ಪಾಕಿಸ್ತಾನ ಘೋಷಣೆ: ಕಾಂಗ್ರೆಸ್‌- ಬಿಜೆಪಿ ಪೈಟ್‌

| Published : Feb 29 2024, 02:02 AM IST

ಪಾಕಿಸ್ತಾನ ಘೋಷಣೆ: ಕಾಂಗ್ರೆಸ್‌- ಬಿಜೆಪಿ ಪೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಸಭಾ ಚುನಾವಣೆ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬುಧವಾರ ಇಲ್ಲಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಶಿರಸಿ:

ರಾಜ್ಯಸಭಾ ಚುನಾವಣೆ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬುಧವಾರ ಇಲ್ಲಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಈ ವೇಳೆ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.ನಗರದ ಅಶ್ವಿನಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ, ಯಲ್ಲಾಪುರ ರಸ್ತೆಯ ಮಾರ್ಗವಾಗಿ ಕಾಂಗ್ರೆಸ್ ಕಚೇರಿ ಎದುರು ತೆರಳಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸುವಂತೆ ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ನಂತರ ಎರಡೂ ಪಕ್ಷದ ಕಾರ್ಯಕರ್ತರಿಂದ ಜೈ ಶ್ರೀರಾಮ, ಭಾರತ್ ಮಾತಾಕೀ ಜೈ ಘೋಷಣೆಗಳು ಮೊಳಗಿದವು.ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಂತು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುತ್ತಾರೆ ಎಂದರೆ ಎಂತಹ ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕಲು ನಾವೆಲ್ಲರೂ ಪಣ ತೋಡಬೇಕಿದೆ ಎಂದು ಕರೆ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಭಟ್ಕಳದ ತಂಜೀ ಸಂಘಟನೆ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಗೋಹತ್ಯಾ ನಿಷೇಧ, ಹಿಜಾಬ್ ಕಾಯ್ದೆ ವಾಪಸ್‌ ಪಡೆಯುವಂತೆ ವಿನಂತಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇತರ ಸಂಘಟನೆಗಳು ಕೋಮು ಗಲಭೆ ಸೃಷ್ಟಿಸುತ್ತಿವೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಕಾಯ್ದೆ ವಾಪಾಸ್‌ ಪಡೆದುಕೊಂಡರೆ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಸಂಘಟನೆ ಪ್ರತಿ ಹಂತದಲ್ಲಿಯೂ ಖಂಡಿಸಿ, ಉಗ್ರ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಸಿದರು.ನಗರ ಮಂಡಳ ಅಧ್ಯಕ್ಷ ಆನಂದ ಸಾಲೇರ ಮಾತನಾಡಿ, ನಮ್ಮ ಅನ್ನ ತಿಂದು ಪಾಕ್ ಪರ ಮಾತನಾಡುತ್ತಾರೆ ಎಂದರೆ ಅವರ ಸಂಸ್ಕೃತಿ ಅರ್ಥಮಾಡಿಕೊಳ್ಳಬೇಕು. ಅಂತಹವರಿಗೆ ಬೆಂಬಲವಾಗಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ₹ ೧೦ ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳುತ್ತಾರೆ. ಅಲ್ಪ ಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎರಡೂ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿ, ಕೈಕೈ ಮಿಲಾಯಿಸುವ ವೇಳೆ ಸಿಪಿಐ ಶಶಿಕಾಂತ ವರ್ಮ ಆಗಮಿಸಿ, ಪರಿಸ್ಥಿತಿ ಶಾಂತಗೊಳಿಸಿ, ಪ್ರತಿಭಟನೆ ಮುಕ್ತಾಯಗೊಳಿಸುವಂತೆ ತಿಳಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ರಮಾಕಾಂತ ಭಟ್ಟ, ವಿಶಾಲ ಮರಾಠೆ, ನಾಗರಾಜ ನಾಯ್ಕ, ರೇಖಾ ಹೆಗಡೆ, ರಮೇಶ ನಾಯ್ಕ, ನಂದನಸಾಗರ, ಡಾನಿ ಡಿಸೋಜಾ, ಮಹಾಂತೇಶ ಹಾದಿಮನಿ, ಶರ್ಮಿಳಾ, ಶ್ರೀಕಾಂತ ಬಳ್ಳಾರಿ, ವಿನಾಯಕ ನಾಯ್ಕ, ರಾಘು ಶೆಟ್ಟಿ ದೇವಿಕೆರೆ, ಶಿಲ್ಪಾ ನಾಯ್ಕ ಪಾಲ್ಗೊಂಡಿದ್ದರು.

ಬಿಜೆಪಿ ವಿರುದ್ಧ ಧಿಕ್ಕಾರ:

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗುತ್ತಿರುವ ವೇಳೆ ಕಾಂಗ್ರೆಸ್ ಮುಖಂಡರಾದ ಎಸ್.ಕೆ. ಭಾಗ್ವತ್, ದೀಪಕ ಹೆಗಡೆ ದೊಡ್ಡೂರು, ಶ್ರೀಪಾದ ಹೆಗಡೆ ಕಡವೆ, ಶ್ರೀನಿವಾಸ ನಾಯ್ಕ, ಸುಭಾಷ್ ನಾಯ್ಕ, ಪ್ರಸನ್ನ ನಾಯ್ಕ ಸೇರಿದಂತೆ ಇನ್ನಿತರರು ಪ್ರತ್ಯುತ್ತರವಾಗಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರಲ್ಲದೇ, ಜೈ ಶ್ರೀರಾಮ್, ವಂದೆ ಮಾತರಂ, ಭಾರತ್ ಮಾತಾಕೀ ಜೈ ಘೋಷಣೆ ಕೂಗಿದರು.

ಅನಂತ ಬೆಂಬಲಿಗರು ಗೈರು:ಬಿಜೆಪಿಯಿಂದ ಕರೆ ನೀಡಿದ್ದ ಪ್ರತಿಭಟನೆಗೆ ಕೇವಲ ಬೆರಳಣಿಕೆಯಷ್ಟು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ತಮಗೆ ಆಹ್ವಾನ ನೀಡಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಬೆಂಗಲಿಗರು ಪ್ರತಿಭಟನೆಯಿಂದ ದೂರ ಉಳಿದ್ದರು.