ಸಾರಾಂಶ
ಚನ್ನಪಟ್ಟಣ: ಉಪಚುನಾವಣೆ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನಪಟ್ಟಣಕ್ಕೆ ನೀಡಿರುವ ₹300 ಕೋಟಿ ವಿಶೇಷ ಅನುದಾನದಲ್ಲಿ ₹60.57 ಕೋಟಿ ಕಾಮಗಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಶುಕ್ರವಾರ ಚಾಲನೆ ನೀಡಿದರು.
ತಾಲೂಕಿನ ಬೇವೂರು, ನಾಗವಾರ, ಮುದಗೆರೆ, ಮತ್ತಿಕೆರೆ, ಸಂಕಲಗೆರೆ, ದೊಡ್ಡ ಮಳೂರು, ಮಳೂರು, ಚಕ್ಕಲೂರು, ಸುಳ್ಳೇರಿ ಸೇರಿದಂತೆ 17 ಗ್ರಾಮಗಳ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, 5 ಕಡೆ ಸೇತುವೆ ನಿರ್ಮಾಣ ಹಾಗೂ 4 ಕಡೆ ರಸ್ತೆ ನಿರ್ಮಾಣಕ್ಕೆ ಹಾಗೂ ಒಂದು ಕಡೆ ಅರಸು ಸಮುದಾಯ ಭವನಕ್ಕೆ ಸೇರಿ ಒಟ್ಟು 20ಕ್ಕೂ ಹೆಚ್ಚು ಕಾಮಗಾರಿಗಳಿಗ ಡಿಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಿದರು.ತಾಲೂಕಿನ ಮಾಕಳಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಆರ್‌ಇ ಮತ್ತು ಇಲಾಖೆಯ ವಿಶೇಷ ಅನುದಾನದಡಿ ಸಿ.ಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆಯ ಅನುದಾನದಲ್ಲಿ ಸಿ.ಸಿ ರಸ್ತೆ, ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.ಮಾಕಳಿ ಗ್ರಾಮದಲ್ಲಿ ಬೃಹತ್ ಮತ್ತು ಮಾಧ್ಯಮ ನೀರಾವರಿ ಇಲಾಖೆಯ ಅನುದಾನದಡಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ನಾಗವಾರ ಗ್ರಾಮದಲ್ಲಿ ಟೊಯೋಟಾ ಫೈನಾನ್ಸಿಯಲ್ ಸರ್ವಿಸ್ ಆಫ್ ಇಂಡಿಯಾ ಸಂಸ್ಥೆ ಸಿಎಸ್‌ಆರ್ ಅನುದಾನದಡಿ ನಿರ್ಮಾಣ ಮಾಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ, ಕೆಳಗೆರೆ ಗ್ರಾಮದ ಆದಿಶಕ್ತಿ ದೇವಸ್ಥಾನದ ಬಳಿ ₹2.54 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಭೂಮಿಪೂಜೆ.
ಅವ್ವೆರಹಳ್ಳಿ, ಹೊನ್ನನಾಯಕನಹಳ್ಳಿ, ಅರಳಾಪುರ, ಮತ್ತು ಹೊಸೂರುದೊಡ್ಡಿ ಗ್ರಾಮ ವ್ಯಾಪ್ತಿಯಲ್ಲಿ ಕೈಗೊಂಡಿರುವ ₹99.95 ಲಕ್ಷದ ಸಿ.ಸಿ ರಸ್ತೆ, ಕದರಮಂಗಲದಿಂದ ಕುಂಬಾರಕಟ್ಟೆ ಮಾರ್ಗವಾಗಿ ಬೊಮ್ಮನಾಯಕನಹಳ್ಳಿಗೆ ಸೇರುವ 3.20 ಕಿ.ಮೀ. ಉದ್ದದ ರಸ್ತೆ ನಿರ್ಮಾಣ, ಮುದಗೆರೆ ಗ್ರಾಪಂ ವ್ಯಾಪ್ತಿಯ ಮಾರಿಗುಡಿ ದೇವಸ್ಥಾನದ ಬಳಿ ₹1.40 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.ಹೊಟ್ಟೆಗನ ಹೊಸಹಳ್ಳಿ, ಕೂಡ್ಲೂರು, ಕಾಡಂಕನಹಳ್ಳಿಯ ನುಣ್ಣೂರು ರಸ್ತೆ ಹತ್ತಿರ ಹಾಗೂ ನೆಲಮಾಕನಹಳ್ಳಿ ಬಳಿ ಹಾಗೂ ದೊಡ್ಡ ಮಳೂರಿನ ಬಳಿ ಕಣ್ವ ನದಿಗೆ ಅಡ್ಡಲಾಗಿ ನೀರಾವರಿ ಇಲಾಖೆಯ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರು. ಅರ್ಧಕ್ಕೆ ನಿಂತು ಹೋಗಿದ್ದ ಕೂಡ್ಲೂರಿನ ಅರಸು ಸಮುದಾಯ ಭವನಕ್ಕೆ ಮರು ಚಾಲನೆ ಹಾಗೂ ಹುಣಸನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ನಗರದ ಸ್ಪನ್‌ಸಿಲ್ಕ್ ಮಿಲ್ ಬಳಿ ಸ್ಥಳಾಂತರಗೊಂಡಿರುವ ನೂತನ ಉಪನೋಂದಾಣಿಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಡಿಸಿಎಂ ಪರಿಶೀಲನೆ ನಡೆಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೂ ಆಯಾ ಗ್ರಾಮದ ಹಿರಿಯ ನಾಗರಿಕರು, ಮಹಿಳೆಯರಿಂದಲೇ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿದ್ದು ವಿಶೇಷವೆನಿಸಿತು.ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ರಂಗನಾಥ್, ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಎಸ್‌ಪಿ ಕಾರ್ತಿಕ್ ರೆಡ್ಡಿ, ಸಿಇಒ ದಿಗ್ವಿಜಯ್ ಬೋಡ್ಕೆ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್ ಉಪಸ್ಥಿತರಿದ್ದರು.
ನಾನು ಕಳೆದ ಮೂರು ತಿಂಗಳ ಅವಧಿಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಸುಮಾರು 20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ಆದರೆ ಹಿಂದಿನ ಶಾಸಕರು ಎಷ್ಟು ಬಾರಿ ಭೇಟಿ ನೀಡಿದ್ದರು. ನಮ್ಮ ಕೆಲಸವನ್ನು ನೀವು ಮರೆಯಬಾರದು. ಚನ್ನಪಟ್ಟಣ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನಮ್ಮ ಗುರಿಯಾಗಿದೆ.ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ