ಕನ್ನಡಪ್ರಭ ವಾರ್ತೆ ಕಾರವಾರ
ನಗರದ ಹಳೆಯ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ವಿಚಾರ ಇದೀಗ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಶಾಸಕ ಸತೀಶ್ ಸೈಲ್ ಅವರು ತಮ್ಮ ಖಾಸಗಿ ಜಮೀನಿಗೆ ದಾರಿ ಮಾಡಿಕೊಳ್ಳುವ ದುರುದ್ದೇಶದಿಂದ ಸಾರ್ವಜನಿಕ ಬಸ್ ನಿಲ್ದಾಣ ತೆರವುಗೊಳಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ.ನಗರದ ಹಳೆಯ ಪ್ರಯಾಣಿಕರ ತಂಗುದಾಣವು ಕೇವಲ 100 ಮೀಟರ್ ದೂರದಲ್ಲೇ ಇದೆ. ಆದರೆ, ಹಳೆಯ ಗೀತಾಂಜಲಿ ಥಿಯೇಟರ್ ಹಿಂಭಾಗದಲ್ಲಿರುವ ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ 3 ಎಕರೆ ಖಾಸಗಿ ಜಾಗಕ್ಕೆ ರಸ್ತೆ ಕಲ್ಪಿಸುವ ಏಕೈಕ ಉದ್ದೇಶದಿಂದ, ಸಾರ್ವಜನಿಕ ಆಸ್ತಿಯಾದ ಆ ಹಳೆಯ ಬಸ್ ನಿಲ್ದಾಣವನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗುತ್ತಿದೆ. ಇದಕ್ಕಾಗಿ ನಗರಸಭೆ ಅಧಿಕಾರಿಗಳ ಮೇಲೆ ಶಾಸಕರು ತೀವ್ರ ಒತ್ತಡ ಹೇರಿದ್ದಾರೆ ಎಂದು ರೂಪಾಲಿ ನಾಯ್ಕ ದೂರಿದ್ದಾರೆ.
ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿಯಾಗಿ ಕಾರವಾರದ ಹೃದಯ ಭಾಗದಲ್ಲಿರುವ ಹಿಂದೂ ಹೈಸ್ಕೂಲ್ ಮತ್ತು ಬಾಯಿ ಕುವರಬಾಯಿ ಶಾಲೆಗಳಿರುವ ಪ್ರದೇಶದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಅದೂ ಕೂಡ ಮಳೆಗಾಲದಲ್ಲಿ ನೀರು ಹರಿಯುವ ದೊಡ್ಡ ಚರಂಡಿ ಹಾಗೂ ಫುಟ್‌ಪಾತ್ ಮೇಲೆಯೇ ಈ ನಿಲ್ದಾಣ ತಲೆಎತ್ತುತ್ತಿದೆ. ಇದರಿಂದ ವಾಹನ ದಟ್ಟಣೆ ಉಂಟಾಗಲಿದ್ದು, ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜೀವಕ್ಕೆ ಹಾಗೂ ಸುರಕ್ಷತೆಗೆ ಭಾರೀ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ನೂತನ ಬಸ್ ನಿಲ್ದಾಣ ನಿರ್ಮಿಸುತ್ತಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ರೂಪಾಲಿ ನಾಯ್ಕ, ಸ್ಥಳಕ್ಕೆ ನಗರಸಭೆ ಆಯುಕ್ತ ಜಗದೀಶ ಹುಲಿಗೆಜ್ಜಿ ಅವರನ್ನು ಕರೆಯಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಫುಟ್‌ಪಾತ್ ಮೇಲೆ ಬಸ್ ನಿಲ್ದಾಣ ಮಾಡುವುದು ಎಷ್ಟು ಸುರಕ್ಷಿತ? ನಾಳೆ ಶಾಲಾ ಮಕ್ಕಳಿಗೆ ಅಥವಾ ಸಾರ್ವಜನಿಕರೊಂದಿಗೆ ಏನಾದರೂ ದುರ್ಘಟನೆ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಶಾಸಕರ ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ಅವೈಜ್ಞಾನಿಕ ಕಾಮಗಾರಿಗಳಿಗೆ ಅವಕಾಶ ನೀಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇದೇ ವೇಳೆ ಶಾಸಕ ಸತೀಶ್ ಸೈಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೂಪಾಲಿ ನಾಯ್ಕ, ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯದಿಂದ ಜಾಮೀನು ಪಡೆದು ಬಂದಿರುವ ಅವರು ಮನೆಯಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯಬೇಕು. ಅದನ್ನು ಬಿಟ್ಟು, ಸಾರ್ವಜನಿಕರಿಗೆ ತೊಂದರೆ ಕೊಡುವ ಇಂಥ ಎಡಬಿಡಂಗಿ ಕೆಲಸ ಮಾಡುವುದನ್ನು ಅವರು ಮೊದಲು ಬಿಡಲಿ ಎಂದರು.