ಸಾರಾಂಶ
ನವಲಗುಂದ: ಸರ್ಕಾರವು ಶಾಲೆಗಳಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಅದರ ಅಂಗವಾಗಿ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ವಾರಕ್ಕೆ 6 ದಿನ ಮೊಟ್ಟೆ, ಚಿಕ್ಕೆ ಹಾಗೂ ಬಾಳೆ ಹಣ್ಣು ವಿತರಣೆ ಕಾರ್ಯಕ್ರಮವನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡಿರುವುದು ಉತ್ತಮ ಯೋಜನೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಪೂಜಾರ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 2ರಲ್ಲಿ ಪಿ.ಎಂ. ಪೋಷಣ ಶಕ್ತಿ ನಿರ್ಮಾಣ ಹಾಗೂ ಅಜೀಂಪ್ರೇಮಜಿ ಫೌಂಡೇಶನ್ ಸಹಯೋಗದಲ್ಲಿ ವಾರಕ್ಕೆ 6 ದಿನ ಮೊಟ್ಟೆ, ಚಿಕ್ಕೆ ಹಾಗೂ ಬಾಳೆ ಹಣ್ಣು ವಿತರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಎಲ್ಲ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಮುಖ್ಯಶಿಕ್ಷಕ ಮಲ್ಲಿಕಾರ್ಜುನ ವಗ್ಗರ ಮಾತನಾಡಿ, ಅಜಿಮ್ ಪ್ರೇಮ್‍ಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ₹ 1500 ಕೋಟಿ ದೇಣಿಗೆಯಾಗಿ ನೀಡುವ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಹೂಗಾರ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಲಕ್ಷ್ಮೀ ನಿಂಬಣ್ಣವರ, ಹನಮಂತ ವೈದ್ಯ, ಮಡಿವಾಳಪ್ಪ ಕೊಳಲಿನ, ಫಕ್ಕೀರಪ್ಪ ಸಂಶಿ, ಸುಮಂಗಲಾ ದೋಟಿಕಲ್ಲ, ಎಸ್.ಎಫ್. ನೀರಲಗಿ, ಡಿ.ಟಿ. ದಾಸರ, ಎಂ.ಎಚ್. ಚಿಕನಾಳ, ಶ್ರೀನಿವಾಸ ಅಮಾತೆಣ್ಣವರ, ಎಲ್.ಎ. ಮಠ, ಎಸ್.ಎಲ್. ಮಲ್ಲಿಕೇರಿ, ರೇಖಾ ಎಂ., ರತ್ನಾ ವ್ಹಿ, ಶೈಲಾ ಕುಂಬಾರ ಉಪಸ್ಥಿತರಿದ್ದರು.