ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಪ್ರತಿಯೊಬ್ಬರಲ್ಲೂ ಇರುವ ಒಂದು ಆಸಕ್ತ ವಿಷಯದಲ್ಲಿ ಕೌಶಲ್ಯ ಹೊಂದಿದಾಗ ಜೀವನದಲ್ಲಿ ಎಂದಿಗೂ ವಿಫಲ ಆಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಐಕ್ಯೂಎಸಿ ಉದ್ಯೋಗ ಮತ್ತು ಮಾಹಿತಿ ಕೋಶ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಸಮನ್ವಯ ಟ್ರಸ್ಟ್, ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಬದುಕಿನ ಅವಕಾಶಗಳು ವಿಷಯವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಒಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಶಿಸ್ತು, ಸಮಯಪ್ರಜ್ಞೆ, ಶ್ರದ್ಧೆ ಹಾಗೂ ನಿರಂತರ ಶ್ರಮದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ. ಬದುಕು ಎಂದರೆ ಅವಕಾಶ. ಪ್ರತಿಯೊಬ್ಬರಿಗೂ ಅವಕಾಶ ಲಭಿಸುತ್ತದೆ. ಆದರೆ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಉತ್ತಮ ಜೀವನಕ್ಕಾಗಿ ದುಡಿಮೆ ಮುಖ್ಯ. ಜೀವನದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿ ಘನತೆ ಗೌರವ ಕಾಪಾಡಿಕೊಳ್ಳಬೇಕು. ಕೇವಲ ಪದವಿ, ಹುದ್ದೆ ಪಡೆದರೆ ಸಾಲದು ಅದು ಕುಟುಂಬ ಹಾಗೂ ಸಮಾಜಕ್ಕೆ ಸಹಕಾರಿ ಆಗಿರಬೇಕು. ಸ್ವ-ಉದ್ಯೋಗಿ ಆಗಲು ಸರ್ಕಾರ ಯೋಜನೆ ರೂಪಿಸಿ ಹಲವಾರು ಅವಕಾಶ ಕಲ್ಪಿಸಿಕೊಟ್ಟಿದೆ. ಅದನ್ನು ಎಲ್ಲರೂ ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಆರ್.ಪ್ರತಿಭಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪದವಿ ಮುಗಿದ ನಂತರ ಭವಿಷ್ಯದ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರ ನಡೆಸುವುದು ಪ್ರಯೋಜನಕಾರಿ ಆಗಿದೆ. ಅದನ್ನು ಮನಗಂಡು ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಈ ವೇಳೆ ಸ್ಪರ್ಧಾತ್ಮಕ ಪರೀಕ್ಷೆ ಪರಿಚಯ ಮತ್ತು ತಯಾರಿ, ಶ್ರದ್ಧೆ ಇದ್ದರೆ ಗೆದ್ದೆ, ಸ್ವಾವಲಂಬಿ ಬದುಕಿಗೆ ಸ್ವಯಂ ಉದ್ಯೋಗ, ಕೃಷಿ-ಖುಷಿ ಹಾಗೂ ಗ್ರಂಥಾಲಯದಲ್ಲಿ ಸಂಪನ್ಮೂಲಗಳನ್ನು ಹುಡುಕುವ ತಂತ್ರಗಳು ವಿಷಯವಾಗಿ ಗೋಷ್ಠಿಗಳು ನಡೆದವು. ಚೋರಡಿ ಕೆನರಾ ಬ್ಯಾಂಕ್ ಅಧಿಕಾರಿ ರಾಜೇಂದ್ರ ಪೈ, ರಾಷ್ಟ್ರ ಪ್ರಶಸ್ತಿ ವಿಜೇತರು ಹಾಗೂ ಶಿವಮೊಗ್ಗ ರುಹಿಕ ಕ್ರಿಯೇಶನ್ಸ್‍ಮ ಸೌಮ್ಯ ಗುರುರಾಜ್, ರಾಷ್ಟ್ರ ಪ್ರಶಸ್ತಿ ಕೃಷಿಕ ದುರ್ಗಪ್ಪ ಅಂಗಡಿ, ಹೊನ್ನಾಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಎಂ.ನಾಗರಾಜ ನಾಯ್ಕ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.ಪಪಂ ಮುಖ್ಯಾಧಿಕಾರಿ ಮಂಜುನಾಥ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಿರ್ಮಲ ಗಣೇಶ್, ಸದಸ್ಯೆ ಪುಷ್ಪಾ ಮೂರ್ತಿ, ಸಮನ್ವಯ ಟ್ರಸ್ಟ್ ಅಧ್ಯಕ್ಷರು ಗಿರಿಜಾ ದೇವಿ, ಟ್ರಸ್ಟ್ ಸದಸ್ಯ ಸಂತೋಷ್ ಕುಮಾರ್, ಐಕ್ಯೂಎಸಿ ಸಂಚಾಲಕಿ ಡಾ.ಭಾರತಿ ದೇವಿ ಸ್ವಾಗತಿಸಿ, ಗ್ರಂಥಪಾಲಕ ಡಾ.ಎಸ್.ರಾಜುನಾಯ್ಕ ವಂದಿಸಿದರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.