ಶಿರಾ ತಾಲೂಕು ದ್ವಾರಾಳು ಬ್ರಿಡ್ಜ್ ಬಳಿ ಕೆಎಸ್‌ಆರ್ಟಿಸಿ ಬಸ್ಸೊಂದು ಕ್ಯಾಂಟರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ ತಾಲೂಕು ದ್ವಾರಾಳು ಬ್ರಿಡ್ಜ್ ಬಳಿ ಕೆಎಸ್‌ಆರ್ಟಿಸಿ ಬಸ್ಸೊಂದು ಕ್ಯಾಂಟರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಬಸ್ ಡ್ರೈವರ್ ಶ್ರೀಕಾಂತ್ (೩೦) ಹಾಗೂ ಮತ್ತೋರ್ವ ಸುಮಾರು ೫೦ ವರ್ಷ ವಯಸ್ಸಿನ ಮಹಿಳೆ ಸಾವಿಗೀಡಾಗಿದ್ದಾರೆ. ಕ್ಯಾಂಟರ್ ವಾಹನ ವೇಗವಾಗಿ ಚಲಿಸುತ್ತಿದ್ದಾಗ ದ್ವಾರಾಳು ಬ್ರಿಡ್ಜ್ ಸಮೀಪ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಕ್ಯಾಂಟರ್‌ನ ಹಿಂದೆಯೇ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಕ್ಯಾಂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಸುಮಾರು ೨೨ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಮತ್ತು ಬೆಂಗಳೂರಿಗೆ ರವಾನಿಸಲಾಗಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.