ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೂದನೂರಿನ ಶ್ರೀಕಾಶಿ ವಿಶ್ವನಾಥಸ್ವಾಮಿ ಹಾಗೂ ಶ್ರೀಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಫೆ.೨೧ ರಿಂದ ೨೨ರವರೆಗೆ ಅದ್ಧೂರಿಯಾಗಿ ಬೂದನೂರು ಉತ್ಸವ ಆಚರಣೆ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೂದನೂರಿನ ಶ್ರೀಕಾಶಿ ವಿಶ್ವನಾಥಸ್ವಾಮಿ ಹಾಗೂ ಶ್ರೀಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಫೆ.೨೧ ರಿಂದ ೨೨ರವರೆಗೆ ಅದ್ಧೂರಿಯಾಗಿ ಬೂದನೂರು ಉತ್ಸವ ಆಚರಣೆ ಮಾಡಲಾಗುತ್ತದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೂದನೂರು ಉತ್ಸವ ಆಚರಣೆ ಸಂಬಂಧ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಬಾರಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದರಿಂದ ೨೦೨೫ ನೇ ಸಾಲಿನಲ್ಲಿ ಬೂದನೂರು ಉತ್ಸವ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಬೂದನೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

ನಾಳೆಯಿಂದ ಉತ್ಸವದ ಕಾರ್ಯಗಳು ಪ್ರಾರಂಭವಾಗಲಿ. ಉತ್ಸವ ನಡೆಯುವ ಸ್ಥಳವನ್ನು ಸ್ವಚ್ಛಗೊಳಿಸಿ. ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆಯೋಜಿಸಲಾಗಿರುವ ಉತ್ಸವ. ಇದರಲ್ಲಿ ಯಾವುದೇ ರಾಜಕೀಯ ಬೇಡ. ಎಲ್ಲರೂ ಒಗ್ಗಟ್ಟಾಗಿ ಉತ್ಸವ ಆಚರಣೆ ಮಾಡೋಣ, ವೇದಿಕೆ ಸಮಿತಿ, ಸ್ವಾಗತ ಸಮಿತಿ ಸಾಂಸ್ಕೃತಿಕ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಉತ್ಸವದ ಆಚರಣೆ ಪೂರ್ವ ಸಿದ್ಧತೆ ಮಾಡಿಕೊಳ್ಳಿ ಎಂದರು.

ಟ್ಯಾಬ್ಲೋ ಮೆರವಣಿಗೆ:

ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥದ ಮಾದರಿಯಂತೆ ಬೂದನೂರಿನ ಶ್ರೀ ಕಾಶಿ ವಿಶ್ವನಾಥಸ್ವಾಮಿ ಹಾಗೂ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಇತಿಹಾಸ ಸಾರುವ ಟ್ಯಾಬ್ಲೋ ನಿರ್ಮಾಣ ಮಾಡಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಟ್ಯಾಬ್ಲೋ ಮೆರವಣಿಗೆ ಮಾಡುವ ಮೂಲಕ ಉತ್ಸವ ಆಚರಣೆ ಮಾಡಲಾಗುವುದು ಎಂದರು.

ಸ್ಥಳೀಯ ಕಲಾವಿದರು-ಗ್ರಾಮೀಣ ಆಟಗಳಿಗೆ ಪ್ರಾಮುಖ್ಯತೆ:

ಬೂದನೂರು ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹಾಗಾಗಿ ಜಿಲ್ಲೆಯ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಬೂದನೂರು ಉತ್ಸವದ ಅಂಗವಾಗಿ ದೇಸಿ ಆಟಗಳಾದ ಕಬ್ಬಡ್ಡಿ, ಮಡಿಕೆ ಹೊಡೆಯುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚಿತ್ರ ಕಲೆ ಸ್ಪರ್ಧೆ ಸೇರಿದಂತೆ ಇನ್ನಿತರ ಗ್ರಾಮೀಣ ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶಾಸಕರು, ಉತ್ಸವದ ನಡೆಯುವ ಸ್ಥಳದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಿ. ಉತ್ಸವದಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲಾಗುವುದು ಮತ್ತು ಆಹಾರ ಮೇಳವನ್ನು ಆಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಸೀಲ್ದಾರ್ ವಿಶ್ವನಾಥ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಹಾಗೂ ಬೂದನೂರಿನ ಮುಖಂಡರು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.