ಪೆಟ್ರೋಲ್ನಲ್ಲಿ ಅಕ್ರಮವಾಗಿ ಮಿತಿ ಮೀರಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯು ತೈಲ ಕಂಪನಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
-ಮಂತ್ರಿ ಮಾಲ್ ಸಮೀಪ ಪ್ರತಿಭಟನೆ । ಅಕ್ರಮ ನಡೆಸಿರುವ ತೈಲ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕನ್ನಡಪ್ರಭ ವಾರ್ತೆ ಬೆಂಗಳೂರು
ಪೆಟ್ರೋಲ್ನಲ್ಲಿ ಅಕ್ರಮವಾಗಿ ಮಿತಿ ಮೀರಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯು ತೈಲ ಕಂಪನಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.ನಗರದ ಮಂತ್ರಿ ಮಾಲ್ ಸಮೀಪದಲ್ಲಿ ಸಮಿತಿ ಅಧ್ಯಕ್ಷ ಜೆ.ಸರವಣನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಅಕ್ರಮ ನಡೆಸಿರುವ ತೈಲ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈವರೆಗೆ ಹೆಚ್ಚು ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ಹಾನಿಯಾಗಿರುವ ವಾಹನಗಳ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ಪರೀಕ್ಷೆಯಲ್ಲಿ ಹೆಚ್ಚು ಎಥೆನಾಲ್ ಮಿಶ್ರಣ ದೃಢಪಟ್ಟಿದೆ. ಪ್ರಯೋಗಾಲಯ ಪರೀಕ್ಷೆಯ ವರದಿಯನ್ನು ಕೇಂದ್ರ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಜನರಿಗೆ ಮಾಡುತ್ತಿರುವ ದ್ರೋಹ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ಮಾಲೀಕರಿಗೆ ಪರಿಹಾರ ನೀಡಲು ಆಗ್ರಹ:ಪೆಟ್ರೋಲ್ನಲ್ಲಿ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳಲ್ಲಿ ಇಂಧನ ಕ್ಷಮತೆ (ಮೈಲೇಜ್) ಕಡಿಮೆಯಾಗುತ್ತಿದೆ. ಜತೆಗೆ ಎಂಜಿನ್ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ವಾಹನಗಳ ಮಾಲೀಕರು ಪದೇ ಪದೇ ದುರಸ್ತಿ ವೆಚ್ಚವನ್ನು ಭರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಹೆಚ್ಚುವರಿ ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾಗಿದ್ದರೆ ವಿಮಾ ಕಂಪನಿಗಳ ಮೂಲಕ ಅಥವಾ ಕೇಂದ್ರ ಸರ್ಕಾರವೇ ವಾಹನ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕು. ನಿಯಮಗಳನ್ನ ಉಲ್ಲಂಘಿಸುತ್ತಿರುವ ತೈಲ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.