ಸಂಡೂರು: ಪಟ್ಟಣದ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಿಸಬೇಕೆಂದು ವಿವಿಧ ದಲಿತ ಪರ ಸಂಘಟನೆಗಳು ಒತ್ತಾಯಿಸಿ ಇತ್ತೀಚೆಗೆ ತಾಲೂಕು ಕಚೇರಿಯಲ್ಲಿ ಡಾ.ಬಾಬು ಜಗಜೀವನ್ ರಾಮ್, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಸಂಸದ ಈ. ತುಕಾರಾಂ ಭಾನುವಾರ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ವೃತ್ತ ನಿರ್ಮಾಣದ ಕುರಿತು ಚರ್ಚಿಸಿದರು.

ಸಂಸದರು ಮಾತನಾಡಿ, ಪುರಸಭೆ ಬಸ್ ನಿಲ್ದಾಣವನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿ ಸ್ಥಳಾವಕಾಶ ಜಾಸ್ತಿ ಇರುವುದರಿಂದ ಅಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಿಸಿದರೆ ಅನುಕೂಲವಾಗಲಿದೆ. ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ವೃತ್ತ ನಿರ್ಮಿಸಿದರೆ ರಸ್ತೆ ಮುಂದಿನ ದಿನಗಳಲ್ಲಿ ವಿಸ್ತರಣೆಯಾದರೆ ವೃತ್ತವನ್ನು ಸ್ಥಳಾಂತರಗೊಳಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎರಡರಲ್ಲಿ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಿ ಎಂದು ಸಂಘಟನೆಗಳ ಮುಖಂಡರಿಗೆ ತಿಳಿಸಿದರು.

ದಲಿತ ಪರ ಸಂಘಟನೆಗಳ ಮುಖಂಡರು ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿಯೇ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಎಂದು ತಿಳಿಸಿದರು. ಆಗ ಸಂಸದರು ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಲ್ಲೂಕು ಪಂಚಾಯ್ತಿ ಇಒ ಮಡಗಿನ ಬಸಪ್ಪ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್‌ಗೌಡ, ಲೋಕೋಪಯೋಗಿ ಇಲಾಖೆ ಎಇಇ ಮೈಸೂರು ಕೊಟ್ರೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಮುಂತಾದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಉದ್ದೇಶಿದ ವೃತ್ತ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳ ವೀಕ್ಷಣೆಯ ನಂತರ ಸಂಸದರು ಮಾತನಾಡಿ, ಇಲ್ಲಿ ಖಾಸಗಿ ಜಾಗವೂ ಇದೆ. ಸರ್ವೇ ಮಾಡಿ, ಸರ್ಕಾರಿ ಜಾಗದಲ್ಲಿ ವೃತ್ತ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ನಿಗಿದಿತ ಸರ್ಕಾರಿ ಜಾಗದಲ್ಲಿ ವೃತ್ತವನ್ನು ಉತ್ತಮವಾಗಿ ನಿರ್ಮಿಸೋಣ ಎಂದರು. ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಸಂತಸವನ್ನು ವ್ಯಕ್ತಪಡಿಸಿದರು.