ರಾಜ್ಯ ಸರ್ಕಾರ ಏಕಾಏಕಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದರ ಏರಿಕೆ ಮಾಡಿರುವುದರಿಂದ ಪ್ರಯಾಣಿಸುವುದೇ ಕಷ್ಟವಾಗಲಿದೆ. ಈಗಾಗಲೇ ಹಾಲಿನ ದರ ಹೆಚ್ಚಿಸಿರುವ ಸರ್ಕಾರ ಬಸ್ ದರವನ್ನೂ ಏರಿಸಿರುವುದು ಎಷ್ಟು ಸರಿ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ರಾಜ್ಯ ಸರ್ಕಾರ ಏಕಾಏಕಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದರ ಏರಿಕೆ ಮಾಡಿರುವುದರಿಂದ ಪ್ರಯಾಣಿಸುವುದೇ ಕಷ್ಟವಾಗಲಿದೆ. ಈಗಾಗಲೇ ಹಾಲಿನ ದರ ಹೆಚ್ಚಿಸಿರುವ ಸರ್ಕಾರ ಬಸ್ ದರವನ್ನೂ ಏರಿಸಿರುವುದು ಎಷ್ಟು ಸರಿ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.ಕೊಪ್ಪಳ ಬಸ್ ನಿಲ್ದಾಣದಲ್ಲಿ ಬುಧವಾರ ಪ್ರಯಾಣಿಕರೊಂದಿಗೆ ಮಾತನಾಡಿದಾಗ ದರ ಏರಿಕೆ ಕುರಿತು ವ್ಯಾಪಕ ಅಸಮಾಧಾನ ವ್ಯಕ್ತವಾಯಿತು. ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ದರ ಹೆಚ್ಚಿಸಿರುವುದರಿಂದ ಬಡವರು ಜೀವನ ನಡೆಸುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯ ಕೇಳಿಬಂತು.
ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದೆ. ಹೀಗಾಗಿ ಬಸ್ ದರ ಏರಿಕೆಯ ಬಿಸಿ ಪುರುಷರಿಗೆ ಮಾತ್ರ ತಟ್ಟಲಿದೆ ಎಂಬ ಅಸಮಾಧಾನವೂ ವ್ಯಕ್ತವಾಯಿತು."ಮಹಿಳೆಯರಿಗೆ ಉಚಿತ ಪ್ರಯಾಣವಿದೆ. ಬಸ್ ದರ ಎಷ್ಟೇ ದುಬಾರಿಯಾದರೂ ಅವರಿಗೇನೂ ತೊಂದರೆಯಿಲ್ಲ. ನಾವೇ ಇದರಿಂದ ಸಮಸ್ಯೆ ಎದುರಿಸುವುದು. ಸರ್ಕಾರ ಪುರುಷರಿಗೂ ಉಚಿತ ಪ್ರಯಾಣ ಸೌಲಭ್ಯ ನೀಡಬೇಕೆಂದು ಕೇಳುತ್ತಿದ್ದರೆ, ಈಗ ದರ ಏರಿಕೆ ಮಾಡಿ ಬರೋಬ್ಬರಿ ಬರೆ ಎಳೆದಿದ್ದಾರೆ " ಎಂದು ಕಾತರಕಿ ಗ್ರಾಮದ ಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಸ್ ದರ ಏರಿಕೆ ಮಾಡಬೇಕಾಗಿತ್ತು. ಆದರೆ, ಅಷ್ಟೊಂದು ಪ್ರಮಾಣದಲ್ಲಿ ಏರಿಕೆ ಮಾಡಬಾರದಿತ್ತು. ಶೇ. 20ರಿಂದ 25ರಷ್ಟು ದರ ಹೆಚ್ಚಳ ಮಾಡಿದರೆ ಸಂತೆಗಾಗಿ ಬಂದು ಹೋಗುವುದೂ ಹೊರೆಯಾಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟರು.ಮಳೆ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಜನರಿಗೆ ನೆರವಾಗಬೇಕಾದ ಸರ್ಕಾರ ಬೆಲೆ ಏರಿಕೆಯ ಬರೆ ಹಾಕಿದೆ ಎಂಬ ಆಕ್ರೋಶ ವ್ಯಕ್ತವಾಯಿತು. ಬಸ್ ದರ ಏರಿಕೆ ಕುರಿತು ಮಹಿಳೆಯರು ಪ್ರತಿಕ್ರಿಯಿಸಲು ನಿರಾಕರಿಸಿದರೂ, ಮುಂದಿನ ದಿನಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ರದ್ದುಗೊಳಿಸುತ್ತಾರೆಯೇ ಎಂಬ ಆತಂಕ ವ್ಯಕ್ತಪಡಿಸಿದರು.
"ಬಸ್ ದರ ಎಷ್ಟು ಮಾಡಿದ್ದಾರೆ ಎಂದು ಗೊತ್ತಿಲ್ಲ. ಎಷ್ಟು ಹೆಚ್ಚಾಗಿದೆ ಎನ್ನುವುದನ್ನು ನೋಡಿಕೊಂಡು ಪ್ರತಿಕ್ರಿಯೆ ನೀಡುತ್ತೇವೆ. ಈಗಲೇ ಏನನ್ನೂ ಹೇಳುವುದಿಲ್ಲ. ಆದರೆ, ದರ ಏರಿಕೆ ಅನಿವಾರ್ಯ. ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟಿದ್ದರಿಂದ ಈ ಸಮಸ್ಯೆಯಾಗಿದೆ. ಎಲ್ಲರೂ ಅನುಭವಿಸಲೇಬೇಕು " ಎಂದು ಗಿಣಿಗೇರಿ ಗ್ರಾಮದ ವೆಂಕಟೇಶ ಹೇಳಿದರು.ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಮಾತನಾಡಿದಾಗ ದರ ಏರಿಕೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವುದು ಕಂಡುಬಂತು.ಹೊಡೆತ ಬೀಳಲಿದೆ: ಈ ಮೊದ್ಲೆ ಬರಗಾಲ ಐತಿ. ರೈತರು ಬೀಜ, ಗೊಬ್ಬರ ಖರೀದಿಗೆ ಇಷ್ಟೊಂದು ಹಣ ನೀಡಿ ಬರಲು ಆಗುತ್ತಿದೆಯೇ? ಇದರಿಂದ ರೈತ ಸಮುದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಶರಣಪ್ಪ ಬಿಸರಳ್ಳಿ ಹೇಳಿದರು.ದರ ನಿರ್ಧಾರ ಹಿಂಪಡೆಯಲಿ: ರಾಜ್ಯ ಸರ್ಕಾರ ಬಸ್ ದರ ಹೆಚ್ಚಿಸಿರುವುದರಿಂದ ಸಾಮಾನ್ಯ ಜನರಿಗೆ ಹೊರೆಯಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ಅನುಮತಿ ನೀಡಿದೆ. ಈಗ ಬಸ್ ದರ ಹೆಚ್ಚಿಸಿರುವುದರಿಂದ ಪುರುಷ ಪ್ರಯಾಣಿಕರ ಗತಿ ಏನೆಂಬುದು ತಿಳಿಯದಂತಾಗಿದೆ. ಕೂಡಲೇ ಸರ್ಕಾರ ಬಸ್ ದರ ಹೆಚ್ಚಿಸಿರುವ ನಿರ್ಧಾರ ಹಿಂಪಡೆದು, ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಗರಸಭೆ ಮಾಜಿ ಸದಸ್ಯ ವಾಸುದೇವ ನವಲಿ ಹೇಳಿದರು.
ಹಗಲು ದರೋಡೆ: ಸರ್ಕಾರ ಬಸ್ ದರ ಹೆಚ್ಚಿಸಿರುವುದನ್ನು ಗಮನಿಸಿದರೆ ಹಗಲು ದರೋಡೆ ಮಾಡಿದಂತಾಗಿದೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು, ಬೆಳೆ ಇಲ್ಲದೆ ರೈತರ ಪಾಡು ಯಾರು ಕೇಳದಂತಾಗಿದೆ. ಇಂತಹ ಸಮಯದಲ್ಲಿ ಬಸ್ ದರ ಹೆಚ್ಚಿಸಿರುವುದು ಗಮನಿಸಿದರೆ ಸರ್ಕಾರ ಸಾಮಾನ್ಯ ಜನರ ಮೇಲೆ ಹೊರೆ ಹಾಕಿದೆ ಎಂದು ರೈತ ಮುಖಂಡ ವೈ. ಆನಂದರಾವ್ ಹೇಳಿದರು.ಏರಿಕೆ ಖಂಡನೀಯ: ಬಸ್ ದರ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಜನಸಾಮಾನ್ಯರ ಮೇಲೆ ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನ ಆಡಳಿತ ವ್ಯವಸ್ಥೆ ಅತ್ಯಂತ ಪರಿಣಾಮ ಬೀರುತ್ತಿದೆ. ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ, ಬಸ್ ದರ ಏರಿಕೆ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಇಂತಹ ಸರ್ಕಾರ ಇರುವುದೇ ದುರಾದೃಷ್ಟಕರ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.ಇಂಧನ ಬೆಲೆ ಏರಿಕೆ ಕಾರಣ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಸಿಎನ್ಜಿ ದರ ಏರಿಕೆ ಮಾಡಿರುವುದು ಬಸ್ ದರ ಏರಿಕೆಗೆ ಕಾರಣವಾಗಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಸಂಗ್ರಹದ ನಮ್ಮ ಪಾಲನ್ನು ನೀಡುತ್ತಿಲ್ಲ. ಅಲ್ಲದೇ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ ಸಹ ಸರಿಯಾಗಿ ನೀಡುತ್ತಿಲ್ಲ. ಇಂಧನಗಳ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರವೇ ಮಾಡಿದ ಕಾರಣ ದರ ಏರಿಕೆ ಆಗಿದೆ ಎಂದು ಕುಕನೂರು ತಾಲೂಕು ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದರು. ಬಡವರ್ಗಕ್ಕೆ ಹೊರೆ: ಬಸ್ ದರ ಏರಿಕೆಯಿಂದ ಬಡವರ್ಗಕ್ಕೆ ಹೊರೆಯಾಗಿದೆ. ದೀಪಾವಳಿಗೆ ಬಸ್ ದರ ಏರಿಕೆಯ ಕೊಡುಗೆ ಕಾಂಗ್ರೆಸ್ ನೀಡಿದೆ. ಹಾಲು, ಮೊಸರು ದರ ಹೆಚ್ಚಿಸಿದರು, ಈಗ ಬಸ್ ದರ ಸಹ ಹೆಚ್ಚಿಸಿದ್ದಾರೆ. ಇದು ಬಡವರ್ಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಕುಕನೂರು ಪಟ್ಟಣದ ನಿವಾಸಿ ಕನಕಪ್ಪ ಬ್ಯಾಡರ್ ಹೇಳಿದರು.
ಜನರಿಗೆ ಹೊರೆ: ರಾಜ್ಯದಲ್ಲಿ ಈಗಾಗಲೇ ಬರಗಾಲದ ಪರಿಸ್ಥಿತಿ ಇದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರಿಗೆ ಇದರಿಂದ ಮತ್ತಷ್ಟು ಹೊರೆಯಾಗಲಿದೆ. ಈಗಾಗಲೇ ಜನರು ಸಂಕಷ್ಟದಲ್ಲಿರುವುದರಿಂದ ಸರ್ಕಾರ ಬಸ್ ದರ ಏರಿಕೆ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ನಿರ್ಧಾರ ಕೈಬಿಡಬೇಕು: ಬಸ್ ಪ್ರಯಾಣ ದರ ಏರಿಕೆ ಮಾಡಿದರೆ ಗ್ರಾಮೀಣ ಭಾಗದ ಜನರು, ಕೂಲಿ ಕಾರ್ಮಿಕರು ಹಾಗೂ ನಿತ್ಯ ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬಸ್ ಪ್ರಯಾಣವೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದ್ದು, ದರ ಹೆಚ್ಚಳದಿಂದ ಬಡ ಕುಟುಂಬಗಳ ದೈನಂದಿನ ಖರ್ಚು ಹೆಚ್ಚಾಗಲಿದೆ. ಜನರ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಬಸ್ ಪ್ರಯಾಣ ದರ ಏರಿಕೆ ನಿರ್ಧಾರ ಕೈಬಿಡಬೇಕು ಎಂದು ದೋಟಿಹಾಳ ನಿವಾಸಿ ಮುತ್ತುರಾಜ ಹೊಸಲಕೊಪ್ಪ ಹೇಳಿದರು.