ಡಿ. 26ರಿಂದ 28ರ ವರೆಗೆ ಇಲ್ಲಿಯ ಕರ್ನಾಟಕ ವಿಜ್ಞಾನ ಕಾಲೇಜು ಆವರಣದಲ್ಲಿ ಬಿಲ್ಡ್‌ ಎಕ್ಸ್‌ಪೋ ಏರ್ಪಡಿಸಲಾಗಿದೆ. ಮನೆ ನಿರ್ಮಾಣ ಮಾಡುತ್ತಿರುವ ಎಂಜಿನಿಯರ್‌ ಸೇರಿದಂತೆ ಮನೆ ನಿರ್ಮಾಣ ಗುತ್ತಿಗೆದಾರರು, ಎಂಜಿನಿಯರ್‌ ಹಾಗೂ ಕಟ್ಟಡ ಕ್ಷೇತ್ರದ ವೃತ್ತಿಪರರಿಗೆ ಉಪಯುಕ್ತ ಮೇಳ ಇದಾಗಿದೆ.

ಧಾರವಾಡ:

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಆಗಾಗ ಹೊಸ ಹೊಸ ತಂತ್ರಜ್ಞಾನ ಹಾಗೂ ಬದಲಾವಣೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಅಸೋಸಿಯೇಶನ್‌ ಆಫ್‌ ಕನಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ ಹಲವು ವರ್ಷಗಳಿಂದ ಕಟ್ಟಡ ಸಾಮಗ್ರಿಗಳ, ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಬಿಲ್ಡ್‌ ಎಕ್ಸಪೋ ಏರ್ಪಡಿಸುತ್ತಿದೆ.

ಈ ಕುರಿತು ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅಸೋಸಿಯೇಶನ್‌ ಅಧ್ಯಕ್ಷ ಸುನೀಲ ಬಾಗೇವಾಡಿ, ಡಿ. 26ರಿಂದ 28ರ ವರೆಗೆ ಇಲ್ಲಿಯ ಕರ್ನಾಟಕ ವಿಜ್ಞಾನ ಕಾಲೇಜು ಆವರಣದಲ್ಲಿ ಬಿಲ್ಡ್‌ ಎಕ್ಸ್‌ಪೋ ಏರ್ಪಡಿಸಲಾಗಿದೆ. ಮನೆ ನಿರ್ಮಾಣ ಮಾಡುತ್ತಿರುವ ಎಂಜಿನಿಯರ್‌ ಸೇರಿದಂತೆ ಮನೆ ನಿರ್ಮಾಣ ಗುತ್ತಿಗೆದಾರರು, ಎಂಜಿನಿಯರ್‌ ಹಾಗೂ ಕಟ್ಟಡ ಕ್ಷೇತ್ರದ ವೃತ್ತಿಪರರಿಗೆ ಉಪಯುಕ್ತ ಮೇಳ ಇದಾಗಿದೆ. ಇಲ್ಲಿ 66 ಮಳಿಗೆಗಳನ್ನು ಹಾಕಲಾಗಿದ್ದು, ಹಲವು ಕಂಪನಿಗಳ ಪ್ರತಿನಿಧಿಗಳು ತಮ್ಮ ಉತ್ಪನ್ನಗಳ ಬಗ್ಗೆ ಪ್ರದರ್ಶನ ಹಾಗೂ ಮಾಹಿತಿ ನೀಡಲಿದ್ದಾರೆ ಎಂದರು.

ಡಿ. 26ರ ಬೆಳಗ್ಗೆ 11ಕ್ಕೆ ಶಾಸಕ ಅರವಿಂದ ಬೆಲ್ಲದ ಮೇಳಕ್ಕೆ ಚಾಲನೆ ನೀಡಿದ್ದು, ಟರ್ಬೋಸ್ಟೀಲ್‌ ಹಿರಿಯ ವ್ಯವಸ್ಥಾಪಕ ಶಿವಪುತ್ರಪ್ಪ, ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಕರ್ನಾಟಕ ವಿವಿ ಕುಲಪತಿ ಪ್ರೊ. ಎ.ಎಂ. ಖಾನ್‌ ಅತಿಥಿಗಳಾಗಿ ಭಾಗವಹಿಸುತ್ತಾರೆ. ಡಿ. 27ರಂದು ಮೇಳದ ಮಾಹಿತಿ ಕೈಪಿಡಿಯನ್ನು ಮಾಜಿ ಮೇಯರ್ ಈರೇಶ ಅಂಚಟಗೇರಿ ಬಿಡುಗಡೆ ಮಾಡಲಿದ್ದಾರೆ. ಇಸ್ಮಾಯಿಲ್‌ ತಮಟಗಾರ ಹಾಗೂ ಎಂ.ಎಸ್‌. ಸಾಳುಂಕೆ ಭಾಗವಹಿಸುತ್ತಾರೆ. ಡಿ. 28ರಂದು ನಡೆಯುವ ಸಮಾರೋಪದಲ್ಲಿ ವಿಪ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸುತ್ತಾರೆ. ಮೂರು ದಿನಗಳ ಕಾಲ ಮೇಳದ ಆವರಣದಲ್ಲಿ ಹಲವು ತಂಡಗಳಿಂದ ಜಾನಪದ ನೃತ್ಯ, ಸಂಗೀತ, ಮನರಂಜನೆ ಹಾಗೂ ಹಾಸ್ಯ ಕಾರ್ಯಕ್ರಮಗಳನ್ನು ಸಹ ಏರ್ಪಡಿಸಿದ್ದೇವೆ ಎಂದು ತಿಳಿಸಿದರು.

ಮೇಳದ ಅಧ್ಯಕ್ಷ ಅಜಿತ ಕರೋಗಲ್‌ ಮಾತನಾಡಿ, ಆಧುನಿಕ ಯುಗದಲ್ಲಿ ಕಟ್ಟಡ ಕ್ಷೇತ್ರದಲ್ಲೂ ಕ್ಷಣಕ್ಕೊಂದು ಉತ್ಪನ್ನಗಳು ಹೊರಬರುತ್ತಿವೆ. ಕಡಿಮೆ ಆದಾಯ, ಪರಿಸರ ಸ್ನೇಹಿಯಾಗಿ ಮನೆ ನಿರ್ಮಾಣವೇ ನಮ್ಮ ಆದ್ಯತೆ. ಈ ಹಿನ್ನೆಲೆಯಲ್ಲಿ ಈ ಮೇಳದಲ್ಲಿ ಮನೆ ನಿರ್ಮಾಣದ ಕನಸು ಹೊಂದಿದ ಜನರಿಗೆ ನವೀನ ಮಾದರಿಗಳನ್ನು ಒಂದೇ ಸೂರಿನಡಿ ಪರಿಚಯಿಸಲಾಗುತ್ತಿದೆ. ಬರೀ ಸಾರ್ವಜನಿಕರು ಮಾತ್ರವಲ್ಲದೇ ತಾಂತ್ರಿಕ ಪರಿಣಿತರಿಗೆ, ಕಟ್ಟಡ ನಿರ್ಮಾಣ ಕುಶಲ ಕರ್ಮಿಗಳಿಗೆ, ವಾಸ್ತು ಶಿಲ್ಪಿಗಳಿಗೆ, ಅಲಂಕಾರಿಕ ಪರಿಣಿತರಿಗೂ ಆಧುನಿಕ ವಸ್ತುಗಳ ಪರಿಚಯ, ಗುಣಮಟ್ಟ, ದರ ತಾಳಿಕೆ ಹಾಗೂ ವಸ್ತುಗಳ ಲಭ್ಯತೆ ಬಗ್ಗೆ ಮಾಹಿತಿ ನೀಡಲಾಗುವುದು. ಸಾಮಗ್ರಿಗಳ ಉತ್ಪಾದಕರು, ವಿತರಕರು, ಮಾರಾಟಗಾರರಿಂದ ಇಲ್ಲಿ ತಾಂತ್ರಿಕ ಮಾಹಿತಿ ಸಿಗುವಂತೆ ಗೋಷ್ಠಿಗಳನ್ನು ಸಹ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅರುಣ ಶೀಲವಂತ, ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ದಾಮೋದರ ಹೆಗಡೆ, ಕಬೀರ ನದಾಫ್‌ ಹಾಗೂ ಸಂಘದ ಎಂಜಿನಿಯರ್‌ ಸದಸ್ಯರಿದ್ದರು.