ವೀರಶೈವ ಲಿಂಗಾಯತ ಸಮಾಜದ ಸಮುದಾಯ ಭವನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುವೀರಶೈವ ಲಿಂಗಾಯತರು ಎಲ್ಲ ಜಾತಿ, ಜನಾಂಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋದಾಗ ಮಾತ್ರ, ಬಸವಣ್ಣನವರ ವಿಚಾರಧಾರೆಗಳನ್ನು ಪಾಲನೆ ಮಾಡಿದಂತಾಗಲಿದೆ. ಆ ನಿಟ್ಟಿನಲ್ಲಿ ಇಡೀ ಸಮಾಜದ ಬಂಧುಗಳು ಪ್ರಯತ್ನಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶನಿವಾರ ಚಿಕ್ಕಮಗಳೂರು ವೀರಶೈವ ಲಿಂಗಾಯತ ಸಮಾಜ ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಶ್ರೀಮತಿ ಮೈತ್ರಾದೇವಿ, ಶ್ರೀ ಬಿ.ಎಸ್.ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿ ವೀರಶೈವ ಧರ್ಮ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ವೀರಶೈವ ಬಂಧುಗಳು ಕೇವಲ ಸಮಾಜಕ್ಕೆ ಸೀಮಿತವಾಗಿ ಚಿಂತನೆ ಮಾಡದೇ, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋದಾಗ ಮಾತ್ರ ಜಗಜ್ಯೋತಿ ಬಸವೇಶ್ವರರ ಆದರ್ಶ ಪಾಲನೆ ಮಾಡಿದಂತೆ ಎಂದರು.ರಾಷ್ಟ್ರೀಯತೆ ರಕ್ಷಣೆ ಹೊಣೆ ಹಿಂದೂ ಸಮಾಜದ್ದು, ಭರತ ಭೂಮಿ ಧರ್ಮ, ಯೋಗ, ತ್ಯಾಜ್ಯ, ಕರ್ಮ ಮತ್ತು ಸೇವೆಗೆ ಪ್ರಸಿದ್ಧ ವಾಗಿದ್ದು, ದೇವತೆಗಳು ಇಲ್ಲಿ, ಜನಿಸಲು ಇಚ್ಛಿಸುತ್ತಾರೆ. ಏಕೆಂದರೆ, ಇದು ರಾಮ ನಡೆದ, ಕೃಷ್ಣ ಬೋಧಿಸಿದ, ಈಶ್ವರನ ತಪೋ ಭೂಮಿ ಆಗಿದೆ. ಹಾಗಾಗಿ, ನಮ್ಮ ಧರ್ಮ ಸಂಸ್ಕೃತಿ, ಆಚಾರ ವಿಚಾರಗಳು ವಿಶ್ವದಲ್ಲಿಯೇ ವಿಶೇಷವಾಗಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಅನುಕರಣೆ ಆರಂಭಿಸಿದ್ದಾರೆ ಎಂದು ಹೇಳಿದರು.
ಸಮಾಜ ಸಂಘಟಿತವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸಂಘಟಿತ ಪ್ರಯತ್ನದ ಫಲವಾಗಿ ಸುಂದರವಾದ ಸಮುದಾಯ ಭವನ ನಿರ್ಮಾಣವಾಗಿದೆ. ಭವನ ಕೇವಲ ಕಲ್ಲು ಮಣ್ಣಿನ ಕಟ್ಟಡವಲ್ಲ. ಸೇವೆ, ಕಾಳಜಿ ಮತ್ತು ಚಿಕ್ಕಮಗಳೂರಿನ ವೀರಶೈವ ಲಿಂಗಾಯತ ಸಮುದಾಯ ಏಕತೆ ಪ್ರತೀಕವಾಗಿದೆ. ಈ ಭವನ ಸಮಾಜದ ಎಲ್ಲ ಉಪಪಂಗಡಗಳಲ್ಲಿ ಒಗ್ಗಟ್ಟಿನಿಂದ ಪರಸ್ಪರ ಸಹಕಾರದಿಂದ ಸಹಯೋಗದಿಂದ ಮುಂದುವರಿಯುವುದಕ್ಕೆ ಸ್ಮರಣಿಕೆಯಾಗಲಿ ಎಂದು ಹಾರೈಸಿದರು.
ಅರಣ್ಯ ಸಚಿವ ಈಶ್ವರ್ ಬಿ, ಖಂಡ್ರೆ ಮಾತನಾಡಿ, ದ್ವೇಷ, ಅಸೂಯೆಗಳಿಲ್ಲದ, ವೈಚಾರಿಕ, ವೈಜ್ಞಾನಿಕ ಹಾಗೂ ಸಹಬಾಳ್ವೆಯ ತಳಹದಿಯಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಬೇಕಿದೆ. ಅಸಮಾನತೆ, ಜಾತಿಯತೆ, ಕಂದಾಚಾರ, ಅಸ್ಪೃಶ್ಯತೆ ಇಲ್ಲದ, ಮೌಢ್ಯರಹಿತ, ಲಿಂಗರಹಿತ, ಶ್ರೇಣಿರಹಿತ ಸಮ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದಲ್ಲೇ ಶರಣರು ನಾಂದಿ ಹಾಡಿದರು. ಸಮುದಾಯದ ಮಠಮಾನ್ಯಗಳು, ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳೊಂದಿಗೆ ಎಲ್ಲ ಜಾತಿ, ಧರ್ಮದವರಿಗೆ ಆಶ್ರಯ, ಅನ್ನ, ಅಕ್ಷರ ಮತ್ತು ಉತ್ತಮ ಸಂಸ್ಕಾರ ನೀಡುವ ಅದ್ಭುತ ಕಾರ್ಯ ಮಾಡಿವೆ ಎಂದು ಸ್ಮರಿಸಿದರು.
ಸಮಾಜದ ಎದುರು ದೊಡ್ಡ ಸವಾಲಿದೆ. ಸಂಘಟನೆಯಲ್ಲಿ ಬಲವಿದೆ. ವಿಘಟನೆಯಲ್ಲಿ ದೌರ್ಬಲ್ಯವಿದೆ. ನಾವು ನಮ್ಮ ಧರ್ಮವನ್ನು ಪಾಲಿಸಿದಾಗ, ರಕ್ಷಿಸಿದಾಗ ಮಾತ್ರ ಇತರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಸಾಧ್ಯ. ಎಲ್ಲ ಜಾತಿ, ಜನಾಂಗದಲ್ಲಿ ಬಡವರು ಇರುವಂತೆ ವೀರಶೈವ ಲಿಂಗಾಯತರಲ್ಲೂ ಬಡವರಿದ್ದಾರೆ. ಅವರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮಹಾಸಭಾ ಶ್ರಮಿಸುತ್ತಿದೆ. ಸಮುದಾಯದ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯಲು ಅನುವಾಗುವಂತೆ ಜಿಲ್ಲಾಮಟ್ಟದಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಈಗಾಗಲೇ ಬೆಳಗಾವಿ, ಕಲ್ಬುರ್ಗಿ, ವಿಜಯಪುರದಲ್ಲಿ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಾಣ ಮಾಡಿದ್ದೇವೆ. ಬೆಂಗಳೂರಿನಲ್ಲಿ ಒಂದು ಸಾವಿರ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ನಿರ್ಮಿಸಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.ಈ ವೇಳೆ ಸಮುದಾಯು ಮುಖಂಡರು, ದಾನಿಗಳು ಉಪಸ್ಥಿತರಿದ್ದರು.
----ಕೋಟ್----ರೈತ ನಮ್ಮದಿಯಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದು ರೈತರು ಮರ್ತು ಶ್ರಮಿಕ ಪರವಾಗಿ ಕಳೆದ ಐದಾರು ದಶಕದಿಂದ ಸಾರ್ವಜನಿಕ ಜೀವನದಲ್ಲಿ ಹೋರಾಟ ಮಾಡಿಕೊಂಡು ಬರುತ್ತಿದೆ. ಅಧಿಕಾರ ಇರಲಿ ಅಥವಾ ಇಲ್ಲದಿರಲಿ, ಜನರ ಸೇವೆ ಮಾಡುತ್ತೇವೆ. ದೇಹದಲ್ಲಿ ಶಕ್ತಿ ಇರುವವರೆಗೆ ಜನರ ನಡುವೆ ಇರುತ್ತೇವೆ.
ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ-- ಬಾಕ್ಸ್ --
ಕುಡಿಯುವ ನೀರಿನ ಬಗ್ಗೆ ಗಮನಿಸಿ: ಬಿಎಸ್ವೈಹವಾಮಾನ ಮುನ್ಸೂಚನೆ ಪ್ರಕಾರ ಈ ಬಾರಿ ಮಳೆ ಕೊರತೆ ಎಂಬ ವರದಿ ಇದೆ. ಹೀಗಾಗಿ, ಈಗಿನಿಂದಲೇ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ರಾಜ್ಯ ಎಲ್ಲಾ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಕೆರೆ, ಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ ಕೊಂಡು ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುವಂತೆ ಕ್ರಮ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.