ಬಾಳೆಹೊನ್ನೂರಿನಲ್ಲಿ ಸಮಯಕ್ಕೆ ಬಾರದ ಬಸ್: ವಿದ್ಯಾರ್ಥಿಗಳಿಗೆ ಕ್ಲಾಸ್ ಮಿಸ್

| Published : Sep 12 2025, 01:00 AM IST

ಬಾಳೆಹೊನ್ನೂರಿನಲ್ಲಿ ಸಮಯಕ್ಕೆ ಬಾರದ ಬಸ್: ವಿದ್ಯಾರ್ಥಿಗಳಿಗೆ ಕ್ಲಾಸ್ ಮಿಸ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಸಮಯಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಬರದೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಿತ್ಯವೂ ತರಗತಿ ಮಿಸ್ ಆಗುತ್ತಿದೆ ಎಂದು ಪಟ್ಟಣದ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಸಮಯಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಬರದೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಿತ್ಯವೂ ತರಗತಿ ಮಿಸ್ ಆಗುತ್ತಿದೆ ಎಂದು ಪಟ್ಟಣದ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ದೂರಿದ್ದಾರೆ.

ಚಿಕ್ಕಮಗಳೂರಿನಿಂದ ಶೃಂಗೇರಿ, ಕೊಪ್ಪ ಮಾರ್ಗವಾಗಿ ಹಾಗೂ ಶೃಂಗೇರಿಯಿಂದ ಚಿಕ್ಕಮಗಳೂರು ಮಾರ್ಗವಾಗಿ ನಿತ್ಯವೂ ಹಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲು ಅನುಮತಿಯಿದ್ದರೂ ಸಹ ಅವುಗಳು ನಿಗದಿತ ಸಮಯಕ್ಕೆ ಬಾರದೆ ವಿದ್ಯಾರ್ಥಿಗಳಿಗೆ ನಿತ್ಯವೂ ತೊಂದರೆಯಾಗುತ್ತಿದೆ.

ಚಿಕ್ಕಮಗಳೂರು ಕಡೆಯಿಂದ ಕಡಬಗೆರೆ, ಸಂಗಮೇಶ್ವರಪೇಟೆ, ಜೇನುಗದ್ದೆ, ಹುಣಸೇಹಳ್ಳಿ, ಶೃಂಗೇರಿ ಕಡೆಯಿಂದ ಜಯಪುರ, ಶಾಂತಿಪುರ, ಎಲೆಮಡಲು, ಹೇರೂರು, ಸೀಗೋಡು ಮುಂತಾದ ಕಡೆಗಳಿಂದ ಬಾಳೆಹೊನ್ನೂರು ಭಾಗಕ್ಕೆ ನಿತ್ಯವೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಬರುತ್ತಿದ್ದಾರೆ.

ಈ ಬಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ಬರುತ್ತಿದ್ದು ಇದರಿಂದಾಗಿ ಶಾಲಾ ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಾಗುತ್ತಿದೆ. ಇದರಿಂದಾಗಿ ಬೇಸತ್ತ ವಿದ್ಯಾರ್ಥಿಗಳು ಶೀಘ್ರದಲ್ಲಿ ಕಾಲೇಜಿನ ಮುಂಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿ ಸುಧನ್ವ ಮಾತನಾಡಿ, ನಾನು ನಿತ್ಯವೂ ಕಡಬಗೆರೆಯಿಂದ ಪಟ್ಟಣದ ಬಿಜಿಎಸ್ ಕಾಲೇಜಿಗೆ ಬರುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಗಂಟೆಗಟ್ಟಲೇ ಬಸ್ ನಿಲ್ದಾಣದಲ್ಲಿ ಕಾಯುವಂತಾಗಿದೆ. ಹಲವು ಬಸ್‌ಗಳನ್ನು ಕಾಲೇಜು ಬಳಿ ನಿಲುಗಡೆಯನ್ನು ಮಾಡುತ್ತಿಲ್ಲ ಎಂದರು.

ವಿದ್ಯಾರ್ಥಿನಿ ಸಂಜನಾ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರದೇ ಇದ್ದು, ಕಾಲೇಜು ಬಳಿ ನಿಲುಗಡೆಗೆ ಅನುಮತಿಯಿದ್ದರೂ ನಿಲ್ಲಿಸುತ್ತಿಲ್ಲ. ವಿದ್ಯಾರ್ಥಿಗಳು ಬಸ್ ಹತ್ತುವಾಗ, ಇಳಿಯಾಗ ಬಸ್‌ಗಳನ್ನು ಚಲಿಸುತ್ತವೆ ಇರುತ್ತವೆ. ಸಮಯಕ್ಕೆ ಸರಿಯಾಗಿ ತರಗತಿಗೆ ಬರದ ಕಾರಣ ಉಪನ್ಯಾಸಕರು ತರಗತಿಯಿಂದ ಹೊರ ಹಾಕುತ್ತಿದ್ದಾರೆ ಎಂದರು.

ವಿದ್ಯಾರ್ಥಿ ವಿನೀತ್ ಮಾತನಾಡಿ, ಬಸ್‌ಗಳ ಸಮಸ್ಯೆಯಿಂದಾಗಿ ಪರೀಕ್ಷೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹಲವು ಬಾರಿ ಈ ಕುರಿತು ಸಂಬಂಧಿಸಿದವರಿಗೆ ಗಮನಸೆಳೆದರು ಸಮಸ್ಯೆ ಬಗೆಹರಿಸಿಲ್ಲ. ಇದರಿಂದಾಗಿ ಶೀಘ್ರದಲ್ಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರದೆ ಇರುವುದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಸಮಯಕ್ಕೆ ಸರಿಯಾಗಿ ಬರದ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸೇರಿಸಿಕೊಳ್ಳುತ್ತಿಲ್ಲ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಂಬಂಧಪಟ್ಟ ಬಸ್‌ಗಳನ್ನು ಎಲ್ಲ ಮಾರ್ಗಕ್ಕೂ ಓಡಿಸಬೇಕು.

ಡಾ. ವೈ.ಎ.ಸುರೇಶ್, ಪ್ರಾಚಾರ್ಯ, ಬಿಜಿಎಸ್ ಕಾಲೇಜು.

ಕೆಎಸ್‌ಆರ್‌ಟಿಸಿಯಲ್ಲಿ ಬಸ್‌ಗಳ ಕೊರತೆಯಿದ್ದು, ಈ ಹಿನ್ನೆಲೆಯಲ್ಲಿ ಸಮಸ್ಯೆಯಾಗುತ್ತಿದೆ. ಬೆಳಗ್ಗಿನ ವೇಳೆಯಲ್ಲಿ ಹೆಚ್ಚಾಗಿ ಸಮಸ್ಯೆಯಾಗುತ್ತಿದೆ. ಇದನ್ನು ಹೇಗೆ ಪರಿಹರಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಯೋಚಿಸುತ್ತಿದ್ದಾರೆ. ತಾಂತ್ರಿಯ ಮುಖ್ಯಸ್ಥರು ಸಹ ಈ ಬಗ್ಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನೊಂದು ವಾರದಲ್ಲಿ ಸಮಸ್ಯೆ ಸರಿಯಾಗಬಹುದು ಎಂಬ ಭರವಸೆಯಿದೆ.

ರವಿ, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್.