ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಜೀವನಕ್ಕೆ ಐವತ್ತು ವರ್ಷ ತುಂಬಿದ ಹಿನ್ನೆಲೆ ಮೇ 9 ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಅಭಿಮಾನೋತ್ಸವಕ್ಕೆ ಅಂಬಾಸಿಡರ್ ಕಾರು (ಸಿಕೆಆರ್ 45) ಪ್ರಮುಖ ಆಕರ್ಷಣೆಯಾಗಲಿದೆ. ಯಡಿಯೂರಪ್ಪ ಅವರು ತಮ್ಮ ರಾಜಕೀಯದ ಆರಂಭದ ದಿನಗಳಲ್ಲಿ ಅಂಬಾಸಿಡರ್ ಕಾರಲ್ಲಿ ಸುತ್ತಾಡುತ್ತಿದ್ದು ಅದನ್ನು ಹಾಗೆಯೇ ಕಾಪಾಡಿಕೊಂಡು ಬರಲಾಗಿದೆ. ಅಭಿಮಾನೋತ್ಸವದಲ್ಲಿ ಈ ಕಾರು ಪ್ರದರ್ಶನಕ್ಕೆ ಇಡಲಾಗುವುದೆಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಅಭಿಮಾನೋತ್ಸವದ ಹಿನ್ನೆಲೆ ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿ ಪೂರ್ವಸಿದ್ದತೆಗಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತರುತ್ತೇನೆ ಎಂಬ ಹಠದಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟಿದ ಶ್ರಮಿಕ. ಅವರೆಂದೂ ಅದೃಷ್ಟದ ಮುಖ್ಯಮಂತ್ರಿ ಅಲ್ಲ. ಪರಿಶ್ರಮದ ಮೂಲಕ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಎಂದರು.
ಇಂದಿನ ಯುವ ರಾಜಕಾರಣಿಗಳು, ಯುವ ಪೀಳಿಗೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಾರಿದೀಪವಾಗಿದ್ದಾರೆ. ಅವರ 50 ವರ್ಷದ ರಾಜಕೀಯ ಜೀವನ ಬೇರೆಯವರಿಗೆ ಮಾರ್ಗದರ್ಶನ ವಾಗಬೇಕಿದೆ. ಯಡಿಯೂರಪ್ಪನವರೆಂದರೆ ರಾಜ್ಯದಲ್ಲಿ ಹೋರಾಟವನ್ನು ನಡೆಸುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಜನ ಸೇವೆಗಾಗಿಯೇ ತಮ್ಮ ಜೀವನನ್ನೇ ಮುಡುಪಾಗಿ ಇಟ್ಟಿದ್ದಾರೆ ಎಂದರು.ಮೇ 8ರಂದು ವಿವಿಧ ಜಾನಪದ ಕಲಾ ತಂಡದೊಂದಿಗೆ ಯಡೆಯೂರಪ್ಪ ಅವರ ಪುರ ಪ್ರವೇಶವಾಗಲಿದೆ. ಈ ಸಮಯದಲ್ಲಿ ವಿವಿಧ ರೀತಿಯ ಜಾನಪದ ಕಲಾ ಮೇಳಗಳು, ಸ್ಥಬ್ದ ಚಿತ್ರಗಳು ಇರಲಿದ್ದು, ಮೇ 9 ರಂದು ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್‍ಷಾ ಉದ್ಘಾಟನೆ ನೆರವೇರಿಸಿ ಯಡಿಯೂರಪ್ಪ ಅವರನ್ನು ಸನ್ಮಾನಿಸಲಿದ್ದಾರೆ ಎಂದರು.
ಕೊಪ್ಪಳ, ವಿಜಯನಗರ, ಬಳ್ಳಾರಿಯ ಮುಖಂಡರು ಶ್ರೀಗಳನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಈ ಮೂರು ಜಿಲ್ಲೆಗಳಿಂದಲೇ ಸುಮಾರು 1.50 ಲಕ್ಷ ಜನ ಬರುವವರಿದ್ದಾರೆ. ಜೆಡಿಎಸ್‍ನ ಕುಮಾರಸ್ವಾಮಿ ಸಹ ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಖನಿಜ ನಿಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ರಾಜ್ಯ ಕಾರ್ಯದರ್ಶಿ ರಮೇಶ್ ಗೌಡ್ರು, ವಿಭಾಗ ಸಹಾ ಪ್ರಬಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ವೆಂಕಟೇಶ್ ಯಾದವ್, ಮೋಹನ್ ಕುಮಾರ್, ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ನಗರಸಭೆ ಮಾಜಿ ಸದಸ್ಯರಾದ ಬಿ. ಸುರೇಶ್, ಮಾಜಿ ಪ್ರಧಾನ ಕಾರ್ಯದರ್ಶಿ ಗಳಾದ ಸಂಪತ್‍ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ನಂದಿ ನಾಗರಾಜ್, ರಾಜ್ಯ ರೈತ ಮೋರ್ಚಾದ ಮಲ್ಲಿಕಾರ್ಜನ್ ಇದ್ದರು.