ಸಾರಾಂಶ
- ಸಿಇಟಿ-ನೀಟ್ ಪರೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ- - - ಕನ್ನಡಪ್ರಭ ವಾರ್ತೆ ದಾವಣಗೆರೆ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆತ್ಮಸ್ಥೈರ್ಯ ಹೆಚ್ಚಿಸುವಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಖಾಸಗಿ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸಿಇಟಿ ಮತ್ತು ನೀಟ್ ಪರೀಕ್ಷೆ ತರಬೇತಿ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತನ್ನ ಭವಿಷ್ಯದ ಗುರಿ ಹೊಂದಿ, ಆಶಾವಾದಿಗಳಾಗಬೇಕು. ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ, ಗುರಿ ಸಾಧನೆ ಹಾದಿ ಸುಗಮವಾಗುತ್ತದೆ ಎಂದರು.ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಈ ತರಬೇತಿಯು 90 ದಿನಗಳ ಕಾಲ ನಡೆಯಲಿದೆ. ಪ್ರತಿದಿನ 2 ಗಂಟೆಯಂತೆ 5 ದಿನ ತರಗತಿಗಳನ್ನು ನಡೆಸಲಾಗುತ್ತದೆ. ಜೊತೆಗೆ 19 ವರ್ಷ ಹಿಂದಿನ ಪ್ರಶ್ನೋತ್ತರಗಳನ್ನು ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಸರ್ಕಾರಿ ಕಾಲೇಜಿನಲ್ಲಿ ಇರುವಂತಹ ಅಧ್ಯಾಪಕರು ಬೋರ್ಡ್ ಪರೀಕ್ಷೆ ಬಗ್ಗೆ ಹೆಚ್ಚು ಅಧ್ಯಯನ ಮಾಡಿಸುತ್ತಾರೆ. ಹಾಗೆಯೇ ಖಾಸಗಿ ಸಂಸ್ಥೆ ಅಧ್ಯಾಪಕರು ಸಿಇಟಿ ಮತ್ತು ನೀಟ್ ಪರೀಕ್ಷೆ ಬಗ್ಗೆ ಉಪನ್ಯಾಸ ನೀಡುತ್ತಾರೆ ಎಂದು ತಿಳಿಸಿದರು.
ಯೂಟ್ಯೂಬ್ ಚಾನೆಲ್‌ಗೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಬುಕ್ ವಿತರಿಸಲಾಯಿತು. ಪಾಲಿಕೆಯ ಮಹಾಪೌರರಾದ ಕೆ.ಚಮನ್ ಸಾಬ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ, ಖಾಸಗಿ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಡಾ.ಜಯಂತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಾಯತ್ರಿ ಹಾಗೂ ವಿವಿಧ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.- - -
ಕೋಟ್ಸ್ವಿದ್ಯಾರ್ಥಿಗಳು ಏನು ಓದಬೇಕು, ಯಾವಾಗ ಓದಬೇಕು, ಏನು ಮಾಡಬೇಕು ಎಂಬ ಸ್ವಂತ ಚಿಂತನೆಗಳನ್ನು ರೂಡಿಸಿಕೊಳ್ಳಬೇಕು. ತಂದೆ-ತಾಯಿ, ಪೋಷಕರು ಕಷ್ಟಪಟ್ಟು ದುಡಿದು ವಿದ್ಯಾಭ್ಯಾಸ ಕಲಿಯಲು ಕಳುಹಿಸುತ್ತಿರುತ್ತಾರೆ. ಅದರ ಫಲವಾಗಿ ನೀವು ಅವರಿಗೆ ನಿಮ್ಮ ಸಾಧನೆ ಮೂಲಕ ಗೌರವ ತರಬೇಕು
- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿನಿಮ್ಮ ಭವಿಷ್ಯ ನಿಮ್ಮಗಳ ಕೈಯಲ್ಲಿಯೇ ಇದೆ. ಕಲಿಯುವ ಸಮಯದಲ್ಲಿ ಗಮನವಿಟ್ಟು ಶ್ರದ್ಧೆಯಿಂದ ಕಲಿತು, ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸಿಗರೇಟ್, ತಂಬಾಕು ಸೇವನೆಯಂಥ ದುಶ್ಚಟಗಳಿಂದ ದೂರವಿರಬೇಕು. ಕಾಲೇಜುಗಳಲ್ಲಿ ಇಂಥ ನಡೆಗಳು ಕಂಡಲ್ಲಿ ಪ್ರಾಂಶುಪಾಲರು ಮತ್ತು ಪೊಲೀಸರಿಗೆ ಮಾಹಿತಿ ನೀಡಬೇಕು
- ಉಮಾ ಪ್ರಶಾಂತ್, ಜಿಲ್ಲಾ ಎಸ್‌ಪಿ- - - -4ಕೆಡಿವಿಜಿ41ಃ:
ದಾವಣಗೆರೆಯಲ್ಲಿ ಶುಕ್ರವಾರ ಉಚಿತ ಸಿಇಟಿ ಮತ್ತು ನೀಟ್ ಪರೀಕ್ಷೆ ತರಬೇತಿ ಕಾರ್ಯಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.