ಉದಾತ್ತ ವಿಚಾರಗಳಿಂದ ಬದುಕು ಕಟ್ಟಿಕೊಳ್ಳಬೇಕು. ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಬಾದಾಮಿಯ ನಿವೃತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಉದಾತ್ತ ವಿಚಾರಗಳಿಂದ ಬದುಕು ಕಟ್ಟಿಕೊಳ್ಳಬೇಕು. ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಬಾದಾಮಿಯ ನಿವೃತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಹೇಳಿದರು.ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್. ಆರ್. ನರಸಾಪೂರ ಕಲಾ ಮತ್ತು ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಕಾಲೇಜಿನ 43ನೇ ವಾರ್ಷಿಕೋತ್ಸವ ಮತ್ತು ಅಂತಿಮ ವರ್ಷದ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾನವೀಯತೆ, ಪ್ರಾಮಾಣಿಕತೆ, ಸಹನೆ, ಕರುಣೆ ಮುಂತಾದ ಜೀವನ ಮೌಲ್ಯಗಳು ಇಲ್ಲದೆ ಹೋದಲ್ಲಿ ಮನುಷ್ಯ ಮತ್ತು ಪ್ರಾಣಿಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಆದ್ದರಿಂದ ಮನುಷ್ಯ ಪರರಿಗೆ ಉಪಕಾರ ಮಾಡುವ ನಿಟ್ಟಿನಲ್ಲಿ ಬದುಕಬೇಕು. ಗಾಂಧೀಜಿ, ಶಾಸ್ತ್ರೀಜಿ, ವಿಶ್ವೇಶ್ವರಯ್ಯ, ಅಬ್ರಾಹಿಂ ಲಿಂಕನ್ ಮುಂತಾದವರ ದೃಷ್ಟಾಂತ ನೀಡುವ ಮೂಲಕ ಅವರು ಅಳವಡಿಸಿಕೊಂಡಿದ್ದ ಜೀವನ ಮೌಲ್ಯಗಳಿಂದ ಜನತೆ ಅಂತವರನ್ನು ಜನರು ಈಗಲೂ ಸ್ಮರಿಸುತ್ತಾರೆ. ಜೀವನ ಕ್ರಿಯಾಶೀಲವಾಗಿದ್ದು, ನಕಾರಾತ್ಮಕ ವಿಚಾರಗಳಿಂದ ದೂರವಿರಬೇಕು ಎಂದು ಹೇಳಿದರು.ಸಾಮಾಜಿಕ ಜಾಲತಾಣಗಳು ಬದುಕನ್ನು ಸುಗಮಗೊಳಿಸಿರಬಹುದು. ಆದರೆ ಸಂಕೀರ್ಣತೆ ಹೆಚ್ಚಾಗಿ ಜೀವನ ಮೌಲ್ಯಗಳನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದ ಅವರು, ವಿದ್ಯಾರ್ಥಿಗಳು ಕನ್ನಡ ಭಾಷೆ, ನಾಡು-ನುಡಿಯ ಬಗೆಗೂ ಆಸಕ್ತಿ ಮತ್ತು ಅಭಿಮಾನ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಶಿಕ್ಷಣ ಕೇವಲ ಪುಸ್ತಕ ಹಾಗೂ ಪಾಠಗಳಿಗೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿ, ಆತ್ಮವಿಶ್ವಾಸತುಂಬಿ ಹಲವು ಕೌಶಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅವರ ಕನಸುಗಳು ಸಾಕಾರಗೊಳ್ಳುವಲ್ಲಿ ಕಾಲೇಜು ಶ್ರಮಿಸುತ್ತಿದೆ ಎಂದು ಹೇಳಿದರು.ಪದವಿ ನಂತರ ವಿದ್ಯಾರ್ಥಿಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಲಿದೆ. ಆಗ ಇಲ್ಲಿ ಪಡೆದ ಜ್ಞಾನ, ಕಲಿಕಾ ಅನುಭವಗಳು ನೆರವಿಗೆ ಬರಬಹುದು. ಸಂಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿದು, ಒಳ್ಳೆಯ ನಾಗರಿಕರಾಗಿ ಸಮಾಜಕ್ಕೆ ಸೇವೆ ಸಲ್ಲಿಸುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ ಮಾತನಾಡಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿನ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಸಂಸ್ಥೆ ಹೆಮ್ಮೆ ಪಡುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಇಲ್ಲಿ ಪಡೆದ ಜ್ಞಾನದಿಂದ ಎದುರಿಸಬಹುದಾಗಿದೆ. ವಿದ್ಯಾರ್ಥಿಗಳು ಪದವಿ ನಂತರವೂ ಕಲಿಕೆ ಮುಂದುವರಿಸಿ ಉತ್ತಮ ಸ್ಥಾನಮಾನ ಪಡೆಯಬೇಕೆಂದರು.ಸಂಯೋಜಕ ಡಾ.ಎಸ್.ಎಸ್.ಹಂಗರಗಿ ವರದಿವಾಚನ ಮಾಡಿದರು. ಉಪನ್ಯಾಸಕ ಎಂ.ಡಿ.ಕೋರವಾರ ಪರಿಚಯಿಸಿದರು. ಉಪನ್ಯಾಸಕ ಕೆ.ಜಿ. ಲಮಾಣಿ ನಿರೂಪಿಸಿದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ದಿಲ್ಶಾದ ನದಾಫ ವಂದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜು ಉಪ ವಿಭಾಗದ ಅಧ್ಯಕ್ಷ ಡಾ.ಪಿ.ಆರ್. ಜೋಶಿ, ಜಂಟೀ ಕಾರ್ಯದರ್ಶಿ ಡಾ.ಎಸ್.ಬಿ. ಪರ್ವತೀಕರ, ನಿವೃತ್ತ ಪ್ರಾಧ್ಯಾಪಕರಾದ ವಿ.ಎಸ್. ಮಠ, ಎಚ್.ಎಸ್. ಗಿಡಗಂಟಿ, ಸಕ್ರಿ ಕಾಲೇಜು ಪ್ರಾಚಾರ್ಯ ಅಶೋಕ ಕಂದಗಲ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಇದ್ದರು.