ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಒಂದು ರಾಷ್ಟ್ರದ ಸರ್ವತೋಮುಖ ಮತ್ತು ಸ್ವಾವಲಂಭಿ ರಾಷ್ಟ್ರದ ಅಭಿವೃದ್ಧಿಗಾಗಿ ದೇಸಿಯ ತಂತ್ರಜ್ಞಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಾರಣ ದೇಸಿಯ ತಂತ್ರಜ್ಞಾನವು ನಮ್ಮ ರಾಷ್ಟ್ರದಲ್ಲಿರುವ ಜ್ಞಾನಶಕ್ತಿಯನ್ನು ಜಗತ್ತಿಗೆ ತೋರುವುದಲ್ಲದೆ ಎಷ್ಟೋ ಅಸಂಖ್ಯಾತ ಉದ್ಯೋಗಗಳನ್ನು ಹುಟ್ಟು ಹಾಕಿ ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾವಲಂಭಿಯನ್ನಾಗಿಸುವ ಶಕ್ತಿ ದೇಸಿಯ ಉತ್ಪನ್ನ ಹಾಗೂ ತಂತ್ರಜ್ಞಾನಗಳಲ್ಲಿದೆ ಎಂದು ವಿಟಿಯು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ ಹೇಳಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬುಧವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ರಾಷ್ಟ್ರದ ವೈಜ್ಞಾನಿಕ ಪರಂಪರೆ ಮತ್ತು ಶಕ್ತಿಯನ್ನು ಜಗತ್ತಿಗೆ ರಾಮನ್ ಪರಿಣಾಮದ ಮುಖಾಂತರ ತೋರಿದ ಶ್ರೇಷ್ಠ ದಿನ ಇವತ್ತು ಎಂದು ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಿಯರು ನೀಡಿರುವ ಕೊಡುಗೆಯನ್ನು ಇಂದಿನ ಯುವಜನರ ಮುಖಾಂತರ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ದಿನವಾಗಿದೆ ಎಂದು ಹೇಳಿದರು.2024ರ ರಾಷ್ಟ್ರೀಯ ವಿಜ್ಞಾನ ದಿನವನ್ನು ಭಾರತ ಅಭಿವೃದ್ಧಿಗೆ ದೇಶಿಯ ತಂತ್ರಜ್ಞಾನ ಎಂಬ ವಿಷಯವನ್ನಿಟ್ಟುಕೊಂಡು ಆಚರಿಸಲಾಗತ್ತದೆ. ದೇಸಿಯ ತಂತ್ರಜ್ಞಾನಗಳು ಸ್ಥಳೀಯ ಸಮಸ್ಯೆಗಳ ಮೇಲೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳಾಗಿರುವುದರಿಂದ ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ನಾವೇ ಪರಿಹಾರ ಕೊಂಡುಕೊಳ್ಳುವದರ ಜೊತೆಗೆ ಬೇರೆ ರಾಷ್ಟ್ರಗಳ ತಂತ್ರಜ್ಞಾನಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತ ತಂತಜ್ಞಾನ ಆಮದು ಕಡಿಮೆಯಾಗಿ ಆರ್ಥಿಕ ಹೊರೆ ಮತ್ತು ಹಣದುಬ್ಬರ ಕಡಿಮೆಯಾಗುತ್ತದೆ. ಜೊತೆಗೆ ನಮ್ಮ ದೇಸಿ ತಂತಜ್ಞಾನವನ್ನು ಬೇರೆ ರಾಷ್ಟ್ರಕ್ಕೆ ರಫ್ತು ಸಹ ಮಾಡಬಹುದು. ಇದರಿಂದ ನಮ್ಮ ಭಾರತ ಬಲಿಷ್ಠ ರಾಷ್ಟ್ರ್ರವಾಗುತ್ತದೆ ಎಂದು ಹೇಳಿದರು.
ಕಳೆದ 10 ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದ್ದು ಜಾಗತಿವಾಗಿ ಸಂಶೋಧನೆ ಲೇಖನಗಳ ಪ್ರಕಟಣೆಯಲ್ಲಿ ಮೊದಲ 5 ರಲ್ಲಿ ಭಾರತ ಸ್ಥಾನವನ್ನು ಪಡೆದಿದೆ. ಜೊತೆಗೆ 2015 ರಲ್ಲಿ ಜಾಗತಿಕ ನಾವಿನ್ಯತೆ ಕ್ರಮಾಂಕ (ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್) ದಲ್ಲಿ 81 ನೇ ಸ್ಥಾನದಿಂದ 40ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅಷ್ಟೇ ಅಲ್ಲದೆ ಪೇಟೆಂಟ್ ನೋಂದಣಿಯಲ್ಲಿ ಕಳೆದ ಎರಡು ದಶಕದಲ್ಲಿ ಅತೀ ಹೆಚ್ಚು ಅಂದರೆ 90000 ಪೇಟೆಂಟ್ ನೋಂದಣಿಯನ್ನು ಮಾಡಿದ್ದು ರಾಷ್ಟ್ರದ ಸಂಶೋಧನಾ ಮತ್ತು ನಾವಿನ್ಯತಾ ಶಕ್ತಿಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಹೇಳಿದರು.ಈ ದಿಸೆಯಲ್ಲಿ ಇವತ್ತಿನ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಬೇರೆ ಯಾವುದೇ ರಾಷ್ಟ್ರದ ಕಂಪನಿಗಳಿಗೆ ಕೇವಲ ಸೇವೆ ನೀಡಲು ಬಳಸುವ ಬದಲಾಗಿ ರಾಷ್ಟ್ರದಲ್ಲಿರುವ ಸಂಶೋಧನಾ ಮತ್ತು ನಾವಿನ್ಯತಾ ಪೂರಕ ವಾತಾವರಣವನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮ ಸುತ್ತ ಮುತ್ತಲಿನ ಸಮಾಜವನ್ನು ಅಧ್ಯಯನ ಮಾಡಿ ಸಮಸ್ಯೆಗಳನ್ನು ವಿಶ್ಲೇಷಿಸಿ ಅವುಗಳಿಗೆ ದೇಶಿಯ ತಂತ್ರಜ್ಞಾನಗಳ ಮುಖಾಂತರ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಪಡಬೇಕು ಎಂದರು.
ಕುಲಸಚಿವ ಪ್ರೊ. ಬಿ. ಈ. ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸರಸ್ವತಿ ಭೂಸುನೂರ್ ಸ್ವಾಗತಿಸಿದರು. ನಂದಾ ಹಿರೇಮಠ ವಂದಿಸಿದರು. ಮೈತ್ರಿ ಕಟ್ಟಿ ನಿರೂಪಿಸಿದರು. ಈ ಸಂದರ್ಭದಲ್ಲಿ ವಿ ಟಿ ಯುನ ಹಣಕಾಸು ಅಧಿಕಾರಿ ಎಮ್. ಎ. ಸಪ್ನ ಮತ್ತು ಕಂಪ್ಯೂಟರ್ ಸಯನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷ ಪ್ರೊ. ಎಸ್. ಎಲ್. ದೇಶಪಾಂಡೆ ಉಪಸ್ಥಿತರಿದ್ದರು.