ಬರಗಾಲದಲ್ಲೂ ಬಂಪರ್‌ ಈರುಳ್ಳಿ

| Published : Nov 05 2023, 01:16 AM IST

ಸಾರಾಂಶ

ಧಾರವಾಡ ಜಿಲ್ಲೆಯ ಎಂಟೂ ತಾಲೂಕುಗಳು ಬರಗಾಲ ಪೀಡಿತ ಎಂದು ಘೋಷಣೆಯಾಗಿವೆ. ಅದರಲ್ಲೂ ನವಲಗುಂದ ರೈತರು ಬಹುತೇಕ ಒಣ ಬೇಸಾಯ ನೆಚ್ಚಿಕೊಂಡಿದ್ದಾರೆ. ತೀವ್ರ ಬರಗಾಲದ ಇಂತಹ ಸಮಯದಲ್ಲೂ ಈ ರೈತ ಕ್ವಿಂಟಲ್‌ಗಟ್ಟಲೇ ಈರುಳ್ಳಿ ಬೆಳೆದು ಬಂಪರ್‌ ಲಾಭ ಪಡೆದಿದ್ದಾರೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಈ ಬಾರಿ ಮಳೆ ಬಂದಿಲ್ಲ, ಬರಗಾಲ ಐತಿ. ಬಿತ್ತನೆ ಮಾಡಿ ನಷ್ಟವೇತಕ್ಕೆ ಎಂದು ಸುಮ್ಮನೆ ಕೂರದ ರೈತನೋರ್ವ, ತಮ್ಮ ಹೊಲದಿಂದ ಸುಮಾರು ಹತ್ತು ಕಿ.ಮೀ. ದೂರದ ಬೆಣ್ಣಿಹಳ್ಳದಿಂದ ಪೈಪ್‌ಲೈನ್‌ ಮೂಲಕ ನೀರು ತಂದು ಬಂಗಾರದಂತಹ ಈರುಳ್ಳಿ ಬೆಳೆದಿದ್ದಾರೆ.

ಧಾರವಾಡ ಜಿಲ್ಲೆಯ ಎಂಟೂ ತಾಲೂಕುಗಳು ಬರಗಾಲ ಪೀಡಿತ ಎಂದು ಘೋಷಣೆಯಾಗಿವೆ. ಅದರಲ್ಲೂ ನವಲಗುಂದ ರೈತರು ಬಹುತೇಕ ಒಣ ಬೇಸಾಯ ನೆಚ್ಚಿಕೊಂಡಿದ್ದಾರೆ. ತೀವ್ರ ಬರಗಾಲದ ಇಂತಹ ಸಮಯದಲ್ಲೂ ಈ ರೈತ ಕ್ವಿಂಟಲ್‌ಗಟ್ಟಲೇ ಈರುಳ್ಳಿ ಬೆಳೆದು ಬಂಪರ್‌ ಲಾಭ ಪಡೆದಿದ್ದಾರೆ.

ಲಕ್ಷಗಟ್ಟಲೇ ಲಾಭ

ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ರವಿರೆಡ್ಡಿ ರೂಗಿ ಹಾಗೂ ಅವರ ನಾಲ್ವರು ಸಹೋದರರು ಅಕ್ಷರಶಃ ಬರಗಾಲ ಗೆದ್ದಿದ್ದಾರೆ. ತಮ್ಮ 24 ಎಕರೆ ಜಮೀನಿನಲ್ಲಿ ಅಂದಾಜು 1400 ಕ್ವಿಂಟಲ್‌ ಈರುಳ್ಳಿ ಬೆಳೆದಿದ್ದಾರೆ. ಇಲ್ಲಿಯ ವರೆಗೆ 600 ಕ್ವಿಂಟಲ್‌ ಮಾರಾಟ ಮಾಡಿದ್ದು ₹25 ಲಕ್ಷ ಆದಾಯ ಗಳಿಸಿದ್ದಾರೆ. ಇನ್ನೂ 800 ಕ್ವಿಂಟಲ್‌ ಬೆಳೆ ಇದ್ದು, ಇದೇ ರೀತಿ ಈರುಳ್ಳಿ ಬೆಲೆ ಇದ್ದರೆ ₹25 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ ರೂಗಿ ಕುಟಂಬದವರು.

ಭಗೀರಥ ಪ್ರಯತ್ನ

ಈರುಳ್ಳಿ ಮಾತ್ರವಲ್ಲದೇ ರೂಗಿ ಅವರು ಇತರೆ ಸಾಂಪ್ರದಾಯಿಕ ಬೆಳೆಗಳನ್ನು ಸಹ ಬೆಳೆದಿದ್ದಾರೆ. ಇದಕ್ಕಾಗಿ ಭಗೀರಥ ಪ್ರಯತ್ನ ಮಾಡಿದ್ದು ನಿಜಕ್ಕೂ ಮೆಚ್ಚುವಂತಹುದ್ದು. ತಮ್ಮ ಜಮೀನಿನಿಂದ ಹತ್ತು ಕಿಮೀ ದೂರದಲ್ಲಿರುವ ಬೆಣ್ಣೆಹಳ್ಳದಿಂದ ಪೈಪ್ ಲೈನ್ ಮೂಲಕ ನೀರು ತಂದಿದ್ದಾರೆ.‌ ಮಳೆ‌ಗಾಲದಲ್ಲಿ ಬೆಣ್ಣೆಹಳ್ಳದ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಆದರೆ, ಆ ಸಮಯದಲ್ಲಿ ಅಲ್ಲಿ ಪಂಪ್‌ಸೆಟ್ ಮೋಟಾರ್ ಅಳವಡಿಸಿ ನೀರು ಎತ್ತುವ ಇವರು, ಪೈಪ್‌ಪೈನ್ ಮೂಲಕ ತಮ್ಮ ಹೊಲಕ್ಕೆ ತಂದಿದ್ದಾರೆ. ಅಲ್ಲಿ ಒಂದು ಬೃಹತ್ ಕೆರೆ ಮಾಡಿದ್ದು, ಅಲ್ಲಿ ನೀರು ಸಂಗ್ರಹಿಸುತ್ತಾರೆ. ಬಳಿಕ ಆ ಕೆರೆಯಿಂದ ನೀರನ್ನು ಅಗತ್ಯವಿದ್ದಾಗ ಹೊಲಕ್ಕೆ ಬಳಸಿ ಬಂಪರ್‌ ಬೆಳೆ ತೆಗೆದಿದ್ದಾರೆ.

ನಾವು ಇದೇ ಮೊದಲಲ್ಲ, ಪ್ರತಿವರ್ಷ ಈರುಳ್ಳಿ ಬೆಳೆಯುತ್ತೇವೆ. ಆದರೆ, ಈರುಳ್ಳಿ ಬೆಳೆ ಕೈಗೆ ಬರುವಷ್ಟರಲ್ಲಿ ದರ ಏಳಿತವಾಗುತ್ತಿತ್ತು. ಈ ಬಾರಿ ಸರಿಯಾದ ಸಮಯಕ್ಕೆ ಈರುಳ್ಳಿ ಕೈ ಹಿಡಿದಿದೆ. ಸದ್ಯ ಈರುಳ್ಳಿಗೆ ಈ ಭಾಗದಲ್ಲಿ ಕೆಜಿಗೆ ₹60-70 ವರೆಗೆ ಬೆಲೆ ಬಂದಿದೆ. ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇದೆ. ಹೀಗಾಗಿ ಹೆಚ್ಚಿನ ಲಾಭವನ್ನು ನಿರೀಕ್ಷೆ ಮಾಡಿದ್ದೇವೆ ಎನ್ನುತ್ತಾರೆ ರೈತ ರವಿರೆಡ್ಡಿ ರೂಗಿ.