ಸಾರಾಂಶ
ಚಾಮರಾಜನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ಅಭ್ಯರ್ಥಿ ಎಂ. ಕೃಷ್ಣಮೂರ್ತಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಎನ್. ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ರಾಜಶೇಖರ್, ಪ್ರಕಾಶ್ ಅಮಚವಾಡಿ, ಕೃಷ್ಣಮೂರ್ತಿ, ರಂಗಸ್ವಾಮಿ ಇದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರಈ ಬಾರಿಯ ಚಾಮರಾಜನಗರ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ಗೆದ್ದರೆ ಸಂವಿಧಾನ ಬದಲಾವಣೆ ಆಗುತ್ತದೆ ಎಂಬ ಅಪಪ್ರಚಾರ ಹಾಗೂ ಹಣದ ಆಮಿಷದಿಂದಾಗಿ ಕ್ಷೇತ್ರದಲ್ಲಿ ಬಹುಜನ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಬಿಎಸ್ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಆಮಿಷಕ್ಕೆ ಒಳಗಾಗದೆ ನಿಷ್ಠಾವಂತ ಮತದಾರರು ಅನಿರೀಕ್ಷಿತ ಅಭ್ಯರ್ಥಿಯಾದ ನನಗೆ ೧೫,೯೦೩ ಮತಗಳನ್ನು ನೀಡಿದ್ದಾರೆ ಅವರಿಗೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
೭ ಮಂದಿ ಶಾಸಕರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ತಂದೆ ಪ್ರಭಾವಿ ಮಂತ್ರಿ, ಉಸ್ತುವಾರಿ ಸಚಿವರಿದ್ದಾರೆ. ಈಗಲಾದರು ಕ್ಷೇತ್ರದ ಆಭಿವೃದ್ದಿಗೆ ಮನಸ್ಸು ಮಾಡುವಂತೆ ಒತ್ತಾಯಿಸಿದರು. ಸಂವಿಧಾನ ರಕ್ಷಣೆ ಹಾಗೂ ಜಾರಿಗಾಗಿ ಕಾನ್ಸಿರಾಂ ಸಾಹೇಬರು ಮತ್ತು ಅಕ್ಕ ಮಾಯವತಿ ಅವರು ಸ್ಥಾಪಿಸಿದ ಪಕ್ಷ ಬಿಎಸ್ಪಿ ಅಂದಿನಿಂದಲೂ ಅದಕ್ಕಾಗಿ ಹೋರಾಡುತ್ತಲೇ ಇದೆ. ಬಿಎಸ್ಪಿ ಹೋರಾಟಕ್ಕೂ ಮುಂಚೆ ಯಾವ ರಾಜಕೀಯ ಪಕ್ಷಗಳ ಕಚೇರಿಯಲ್ಲೂ ಅಂಬೇಡ್ಕರ್ ಭಾವಚಿತ್ರ ಇರಲಿಲ್ಲ, ಈಗ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಸಂವಿಧಾನದ ಬಗ್ಗೆ ಮಾತನಾಡುತ್ತವೆ ಎಂದು ದೂರಿದರು.ಕಾಂಗ್ರೆಸ್ ಒಕ್ಕೂಟ-ಬಿಜೆಪಿ ಒಕ್ಕೂಟದ ಒಳ ಅಜೆಂಡಾ ಮೂರನೇ ಪಕ್ಷಕ್ಕೆ ಅವಕಾಶ ನೀಡದೇ ಇರುವುದು, ಇದರಿಂದಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಹುಜನ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು. ರಾಜ ಪ್ರಭುತ್ವ ಹೊರಟು ಹೋದರೂ ಈಗ ವಂಶಪಾರಂಪರ್‍ಯ ರಾಜಕಾರಣ ಚಾಲ್ತಿಯಲ್ಲಿದೆ. ಕರ್ನಾಟಕದಲ್ಲಿ ಸಚಿವರ ಮಕ್ಕಳನ್ನು ನಿಲ್ಲಿಸಿ ಗೆಲ್ಲಿಸಲಾಗಿದೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಬೇರೆ ಸಾಮಾನ್ಯ ಜನರು, ಕಾರ್ಯಕರ್ತರಿಗೆ ಅವಕಾಶವೇ ಇಲ್ಲ, ಪ್ರಭಾವ, ಹಣ ಇದ್ದರೆ ಸಾಕು ಯಾವ ಸಾಮಾಜಿಕ ಹೋರಾಟ ಮತ್ತು ರಾಜಕೀಯ ಅನುಭವವಿಲ್ಲದಿದ್ದರೂ ಜನಪ್ರತಿನಿಧಿಯಾಗಬಹದು ಇದಕ್ಕೆ ಚಾಮರಾಜನಗರ ಲೋಕಸಭಾ ಕ್ಷೇತ್ರವು ಸೇರಿದೆ ಎಂದರು.ಪಕ್ಷವವನ್ನು ಸಂಘಟಿಸುವ ಉದ್ದೇಶದಿಂದಲೇ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದ್ದರಿಂದ ಮುಂದೆ ಬರುವ ಜಿಪಂ, ತಾಪಂ ಸ್ಥಳೀಯ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದರು. ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಲು ಈಗಿನಿಂದಲೇ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಜೊತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಪಕ್ಷ ನಿರಂತರವಾಗಿ ಜನರ ಜೊತೆ ಹೋರಾಟ ಮಾಡುವುದಾಗಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಎನ್. ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ರಾಜಶೇಖರ್, ಪ್ರಕಾಶ್ ಅಮಚವಾಡಿ, ಕೃಷ್ಣಮೂರ್ತಿ, ರಂಗಸ್ವಾಮಿ ಇದ್ದರು.