ಸಾರಾಂಶ
ಮದುವೆಗೆ ಹೊರಟಿದ್ದ ಕಾರಿನಲ್ಲಿದ್ದ ಒಂದೇ ಕುಟುಂಬ ನಾಲ್ವರು ಸೇರಿದಂತೆ ಐವರು ಮೃತರಾದ ಘಟನೆ ಶುಕ್ರವಾರ ಮುಂಜಾನೆ ಶಿರಸಿ- ಕುಮಟಾ ರಸ್ತೆಯ ಬಂಡಲ ಬಳಿ ಸಂಭವಿಸಿದೆ.
ಶಿರಸಿ:
ಕಾರು ಮತ್ತು ಬಸ್ ನಡುವೆ ನಡೆದ ಮುಖಾಮುಖಿ ಅಪಘಾತದಲ್ಲಿ ಮದುವೆಗೆ ಹೊರಟಿದ್ದ ಕಾರಿನಲ್ಲಿದ್ದ ಒಂದೇ ಕುಟುಂಬ ನಾಲ್ವರು ಸೇರಿದಂತೆ ಐವರು ಮೃತರಾದ ಘಟನೆ ಶುಕ್ರವಾರ ಮುಂಜಾನೆ ಶಿರಸಿ- ಕುಮಟಾ ರಸ್ತೆಯ ಬಂಡಲ ಬಳಿ ಸಂಭವಿಸಿದೆ.ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತರಾಗಿದ್ದರೆ ತೀವ್ರವಾಗಿ ಗಾಯಗೊಂಡಿದ್ದ ಕಾರಿನ ಚಾಲಕ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಮೃತನಾಗಿದ್ದಾನೆ.
ಮೃತರಲ್ಲಿ ನಾಲ್ವರು ಮಂಗಳೂರಿನವರಾಗಿದ್ದರೆ. ಚಾಲಕ ಚೆನ್ನೈನವರಾಗಿದ್ದಾರೆ. ಮದುವೆಗೆ ಹೋಗುವ ಸಲುವಾಗಿ ಮಂಗಳೂರಿನಿಂದ ತಡ ರಾತ್ರಿ ಹೊರಟಿದ್ದ ಈ ಕುಟುಂಬ, ಚಾಲಕನ ನಿದ್ದೆಯ ಮಂಪರು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.ಮಂಗಳೂರಿನ ಕಂದಾವರದ ಈ ಕುಟುಂಬ ಶಿರಸಿಯಲ್ಲಿ ನಡೆಯುವ ವಿವಾಹದಲ್ಲಿ ಪಾಲ್ಗೊಳ್ಳಲು ಹೊರಟಿತ್ತು. ಮೃತರನ್ನು ರಿಕ್ಷಾ ಚಾಲಕ ವೃತ್ತಿ ಮಾಡಿಕೊಂಡಿದ್ದ ರಾಮಕೃಷ್ಣ ಬಾಬುರಾವ್(೭೧), ವಿದ್ಯಾಲಕ್ಷ್ಮೀ ರಾಮಕೃಷ್ಣ ರಾವ್ (೬೭), ಪುಷ್ಪಾ ಮೋಹನರಾವ್ (೬೨) ಹಾಗೂ ಇನ್ಫೋಸಿಸ್ ಉದ್ಯೋಗಿ ಸುಹಾಸ್ ಗಣೇಶ ರಾವ್ (೩೦) ಎಂದು ಗುರುತಿಸಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಚೆನ್ನೈನ ಅರವಿಂದ್ ಎಂಬವರು ತೀವ್ರ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣವೇ ನುಜ್ಜಾಗಿದ್ದ ಕಾರಿನ ಬಾಗಿಲು ಒಡೆದು ಆ್ಯಂಬುಲೆನ್ಸ್‌ಮೂಲಕ ಅವರನ್ನು ಶಿರಸಿ ಆಸ್ಪತ್ರೆಗೆ ಕಳಿಸಿದ್ದಾರೆ. ಆದರೆ, ತೀವ್ರ ಗಾಯಗೊಂಡಿದ್ದ ಅವರು, ನೀಲೇಕಣಿ ಸಮೀಪ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಹುಬ್ಬಳ್ಳಿಯಿಂದ ಭಟ್ಕಳಕ್ಕೆ ಹೊರಟಿದ್ದ ಬಸ್‌ನಲ್ಲಿ ಚಾಲಕ ಸೇರಿದಂತೆ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪಘಾತಕ್ಕೆ ಕಾರಣವಾದ ನಿದ್ದೆಯ ಮಂಪರು:ಮದುವೆಗೆ ಆಗಮಿಸುವ ಸಲುವಾಗಿ ತಡರಾತ್ರಿ ಈ ಕುಟುಂಬ ಹೊರಟಿದ್ದು, ಚಾಲಕ ನಿದ್ದೆಯ ಮಂಪರಿನಲ್ಲಿದ್ದುದೇ ಈ ಅಪಘಾತಕ್ಕೆ ಕಾರಣವಾಗರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಮಧ್ಯ ದಾರಿಯಲ್ಲಿ ಬರುತ್ತಿದ್ದ ಕಾರನ್ನು ತಪ್ಪಿಸಲು ಬಸ್ ಚಾಲಕ ಶ್ರಮಿಸಿದರೂ ಕಾರು ಬಂದು ಬಸ್‌ಗೆ ಗುದ್ದಿದೆ ಎಂದು ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ತಿಳಿಸಿದ್ದಾರೆ.