ಈ ವರ್ಷ ಮಲೆನಾಡಿನ ರೈತರ ಬೆಳೆಗಳಿಗೆ ಬಂಪರ್ ಬೆಲೆ : ಇಳುವರಿಯೂ ಹೆಚ್ಚು

| Published : Apr 30 2024, 02:16 AM IST / Updated: Apr 30 2024, 02:26 PM IST

ಈ ವರ್ಷ ಮಲೆನಾಡಿನ ರೈತರ ಬೆಳೆಗಳಿಗೆ ಬಂಪರ್ ಬೆಲೆ : ಇಳುವರಿಯೂ ಹೆಚ್ಚು
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡು ರೈತರಿಗೆ ಕಷ್ಟದ ದಿನಗಳೇ ಜಾಸ್ತಿ. ಆದರೆ, ಈ ವರ್ಷ ಮಳೆ ಕಡಿಮೆಯಾಗಿ ಬರಗಾಲವಿದ್ದರೂ ಮಲೆನಾಡಿ ನಲ್ಲಿ ಬೆಳೆಯುವ ಎಲ್ಲಾ ಬೆಳೆಗಳ ಬೆಲೆ ಕಟಾವು ಸಮಯದಲ್ಲೇ ಏರಿಕೆಯಾಗಿದ್ದು ರೈತರಿಗೆ ವರದಾನವಾಗಿದೆ.  

 ಯಡಗೆರೆ ಮಂಜುನಾಥ್‌,

 ನರಸಿಂಹರಾಜಪುರ:  ಮಲೆನಾಡು ರೈತರಿಗೆ ಕಷ್ಟದ ದಿನಗಳೇ ಜಾಸ್ತಿ. ಆದರೆ, ಈ ವರ್ಷ ಮಳೆ ಕಡಿಮೆಯಾಗಿ ಬರಗಾಲವಿದ್ದರೂ ಮಲೆನಾಡಿ ನಲ್ಲಿ ಬೆಳೆಯುವ ಎಲ್ಲಾ ಬೆಳೆಗಳ ಬೆಲೆ ಕಟಾವು ಸಮಯದಲ್ಲೇ ಏರಿಕೆಯಾಗಿದ್ದು ರೈತರಿಗೆ ವರದಾನವಾಗಿದೆ. ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಅತಿಯಾದ ಮಳೆ ಬೀಳುವುದೇ ಜಾಸ್ತಿ. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಅಡಕೆ, ಕಾಫಿ ಬೆಳೆಗಳಿಗೆ ಅತಿಯಾದ ಮಳೆ ಬಂದ ವರ್ಷಗಳಲ್ಲಿ ಕೊಳೆ ರೋಗ ಬಂದು ಫಸಲು ಕಳೆದು ಕೊಳ್ಳುವುದೇ ಹೆಚ್ಚು. ಕಳೆದ ಬಾರಿ ಅತಿ ಕಡಿಮೆ ಮಳೆಯಾಗಿದ್ದರೂ ಮಲೆನಾಡಿನ ಅಡಕೆ ತೋಟಗಳಲ್ಲಿ ಉತ್ತಮ ಫಸಲೇ ಬಂದಿದೆ. ಅಡಕೆ ತೋಟದಲ್ಲಿ ಇರುವ ಕಾಳು ಮೆಣಸು, ಖೋಖೋ, ಜಾಯಿಕಾಯಿ, ಲವಂಗ ಫಸಲು ಏರಿಕೆಯಾಗಿದೆ.

ಈ ವರ್ಷ ಬತ್ತದ ಫಸಲು ಉತ್ತಮವಾಗಿದ್ದು ಇದರ ಜೊತೆಗೆ ದಾಖಲೆ ಎಂಬಂತೆ ಬತ್ತಕ್ಕೂ ಉತ್ತಮ ಧಾರಣೆ ಬಂದಿದೆ. ಹಿಂದಿನ ಕಾಲದಲ್ಲಿ ರೈತ ಬೆಳೆದ ಫಸಲು ಕಟಾವಿಗೆ ಬರುತ್ತಿದ್ದಂತೆ ಮಲೆನಾಡಿನ ಎಲ್ಲಾ ಬೆಳೆಗಳ ಬೆಲೆ ಕುಸಿಯುತ್ತಿದ್ದವು. ಸಾಲ ಮಾಡಿದ ರೈತರು ಅನಿವಾರ್ಯವಾಗಿ ತಾವು ಬೆಳೆದ ಬೆಳೆಗಳನ್ನು ಕಡಿಮೆ ದರದಲ್ಲೇ ಮಾರಾಟ ಮಾಡಿ ಸಾಲ ತೀರಿಸುತ್ತಿದ್ದರು. ವ್ಯಾಪಾರಸ್ಥರು ಬೆಳೆಗಳು ಕೊಂಡು ದಾಸ್ತಾನು ಮಾಡಿ ಉತ್ತಮ ಧಾರಣೆ ಬಂದ ನಂತರ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು.

ಈ ವರ್ಷ ಅಪರೂಪಕ್ಕೆ ಎಂಬಂತೆ ಜನವರಿಯಿಂದಲೇ ಎಲ್ಲಾ ಬೆಳೆಗಳ ಧಾರಣೆ ಏರುತ್ತಾ ಹೋಗಿ ಈಗ ಸ್ಥಿರವಾಗಿ ನಿಂತಿದೆ. ಎಲ್ಲಾ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಉತ್ತಮ ಧಾರಣೆಗೆ ಮಾರಾಟ ಮಾಡಲು ಅವಕಾಶ ಸಿಕ್ಕಂತಾಗಿದೆ. ಜೊತೆಗೆ ಈ ವರ್ಷ ಮಳೆ ಕಡಿಮೆಯಾದ ಪರಿಣಾಮ ಅಡಕೆ ಕೊಳೆ ರೋಗ, ಎಲೆ ಚುಕ್ಕಿ ರೋಗ, ಕಾಫಿ ಕೊಳೆ ರೋಗ ಸಹ ಕ್ಷೀಣಿಸಿದೆ. ಕಾಳು ಮೆಣಸಿಗೆ ಬರುವ ಸೊರಗು ರೋಗ ಸಹ ಕಡಿಮೆಯಾಗಿತ್ತು.

ಏರಿದ ಬೆಳೆಗಳ ಧಾರಣೆ:

ಅಡಕೆ ರಾಶಿ ಹಿಡಿ 1 ಕ್ವಿಂಟಾಲ್ ಗೆ ಕಳೆದ ವರ್ಷ 47 ರಿಂದ 48 ಸಾವಿರ ಇತ್ತು. ಈ ವರ್ಷ 53 ರಿಂದ 54 ಸಾವಿರ ರುಪಾಯಿಗೆ ಏರಿದೆ. ಕಳೆದ ವರ್ಷ 400 ರಿಂದ 450 ರು ಇದ್ದ ಕಾಳು ಮೆಣಸು ಈ ವರ್ಷ 500 ರಿಂದ 600 ರುಪಾಯಿಗೆ ಏರಿದೆ. ಕಾಫಿ ಕಳೆದ ವರ್ಷ 50 ಕೆಜಿ ಮೂಟೆಗೆ 3 ಸಾವಿರದಿಂದ 5 ಸಾವಿರ ರು. ಇತ್ತು, ಈ ಬಾರಿ 10 ರಿಂದ 11 ಸಾವಿರ ಆಗಿದೆ. ರಬ್ಬರ್‌ ಕಳೆದ ವರ್ಷ 1 ಕೆಜಿಗೆ 130 ರುಪಾಯಿ , ಈ ವರ್ಷ 175 ರುಪಾಯಿಗೆ ಏರಿಕೆ. ಲವಂಗ ಕಳೆದ ವರ್ಷ 1 ಕೆಜಿಗೆ 750 ರುಪಾಯಿ ಇತ್ತು. ಈ ವರ್ಷ 900 ರುಪಾಯಿಗೆ ಏರಿದೆ. ಜಾಯಿಕಾಯಿ ಪತ್ರೆ ಕಳೆದ ವರ್ಷ 1 ಕೆಜಿಗೆ 1400 ಇತ್ತು. ಈ ವರ್ಷ 1600 ಕ್ಕೆ ಏರಿಕೆಯಾಗಿದೆ.

ಕೋ ಕೋ 1 ಕೆಜಿಗೆ ಕಳೆದ ವರ್ಷ 150 ರಿಂದ 200 ರು. ಮಾತ್ರ ಇತ್ತು. ಈ ವರ್ಷ 900 ರುಪಾಯಿಗೆ ಏರಿದೆ. ಬತ್ತದ ಬೆಲೆ ಕಳೆದ 10 ವರ್ಷದಿಂದಲೂ 1 ಕ್ವಿಂಟಾಲ್ ಗೆ 1000 ರಿಂದ 1500 ರುಪಾಯಿ ಮಾತ್ರ ಇತ್ತು. ಈ ವರ್ಷ ಕಟಾವು ಸಮಯದಲ್ಲೇ 3 ಸಾವಿರ ರು.ಗೆ ಏರಿಕೆಯಾಗಿದೆ.

ಈ ವರ್ಷ ರೈತರು ಬೆಳೆದ ಎಲ್ಲಾ ಬೆಳೆಗಳಿಗೂ ಉತ್ತಮ ಧಾರಣೆ ಬಂದಿದೆ. ಎಲ್ಲಾ ಬೆಳೆಗಳ ಕಟಾವು ಸಮಯದಲ್ಲೇ ಉತ್ತಮ ಧಾರಣೆ ಏರಿಕೆ ಕಂಡಿರುವುದು ರೈತರಿಗೆ ವರದಾನವಾಗಿದೆ. ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ಅಡಕೆಗೆ ಕೊಳೆ ರೋಗ, ಎಲೆ ಚುಕ್ಕಿ ರೋಗ ಕಡಿಮೆಯಾಗಿದೆ. ರೈತರು ಯಾವಾಗಲೂ ಒಂದೇ ಬೆಳೆಯನ್ನು ನಂಬಿರ ಬಾರದು. ಮಿಶ್ರ ಬೆಳೆ ಬೆಳೆಯುವುದರಿಂದ ಒಂದು ಬೆಳೆ ಬೆಲೆ ಕುಸಿತ ಕಂಡಾಗ ಇನ್ನೊಂದು ಬೆಳೆಯ ಬೆಲೆ ನಮ್ಮನ್ನು ಕೈ ಹಿಡಿಯುತ್ತದೆ.

ನಾರಾಯಣ ಬಿ.ಎ.

ಸಾವಯವ ಕೃಷಿಕ, ಮಾವಿನಹಿತ್ತಲು, ಸೀತೂರು ಗ್ರಾಮ,

ನರಸಿಂಹರಾಜಪುರ ತಾಲೂಕು

ಈ ವರ್ಷ ಅಡಕೆ, ಕಾಫಿ, ಬತ್ತ, ತೆಂಗಿನಕಾಯಿ ಸೇರಿದಂತೆ ಎಲ್ಲಾ ಬೆಳೆಗಳಿಗೂ ಉತ್ತಮ ಧಾರಣೆ ಬಂದಿದ್ದು ರೈತರಿಗೆ ಖುಷಿ ತಂದಿದೆ. ಕೆಲವು ವರ್ಷ ಕಟಾವು ಸಮಯದಲ್ಲೇ ಬೆಲೆಗಳು ಕುಸಿದು ರೈತರಿಗೆ ತೊಂದರೆಯಾಗುತ್ತದೆ. ರೈತರು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಬೇಕು. ಉತ್ತಮ ಗುಣಮಟ್ಟದ ಬೆಳೆ ಬೆಳೆಯಬೇಕು. ಜೊತೆಗೆ ಮಿಶ್ರ ಬೆಳೆ ಬೆಳೆಯುವುದಕ್ಕೆ ಆದ್ಯತೆ ನೀಡಬೇಕು.

ಮಡಬೂರು ಕೃಷ್ಣಪ್ಪಗೌಡ,

ಪ್ರಗತಿಪರ ಕೃಷಿಕರು, ನರಸಿಂಹರಾಜಪುರ