ಮೆಕ್ಕೆಜೋಳಕ್ಕೆ ಬಂಪರ್‌ ಬೆಲೆ, ರೈತರಲ್ಲಿಲ್ಲ ಬೆಳೆ

| Published : Jan 06 2024, 02:00 AM IST

ಸಾರಾಂಶ

ಬರಗಾಲದಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ರೈತರಿಗೆ ಬಿತ್ತನೆ ಮಾಡಿದ ಖರ್ಚು ಕೂಡ ಸಿಗದ ರೀತಿಯಲ್ಲಿ ಬೆಳೆ ಹಾಳಾಗಿದೆ. ಸುಮಾರು 50 ಸಾವಿರ ಹೆಕ್ಟೇರ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಇಳುವರಿ ಇದ್ದು, ಸಂಕಷ್ಟದಲ್ಲಿರುವ ರೈತರು ಬೆಳೆ ದಾಸ್ತಾನು ಮಾಡಿಕೊಳ್ಳುವ ಶಕ್ತಿಯಿಲ್ಲದೇ ಈ ಹಿಂದೇಯ ಮಾರಾಟ ಮಾಡಿಕೊಂಡಿದ್ದಾರೆ. ಬೀಜ, ಗೊಬ್ಬರ ಖರೀದಿಗೆ ವ್ಯಾಪಾರಸ್ಥರಿಂದ ಮುಂಗಡ ಹಣ ಪಡೆದವರು ಅವರಿಗೇ ಬೆಳೆ ಮಾರುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ನಾರಾಯಣ ಹೆಗಡೆ ಹಾವೇರಿ

ಮೆಕ್ಕೆಜೋಳದ ಕಣಜ ಎನಿಸಿರುವ ಜಿಲ್ಲೆಯಲ್ಲಿ ಬರಗಾಲದಿಂದ ಎಲ್ಲ ಬೆಳೆಗಳು ಹಾನಿಯಾಗಿವೆ. ರೈತರಲ್ಲಿ ಬೆಳೆಯೇ ಇಲ್ಲದಿರುವ ಈ ಸಂದರ್ಭದಲ್ಲಿ ಮೆಕ್ಕೆಜೋಳಕ್ಕೆ ಬಂಪರ್‌ ಬೆಲೆ ಬಂದಿದೆ. ಕ್ವಿಂಟಲ್‌ಗೆ ₹ 2200 ದಾಟಿದ್ದು, ರೈತರು ಕೈಹಿಸುಕಿಕೊಳ್ಳುವಂತಾಗಿದೆ.

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆಯಿಲ್ಲದೇ ಜಿಲ್ಲೆಯಲ್ಲಿ ಶೇ.70ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾಳಾಗಿದೆ. ಅದರಲ್ಲೂ ಜಿಲ್ಲೆಯಲ್ಲಿ ಮೆಕ್ಕೆಜೋಳ ಪ್ರಧಾನ ಬೆಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಸುಮಾರು 2 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಆದರೆ, ಮಳೆಯಿಲ್ಲದೇ ಬಹುತೇಕ ಕಡೆಗಳಲ್ಲಿ ಬೆಳೆ ಸಂಪೂರ್ಣವಾಗಿ ಒಣಗಿ ಹಾಳಾದವು. ಸ್ವಲ್ಪ ನೀರಾವರಿ ಸೌಲಭ್ಯ ಹೊಂದಿದ ರೈತರ ಬೆಳೆ ಉಳಿದುಕೊಂಡಿದ್ದರೂ ಇಳುವರಿ ಪ್ರಮಾಣದಲ್ಲೂ ಭಾರೀ ಕುಸಿತವಾಗಿದೆ. ಇದರಿಂದ ರೈತರಲ್ಲಿ ಮೆಕ್ಕೆಜೋಳ ದಾಸ್ತಾನು ಕಡಿಮೆಯಿದ್ದು, ಈ ಸಂದರ್ಭದಲ್ಲಿ ಧಾರಣೆಯಲ್ಲಿ ಏರಿಕೆಯಾಗಿದೆ.

ಕ್ವಿಂಟಲ್‌ಗೆ ₹ 2,200 ದರ: ಸಾಮಾನ್ಯವಾಗಿ ಮೆಕ್ಕೆಜೋಳದ ದರ ಕ್ವಿಂಟಲ್‌ಗೆ ₹1500ರ ಆಸುಪಾಸಿನಲ್ಲೇ ಇರುತ್ತಿದ್ದವು. ಆದರೆ, ಸರಿಯಾಗಿ ಮಳೆಯಾದರೆ ಎಕರೆಗೆ 25 ಕ್ವಿಂಟಲ್‌ವರೆಗೂ ಮೆಕ್ಕೆಜೋಳ ಬೆಳೆ ಬರುತ್ತಿತ್ತು. ಆದರೆ, ಈ ಸಲ ಮಳೆಯಿಲ್ಲದೇ ಬೆಳೆ ಸೊರಗಿದ್ದರಿಂದ ಎಕರೆಗೆ 10ರಿಂದ 15 ಕ್ವಿಂಟಲ್‌ ಬಂದರೆ ಹೆಚ್ಚು ಎಂಬಂತಾಗಿದೆ. ಇಳುವರಿ ಕುಸಿತದಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಆವಕವಾಗುತ್ತಿಲ್ಲ. ಇದರಿಂದ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡಿದೆ. ಹಾವೇರಿ, ರಾಣಿಬೆನ್ನೂರು ಸೇರಿದಂತೆ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಕಳೆದ ಒಂದು ವಾರದಿಂದ ಕ್ವಿಂಟಲ್‌ಗೆ ₹ 2000 ಮೇಲ್ಪಟ್ಟು ಖರೀದಿಯಾಗುತ್ತಿದೆ. ಗುರುವಾರ ₹ 2200ಗೆ ಏರಿಕೆ ಕಂಡಿದೆ. ಇದು ಈ ವರ್ಷದ ಗರಿಷ್ಟ ಧಾರಣೆಯಾಗಿದ್ದು, ಇನ್ನೂ ಏರಿಕೆಯಾಗುವ ನಿರೀಕ್ಷೆಯಿದೆ.

ರೈತರಲ್ಲಿಲ್ಲ ಬೆಳೆ ದಾಸ್ತಾನು: ಬರಗಾಲದಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ರೈತರಿಗೆ ಬಿತ್ತನೆ ಮಾಡಿದ ಖರ್ಚು ಕೂಡ ಸಿಗದ ರೀತಿಯಲ್ಲಿ ಬೆಳೆ ಹಾಳಾಗಿದೆ. ಸುಮಾರು 50 ಸಾವಿರ ಹೆಕ್ಟೇರ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಇಳುವರಿ ಇದ್ದು, ಸಂಕಷ್ಟದಲ್ಲಿರುವ ರೈತರು ಬೆಳೆ ದಾಸ್ತಾನು ಮಾಡಿಕೊಳ್ಳುವ ಶಕ್ತಿಯಿಲ್ಲದೇ ಈ ಹಿಂದೇಯ ಮಾರಾಟ ಮಾಡಿಕೊಂಡಿದ್ದಾರೆ. ಬೀಜ, ಗೊಬ್ಬರ ಖರೀದಿಗೆ ವ್ಯಾಪಾರಸ್ಥರಿಂದ ಮುಂಗಡ ಹಣ ಪಡೆದವರು ಅವರಿಗೇ ಬೆಳೆ ಮಾರುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈಗ ದರ ಏರಿಕೆಯಾಗುತ್ತಿರುವುದನ್ನು ಕಂಡು ಕೈಹಿಸುಕಿಕೊಳ್ಳುತ್ತಿದ್ದಾರೆ. ಅತಿಸಣ್ಣ ರೈತರೇ ಹೆಚ್ಚಿರುವ ಜಿಲ್ಲೆಯಲ್ಲಿ ಈ ಸಮಸ್ಯೆ ಕಾಡುತ್ತಿದೆ.

ಎಪಿಎಂಸಿಗೆ ಆವಕ ಕಡಿಮೆ: ಜಿಲ್ಲೆಯ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಮೆಕ್ಕೆಜೋಳಗಳು ಈ ಹಿಂದೆ ಬಹುತೇಕ ಎಪಿಎಂಸಿಗಳಲ್ಲೇ ವ್ಯಾಪಾರವಾಗುತ್ತಿದ್ದವು. ಆದರೆ, ಎರಡು ವರ್ಷಗಳಿಂದ ಎಪಿಎಂಸಿ ಆವರಣಗಳು ಖಾಲಿ ಹೊಡೆಯುತ್ತಿವೆ. ಪ್ರತಿ ಗ್ರಾಮದಲ್ಲಿ ವ್ಯಾಪಾರಸ್ಥರು ಹುಟ್ಟಿಕೊಂಡಿದ್ದಾರೆ. ಅವರು ರೈತರಿಂದ ಮೆಕ್ಕೆಜೋಳ ಖರೀದಿಸಿ ಅದನ್ನು ನೋಂದಾಯಿತ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ದೊಡ್ಡ ವ್ಯಾಪಾರಸ್ಥರು ಉತ್ಪನ್ನ ಖರೀದಿಸಿ ನೇರವಾಗಿ ಸಾಗಣೆ ಮಾಡುತ್ತಿದ್ದಾರೆ. ಹಿಂದಿನ ವರ್ಷಗಳಿಂದ ಹೋಲಿಸಿದರೆ ಎಪಿಎಂಸಿಗಳಿಗೆ ಆಗುತ್ತಿರುವ ಆವಕದಲ್ಲಿ ಶೇ. 80ಕ್ಕೂ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮೆಕ್ಕೆಜೋಳಕ್ಕೆ ಈ ಸಲ ಉತ್ತಮ ಬೆಲೆ ಬಂದಿದೆ. ಆದರೆ, ರೈತರಲ್ಲಿ ಉತ್ಪನ್ನ ಇಲ್ಲವಾಗಿದೆ. ಬರಗಾಲದಿಂದ ಇಳುವರಿಯಲ್ಲಿ ಭಾರಿ ಕುಸಿತವಾಗಿದೆ. ಆದ್ದರಿಂದ ಬೆಲೆಯಿದ್ದರೂ ರೈತರಲ್ಲಿ ಬೆಳೆಯಿಲ್ಲದಂತಾಗಿದೆ. ಅಲ್ಲದೇ ಎಪಿಎಂಸಿಗೆ ಬರುವ ಆವಕ ಕಡಿಮೆಯಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯಕ ತಿಳಿಸಿದ್ದಾರೆ.