ಕನ್ನಡಪ್ರಭ ವಾರ್ತೆ ಬೆಳಗಾವಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಹಾಗೂ ಬಡವರಪರ, ರೈತಪರ, ಮಹಿಳಾಪರ, ಯುವಕ, ಯುವತಿಯರ ಏಳಿಗೆಗಾಗಿ ರೂಪಿಸಿರುವ ಬಜೆಟ್ ಇದಾಗಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶುಪಾಲನೆಗೆ ಉತ್ತೇಜನ ನೀಡಲು ಸಹಾಯಧನ ಘೋಷಿಸಿದೆ. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವುದರೊಂದಿಗೆ SHE ಮಾರ್ಟ ಎಂಬ ವಿಶೇಷ ಯೋಜನೆ ರೂಪಿಸಿ, ನಾರಿ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಹಾಗೂ ಬಡವರಪರ, ರೈತಪರ, ಮಹಿಳಾಪರ, ಯುವಕ, ಯುವತಿಯರ ಏಳಿಗೆಗಾಗಿ ರೂಪಿಸಿರುವ ಬಜೆಟ್ ಇದಾಗಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶುಪಾಲನೆಗೆ ಉತ್ತೇಜನ ನೀಡಲು ಸಹಾಯಧನ ಘೋಷಿಸಿದೆ. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವುದರೊಂದಿಗೆ SHE ಮಾರ್ಟ ಎಂಬ ವಿಶೇಷ ಯೋಜನೆ ರೂಪಿಸಿ, ನಾರಿ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರತಿ ಜಿಲ್ಲೆಯಲ್ಲಿ ಬಾಲಕಿಯರಿಗಾಗಿ ವಸತಿ ನಿಲಯಗಳನ್ನು ಸಹ ತೆರೆಯಲಿದೆ. ದಿವ್ಯಾಂಗರಿಗಾಗಿ ದಿವ್ಯಾಂಗ ಸಹಾರಾ ಎಂಬ ಯೋಜನೆ ಸಹ ಜಾರಿಗೆ ತರಲಿದೆ ಎಂದರು.2 ಮತ್ತು 3 ಟೈಯರ್ ನಗರಗಳಲ್ಲಿ ಎಂ.ಎಸ್.ಎಂ.ಇ ಸ್ಥಾಪನೆಗೆ ಹೆಚ್ಚು ಉತ್ತೇಜನ ನೀಡಲಾಗಿದ್ದು ಯುವಕ ಯುವತಿಯರಿಗೆ ಉದ್ಯೋಗಾವಕಾಶ ದೊರೆಯುವಲ್ಲಿ ಅನುಕೂಲವಾಗಲಿದೆ. ಆತ್ಮ ನಿರ್ಭರ ಭಾರತ ಆಗುವುದರಲ್ಲಿ ಸಹಕಾರಿಯಾಗಲಿದೆ. ಅದರಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಮಹತ್ವ ಸೆಮಿ-ಕಂಡಕ್ಟರ್ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚು ಹಣಕಾಸು ಕಾಯ್ದಿರಿಸಲಾಗಿದ್ದು, ಇದರಲ್ಲಿ ನಮ್ಮ ರಾಜ್ಯಕ್ಕೆ ಫಲ ಸಿಗಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯೂ ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಯೋಜನೆ ರೂಪಿಸಿದ್ದು, ಇದರಲ್ಲಿ ಕ್ಯಾನ್ಸರ್ ರೋಗ ಪೀಡಿತರು ಬಳಸುವ ಸುಮಾರು 17 ಔಷಧಗಳ ಮೇಲೆ ಮತ್ತು ಮಧುಮೇಹ ರೋಗದ ಮೇಲಿನ ಕೆಲವು ಔಷಧಗಳ ಮೇಲೆ ತೆರಿಗೆ ಸುಂಕದಿಂದ ವಿನಾಯತಿ ನೀಡಿರುವುದು ಸಂತಸದ ವಿಷಯ. ಶಿಕ್ಷಣ, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳ ಬೆಳವಣಿಗೆಗೂ ಸಹ ಆದ್ಯತೆ ನೀಡಲಾಗಿದೆ. ಒಟ್ಟಾರೆ ಈ ಬಜೆಟ್ ಒಂದು ಪ್ರಬುದ್ಧ, ಪರಿಪೂರ್ಣ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ ಯೋಜನೆಯತ್ತ ಕರೆದೊಯ್ಯವ ಎಲ್ಲ ಅಂಶಗಳನ್ನು ಹೊಂದಿರುವ ಒಂದು ವಿಶೇಷ ಬಜೆಟ್ ಇದಾಗಿದೆ. ಇದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದ್ದಾರೆ.