ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ, ಹೂ, ಸಿಹಿತಿಂಡಿ ಮತ್ತು ಹಣ್ಣಿನ ವ್ಯಾಪಾರ ಜೋರಾಗಿದೆ.ದೀಪಾವಳಿ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ಜೆ.ಕೆ. ಮೈದಾನ, ಹೆಬ್ಬಾಳು ಕೈಗಾರಿಕಾ ಪ್ರದೇಶ, ನಂಜುಮಳಿಗೆ ಸೇರಿದಂತೆ ವಿವಿಧೆಡೆ ತೆರೆಯಲಾದ ಪಟಾಕಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು.ಮಕ್ಕಳು, ಪೋಷಕರು, ಯುವಕರು ಹಸಿರು ಪಟಾಕಿ ಖರೀದಿಯಲ್ಲಿ ತೊಡಗಿಸಿಕೊಂಡರು. ಪಟಾಕಿ ಮಾರಾಟಕ್ಕೆ ಅ. 22 ರವರಗೆ ಅವಕಾಶ ನೀಡಲಾಗಿದೆ. ಪ್ರಮುಖವಾಗಿ ಹಸಿರು ಪಟಾಕಿಗೆ ಆದ್ಯತೆ ನೀಡಲಾಗಿದೆ. ಬಹುಪಾಲು ಎಲ್ಲಾ ಮಳಿಗೆಯಲ್ಲಿಯೂ ರಿಯಾಯಿತಿ ದರದಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ.ಒಂದು ಬಾಕ್ಸ್‌ನಲ್ಲಿರುವ ಪಟಾಕಿ ಸಂಖ್ಯೆ ಮತ್ತು ಮಾದರಿಯನ್ನು ಆಧರಿಸಿ ದರ ನಿಗದಿಪಡಿಸಲಾಗಿದೆ. ಒಂದು ಪಟಾಕಿ ಬಾಕ್ಸ್‌ಗೆ 100 ರೂ. ನಿಂದಹಿಡಿದು 5 ಸಾವಿರ ರೂ.ವರಗೆ ಇದೆ. ಪ್ರತಿವರ್ಷದಂತೆ ಈ ವರ್ಷವೂ ಪಟಾಕಿ ದರ ಏರಿಕೆಯಾಗಿದೆ.ನಿನ್ನೆ, ಮೊನ್ನೆಗಿಂತ ಸೋಮವಾರ ಪಟಾಕಿ ವ್ಯಾಪಾರ ಜೋರಾಗಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪಠಾಕಿ ಮಾರಾಟ ಸ್ಥಳದಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಅಂಗಡಿ ಮಾಲೀಕರಿಗೆ ಸೂಚಿಸಿದ್ದಾರೆ.ದೀಪಾವಳಿ ಆಚರಣೆಗೆ ನಗರದ ಜನತೆ ಸಂಭ್ರಮ ಮತ್ತು ಸಡಗರದಿಂದ ಸಿದ್ಧತೆ ನಡೆಸಿದ್ದಾರೆ. ಶನಿವಾರ ಮತ್ತು ಭಾನುವಾರ ನಗರದ ದೇವರಾಜ ಮಾರುಕಟ್ಟೆಯಲ್ಲಿ ಹಣ್ಣು, ಹೂ, ಪೂಜಾ ಸಾಮಗ್ರಿಗಳ ವ್ಯಾಪಾರ ಜೋರಾಗಿತ್ತು.ಸೇವಂತೆಗೆ ಬೆಲೆ ಏಕಾಏಕಿ ಮಾರಿಗೆ 80 ರಿಂದ 100 ರೂ. ಮುಟ್ಟಿದೆ. ಮೊನ್ನೆಯಷ್ಟೇ 30 ರಿಂದ 40 ರೂ.ಗೆ ಒಂದು ಮಾರು ಸೇವಂತಿಗೆ ದೊರೆಯುತ್ತಿತ್ತು.ಇನ್ನು ಮಲ್ಲಿಗೆ ದರ ಕೆಜಿಗೆ ಒಂದು ಸಾವಿರದ ಗಡಿ ದಾಟಿದೆ. ಕನಕಾಂಬರ ಒಂದೂವರೆ ಸಾವಿರದ ಗಡಿಯಾಚೆ ಇದೆ. ಉಳಿದಂತೆ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಬಾಳೆಕಂದು, ಮಾವಿನ ಸೊಪ್ಪು ಮಾರಾಟ ನಡೆಯಿತು.ಬಾಳೆ ಬೆಲೆ ಇಳಿಕೆಬಾಳೆ ಹಣ್ಣಿನ ಬೆಲೆಯು ಇತ್ತೀಚೆಗಷ್ಟೇ 100 ರೂ. ಇತ್ತು. ಆದರೆ ಮಾರುಕಟ್ಟೆಗೆ ಹೆಚ್ಚಿನ ಬಾಳೆ ಬಂದ ಹಿನ್ನೆಲೆಯಲ್ಲಿ ಬಾಳೆ ಹಣ್ಣಿನ ದರ 60 ರೂ.ನಿಂದ 80 ರೂ.ಗೆ ಕುಸಿಯಿತು. ಕೆಲವು ಕಡೆಗಳಲ್ಲಿ ಹೋಲ್‌ಸೇಲ್‌ದರ 50 ರೂ. ಇತ್ತು.