಿಸಿ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ರಾಜಕೀಯವಾಗಿ ಬಿಎಸ್ಪಿ ಪಕ್ಷ ಹಿನ್ನಡೆ ಸಾಧಿಸುತ್ತಿರುವ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಹಿಂದೆ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜನ ಬೇಸತ್ತಿದ್ದರು ಹಾಗೂ ಕಾಂಗ್ರೆಸ್ ಪಕ್ಷ 5 ಉಚಿತ ಉಡುಗೊರೆಗಳ ಗ್ಯಾರಂಟಿ ಯೋಜನೆಗಳ ಆಸೆ ತೋರಿಸಿದ್ದರಿಂದ ಬಿಎಸ್ಪಿ ಪರವಾಗಿ ಬರಬೇಕಾದ ಮತಗಳು ಕಾಂಗ್ರೆಸ್ ಪರ ಚಲಾಯಿಸಲ್ಪಟ್ಟವು ಆ ಕಾರಣದಿಂದ ತಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಮುಂಬರಲಿರುವ ಲೋಕಸಭೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆ ಮಾಡುತ್ತಿರುವುದಾಗಿ ತಿಳಿಸಿದರು. ಬಿಎಸ್ಪಿ ಕರ್ನಾಟಕ ರಾಜ್ಯ ಉಸ್ತುವಾರಿ ಎಂ. ಕೃಷ್ಣಮೂರ್ತಿ ಮಾತನಾಡಿ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜನರ ಆಶಯ ಮರೆತು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ಆರೋಪಿಸಿದರು. 5 ಗ್ಯಾರಂಟಿಗಳನ್ನು ಹೇಳಿ ಅಧಿಕಾರ ಹಿಡಿದ ಸಿದ್ದರಾಮಯ್ಯ ಸರ್ಕಾರ ಪ್ರಾರಂಭದ 6 ತಿಂಗಳಲ್ಲಿಯೇ ವಿಫಲತೆಯ ಹಾದಿ ಹಿಡಿದಿದೆ, ಅಧಿಕಾರಕ್ಕಾಗಿ ಗುಂಪುಗಾರಿಕೆ ಮಾಡಿಕೊಂಡು ಕಚ್ಚಾಡುತ್ತಿದ್ದಾರೆ ಎಂದು ಟೀಕಿಸಿದರು. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭ್ರಷ್ಠಾಚಾರ ಹೆಚ್ಚಾಗಿದ್ದು, ಅಲ್ಪಸಂಖ್ಯಾತರು ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಭ್ರಷ್ಠಾಚಾರ ನಿಲ್ಲಿಸದಿದ್ದರೆ ಬಿಎಸ್ಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್, ರಾಜ್ಯ ಕಾರ್ಯದರ್ಶಿ ಕೆ.ಬಿ ಸುಧಾ, ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಪರಮೇಶ್, ಎಚ್.ಕುಮಾರ್, ಜಾಕೀರ್ ಹುಸೇನ್, ಎಂ. ಬಾಬು ಉಪಸ್ಥಿತರಿದ್ದರು. 28 ಕೆಸಿಕೆಎಂ 3 ಚಿಕ್ಕಮಗಳೂರಿನ ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಬಿಎಸ್ಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿದರು.