ಸಾರಾಂಶ
ಹಾವೇರಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲವಾಗಿ ಪರಿವರ್ತಿಸಿಕೊಳ್ಳಲು ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲವು ಉತ್ತಮ ವೇದಿಕೆಯಾಗಿದೆ ಎಂದು ಹುಬ್ಬಳ್ಳಿಯ ಉದ್ಯಮಿ ಡಾ. ಚಿಗುರುಪಾಟಿ ಸತ್ಯವರ ಪ್ರಸಾದ ಹೇಳಿದರು.ತಾಲೂಕಿನ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿ ಜಯಂತಿ, ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯ ೪೧ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಅವರ ದರ್ಶನ ಪ್ರದರ್ಶನ ಫೋಟೋ ಗ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾವು ನೀಡಿದ ಅನುದಾನ ಅಪ್ಪಟ ಗಾಂಧಿವಾದಿ, ಕರ್ನಾಟಕದ ಉಕ್ಕಿನ ಮನುಷ್ಯರೆಂದೇ ಖ್ಯಾತಿ ಪಡೆದ ಗುದ್ಲೆಪ್ಪ ಹಳ್ಳಿಕೇರಿ ಅವರ ಪೋಟೋ ಗ್ಯಾಲರಿಯಾಗಿ ರೂಪಗೊಂಡಿರುವುದು ಹೆಮ್ಮೆಯ ವಿಷಯ. ಈ ಭಾಗದ ಗ್ರಾಮೀಣ ಮಕ್ಕಳಿಗಾಗಿ ಗುದ್ಲೆಪ್ಪ ಹಳ್ಳಿಕೇರಿ ಅವರು ಹೊಸರಿತ್ತಿಯಲ್ಲಿ ಸ್ಥಾಪಿಸಿರುವ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಮಕ್ಕಳ ಸುಂದರ ಭವಿಷ್ಯ ನಿರ್ಮಾಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದರು.ಪ್ರತಿಷ್ಠಾನದ ಹಿರಿಯ ಧರ್ಮದರ್ಶಿ ವೀರಣ್ಣ ಚೆಕ್ಕಿ ಮಾತನಾಡಿ, ಡಾ.ಚಿಗುರುಪಾಟಿ ಸತ್ಯವರ ಪ್ರಸಾದ ಅವರ ೧೧.೨೫ ಲಕ್ಷ ರು. ದೇಣಿಗೆಯಿಂದ ಗುದ್ಲೆಪ್ಪನವರ ೩೦೦ಕ್ಕೂ ಅಧಿಕ ಛಾಯಾಚಿತ್ರಗಳ ಸಂಗ್ರಹ ಇರುವ ವಿಶೇಷ ಫೋಟೋ ಗ್ಯಾಲರಿ ಸ್ಥಾಪಿಸಲಾಗಿದೆ. ಇದರಿಂದ ಗುರುಕುಲಕ್ಕೆ ಮತ್ತಷ್ಟು ಮೆರುಗು ಬರಲಿದೆ ಎಂದರು.ಇದೇ ಸಂದರ್ಭದಲ್ಲಿ ಗುರುಕುಲಾಚಾರ್ಯ ಗೋಪಣ್ಣ ಕುಲಕರ್ಣಿ ಅವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಕುರಿತು ರಾಜಣ್ಣ ಕುಲಕರ್ಣಿ ಮಾತನಾಡಿ, ಗುದ್ಲೆಪ್ಪನವರು ಗುರುಕುಲ ನಿರ್ಮಾಣಕ್ಕೆ ಆಜ್ಞೆ ಮಾಡಿದರು. ಅದನ್ನು ಗೋಪಣ್ಣ ಸಾಕಾರಗೊಳಿಸಿದರು ಎಂದರು. ಗುರುಕುಲದ ಹಿರಿಯ ವಿದ್ಯಾರ್ಥಿ, ಪತ್ರಕರ್ತ ರವೀಂದ್ರ ಮುದ್ದಿ ಸಂಸ್ಥಾಪಕರಿಗೆ ನುಡಿನಮನ ಸಲ್ಲಿಸಿದರು. ಸಮಾರಂಭದಲ್ಲಿ ಪ್ರತಿಷ್ಠಾನದ ಪ್ರಧಾನ ಧರ್ಮದರ್ಶಿ ರಾಜೇಂದ್ರಪ್ರಸಾದ ಹಳ್ಳಿಕೇರಿ, ಮುಖ್ಯೋಪಾಧ್ಯಾಯ ಎಂ.ಪಿ.ಗೌಡಣ್ಣನವರ, ಶಶಿ ಸಾಲಿ, ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ, ಗಣ್ಯರು, ಹಾಜರಿದ್ದರು. ಬಿ.ಎಸ್.ಯಾವಗಲ್ಲ ನಿರೂಪಿಸಿದರು. ಬಿ.ಎಸ್.ಮಡ್ಲೂರ ವಂದಿಸಿದರು.ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ: ಗುರುಕುಲದ ಹಿರಿಯ ವಿದ್ಯಾರ್ಥಿಗಳಾದ ಉದ್ಯಮಿ ಶಿವಲಿಂಗಯ್ಯ ಗಡ್ಡದೇವರಮಠ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಕಳಕೇಶ್ವರ ಪಟ್ಟಣಶೆಟ್ಟಿ, ಮಾಜಿ ಸೈನಿಕ ವಿಜಯಕುಮಾರ ಜಯಕರ, ಕೆನಡಾದ ಸಾಫ್ಟವೇರ್ ಡೆವಲಪರ್ ರೇವಣಸಿದ್ದೇಶ ಶ್ಯಾಬನವರ ಇವರನ್ನು ಗುರುಕುಲದಿಂದ ಸನ್ಮಾನಿಸಲಾಯಿತು.