ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಸಂಸದರು ಹಲವರ ಹಿತ ಕಾಯುವುದರ ಬದಲು ಗ್ರಾಮಸ್ಥರ ಹಿತ ಮೊದಲು ಕಾಯಲಿ. ತಾಲೂಕಿನ ನಾಗತವಳ್ಳಿ ಗ್ರಾಮದ ಸರ್ವೆ ನಂಬರ್ ೫೪ ರ ೨ ಎಕರೆ ಜಾಗವನ್ನು ಪಾರ್ಕ್‌ಗಾಗಿಯೇ ಮೀಸಲಿಡಬೇಕು. ಇಲ್ಲವಾದರೇ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದರು.ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, ಗ್ರಾಮದ ಸರ್ವೆ ನಂಬರ್ ೫೪ರಲ್ಲಿ ಪಾರ್ಕಿಗೆಂದೇ ೨ ಎಕರೆ ಜಾಗವನ್ನು ಮೀಸಲಿಡಲಾಗಿತ್ತು. ಹಾಗಾಗಿ ಅದನ್ನು ಪಾರ್ಕ್‌ಗಾಗಿಯೇ ಉಳಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಿಂದೆ ಗ್ರಾಮದ ಜನರ ಅನುಕೂಲಕ್ಕೆಂದು ನಾಗತವಳ್ಳಿ ಗ್ರಾಮದ ಸರ್ವೆ ನಂಬರ್ ೫೪ರಲ್ಲಿ ೨ ಎಕರೆ ಜಾಗವನ್ನು ಮೀಸಲಿಡಲಾಗಿತ್ತು, ಆದರೆ ಕೆಐಎಡಿಬಿ ಅಧಿಕಾರಿಗಳು ಖಾಸಗಿ ಪುಷ್ಪಗಿರಿ ವೇರ್‌ಹೌಸ್ ಮಾಲೀಕನಿಗೆ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
ಕೆಐಎಡಿಬಿ ಅಧಿಕಾರಿಗಳು ಖಾಸಗಿಯವರ ಜೊತೆ ಶಾಮೀಲಾಗಿ ಜಾಗವನ್ನು ಪುಷ್ಪಗಿರಿ ವೇರ್‌ಹೌಸ್ ಮಾಲೀಕರಿಗೆ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ. ಇದರ ವಿರುದ್ಧ ಗ್ರಾಮಸ್ಥರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಕೋರ್ಟ್ ಇದೀಗ ತಡೆಯಾಜ್ಞೆ ನೀಡಿದೆ. ಆದರೂ ಖಾಸಗಿಯವರು ಸ್ಥಳದಲ್ಲಿ ಕೆಲಸ ಮುಂದುವರೆಸಿದ್ದಾರೆ. ವಿಪರ್ಯಾಸ ಎಂದರೆ ಕೈಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಖಾಸಗಿಯವರಿಗೆ ಪೂರಕವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.೨೦೦೮ರಲ್ಲಿ ಪಾರ್ಕ್ ಆಗಿದ್ದ ಜಾಗದಲ್ಲಿ ೨೦೧೩ರಲ್ಲಿ ಬೋಗಸ್ ದಾಖಲೆ ಸಲ್ಲಿಸಿ ಅದನ್ನು ಖಾಸಗಿಯವರಿಗೆ ಮಂಜೂರು ಮಾಡಿಕೊಟ್ಟಿದ್ದಾರೆ. ಕೂಡಲೇ ಕೆಲಸ ನಿಲ್ಲಿಸಬೇಕು. ಗ್ರಾಮದ ೨ ಎಕರೆ ಜಾಗ ಗ್ರಾಮಸ್ಥರ ಅನುಕೂಲಕ್ಕೆ ಮೀಸಲಾಗಿಯೇ ಇಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದರ ಹಿಂದೆ ಜಿಲ್ಲೆಯ ಸಂಸದರೂ ಸಹಕಾರ ನೀಡುತ್ತಿದ್ದಾರೆ ಎಂದು ದೂರಿದ ರೇವಣ್ಣ, ಕೆಲವರ ಹಿತ ಕಾಯುವುದರ ಬದಲು ಗ್ರಾಮಸ್ಥರ ಹಿತ ಮೊದಲಾಗಲಿ ಎಂದರು.
ಇದೇ ವೇಳೆ ನಗರದ ಸುತ್ತಮುತ್ತ ಹತ್ತಾರು ಎಕರೆ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ನೀಡುವ ಹುನ್ನಾರ ನಡೆಯುತ್ತಿತ್ತು, ಅದನ್ನು ಉಳಿಸಲು ವಿಶೇಷ ತಂಡ ರಚಿಸಿ ಉಳಿಸುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು. ಇಂತಹ ಜಾಗವನ್ನು ಮಾಡಿಕೊಂಡು ಸೈಟ್ ಮಾಡುವ ಮೂಲಕ ದುರುಪಯೋಗ ಮಾಡಿಕೊಳ್ಳುವುದಕ್ಕೆ ನಾನು ಬಿಡುವುದಿಲ್ಲ ಎಂದು ಇದೆ ವೇಳೆ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ಜಿಲ್ಲಾ ಮಾಧ್ಯಮ ವಕ್ತಾರ ರಘು ಹೊಂಗೆರೆ ಇತರರು ಉಪಸ್ಥಿತರಿದ್ದರು.