ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಬುದ್ಧನ ವಿಚಾರಗಳು ಸರ್ವಕಾಲಿಕ ಸತ್ಯತೆಯಿಂದ ಕೂಡಿವೆ ಎಂದು ಸಾಹಿತಿ ವೀರಹನುಮಾನ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಕನ್ನಡ ಭವನದಲ್ಲಿ ಬುದ್ಧ ಪೂರ್ಣಿಮಾ ನಿಮಿತ್ತ ನವಯಾನ ಬೌದ್ಧ ಧಮ್ಮ ಸಂಘ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗುರುವಾರ ಮಾತನಾಡಿ, ಸಮಾಜದಲ್ಲಿರುವ ಮೌಢ್ಯತೆಯಿಂದ ಹೊರ ಬಂದು ಜನರು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಅಶೋಕ ಸಾಮ್ರಾಟ ಯುದ್ಧದಿಂದ ಸಾವಿರಾರು ಸೈನಿಕರ ಸಾವಿನಿಂದ ಜಿಗುಪ್ಸೆಯಾಗಿ ಬೌದ್ಧ ಧರ್ಮ ಸ್ವೀಕರಿಸಿ ಮಹಾನ್ ಮಾನವತಾವಾದಿಯಾದ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಸನಾತನ ಹಿಂದು ಧರ್ಮದಿಂದ ಹೊರಬಂದು ಬೌದ್ಧ ಧರ್ಮ ಸ್ವೀಕರಿಸಿದರು. ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ತಿಳಿಸುವ ಪ್ರಜಾಪ್ರಭುತ್ವದ ಕಲ್ಪನೆ ಬುದ್ಧನ ವಿಚಾರಗಳಿಂದ ಪ್ರಭಾವಿತವಾಗಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ನೀಡಲು ಸಾಧ್ಯವಾಯಿತು ಎಂದು ಹೇಳಿದರು.
ಹೋರಾಟಗಾರ ಶ್ರೀನಿವಾಸ ಕಲವಲದೊಡ್ಡಿ ಮಾತನಾಡಿ, ಸನಾತನವಾದಿಗಳ ಗೊಂಬೆಯಾಗಿ ಬಿಜೆಪಿ ವರ್ತಿಸುತ್ತಿದೆ. ಹಿಂದುಗಳು ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್ ನಾಯಕರು ಹಿಂದುಗಳಿಗೆ ಮೋಸ ಮಾಡುತ್ತಲೆ ಬಂದಿದ್ದಾರೆ. ಮಂದಿರ, ದೇವಸ್ಥಾನಗಳ ನಿಮರ್ಮಿಸಿ ಪೂಜೆ ಮಾಡುವುದು ಸನಾತನ ವಿಚಾರವಾಗಿದ್ದು, ಇದನ್ನು ವಿರೋಧಿಸಿದ ಬುದ್ಧ, ಬಸವ, ಡಾ.ಬಿ.ಆರ್ ಅಂಬೇಡ್ಕರ್ ಸಮಾಜಕ್ಕೆ ವೈಚಾರಿಕ ಪ್ರಜ್ಞೆ ಮೂಡಿಸಿದ್ದರು. ಇಂದು ವಿಜ್ಞಾನ–ತಂತ್ರಜ್ಞಾನ ಸಾಕಷ್ಠ ಪ್ರಗತಿ ಹೊಂದಿದ್ದರು ಸಹ ಮೌಢ್ಯಾಚರಣೆ ಜೀವಂತವಾಗಿದ್ದು, ಅದನ್ನು ತೊಲಗಿಸುವ ನಿಟ್ಟಿನಲ್ಲಿ ಸಾಹಿತಿಗಳು, ವಿಚಾರವಾದಿಗಳು, ಬರಹಗಾರರು ಚಿಂತನೆ ನಡೆಸಿ ಸಾರ್ವಜನಿಕರಲ್ಲ ಜಾಗೃತಿ ಮೂಡಿಸಬೇಕು ಎಂದರು.ಈ ಸಂದರ್ಭದಲ್ಲಿ, ಹೋರಾಟಗಾರ ಎಸ್.ಮಾರೆಪ್ಪ ವಕೀಲ್, ಆಂಜನೇಯ ಕುರುಬದೊಡ್ಡಿ, ಜೆ.ಬಿ ರಾಜು , ಹೇಮರಾಜ ಅಸ್ಕಿಹಾಳ, ಲಕ್ಷ್ಮೀರೆಡ್ಡಿ, ಮಾರೆಪ್ಪ ಹರವಿ, ಈರಣ್ಣ ಬೆಂಗಾಲಿ, ಖಾಜಾ ಅಸ್ಲಂ ಅಹ್ಮದ್ ಸೇರಿದಂತೆ ಇತರರು ಇದ್ದರು.