ಅನಧಿಕೃತವಾಗಿ ಫ್ಲೆಕ್ಸ್‌ ಮುದ್ರಿಸಿದರೆಉದ್ದಿಮೆ ಲೈಸೆನ್ಸ್‌ ರದ್ದು: ಬಿಬಿಎಂಪಿ

| Published : Jul 28 2024, 02:00 AM IST

ಅನಧಿಕೃತವಾಗಿ ಫ್ಲೆಕ್ಸ್‌ ಮುದ್ರಿಸಿದರೆಉದ್ದಿಮೆ ಲೈಸೆನ್ಸ್‌ ರದ್ದು: ಬಿಬಿಎಂಪಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾಜಾರೋಷವಾಗಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಮುದ್ರಣಕಾರರನ್ನು ನಿಯಂತ್ರಿಸಲು ಬಿಬಿಎಂಪಿ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾಜಾರೋಷವಾಗಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಮುದ್ರಣಕಾರರನ್ನು ನಿಯಂತ್ರಿಸಲು ಬಿಬಿಎಂಪಿ ಮುಂದಾಗಿದೆ.

ಅನಧಿಕೃತ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕುವ ಕುರಿತಂತೆ ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಕುರಿತಂತೆ ಬಿಬಿಎಂಪಿ ವಿಶೇಷ ಆಯುಕ್ತರು ಮುಖ್ಯ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ನಗರದಲ್ಲಿ ಪ್ರಸ್ತುತ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶ ಸಾರಲು ಸರ್ಕಾರದ ಜಾಹೀರಾತುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳನ್ನು ಹೊರತುಪಡಿಸಿ ಇತರೆ ಯಾವುದೇ ವಾಣಿಜ್ಯ ಜಾಹೀರಾತುಗಳಿಗೆ ಅನುಮತಿ ಇಲ್ಲ. ಆದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಫಲಕಗಳನ್ನು ಅನಧಿಕೃತವಾಗಿ ಅಳವಡಿಸಲಾಗುತ್ತಿದೆ. ಇದಕ್ಕೆ ನಿಯಂತ್ರಣ ಹೇರಲು ಉದ್ದೇಶಿಸಲಾಗಿದೆ.

ಜಾಹೀರಾತು ಮುದ್ರಿಸುವ ಮುನ್ನ ಮುದ್ರಕರು, ಬೇಡಿಕೆ ಸಲ್ಲಿಸುವವರು ಪಾಲಿಕೆಯಿಂದ ಫ್ಲೆಕ್ಸ್ ಅಳವಡಿಸಲು ಅನುಮತಿ ಪಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ದಾಖಲೆ ಪಡೆಯಬೇಕು. ಫ್ಲೆಕ್ಸ್ ಮತ್ತು ಬ್ಯಾನರ್ ಮುದ್ರಿಸಲು ಜಾಹೀರಾತು ವಿಭಾಗದಿಂದ ಅನುಮತಿ ಪತ್ರವನ್ನು ಹಾಜರುಪಡಿಸಿದಲ್ಲಿ ಮಾತ್ರ ಮುದ್ರಣ ಮಾಡಿಕೊಡಬೇಕು. ಪರಿಸರಕ್ಕೆ ಮಾರಕವಾಗುವಂತೆ ಪರಿಸರ ಸ್ನೇಹಿ, ಜೈವಿಕ ವಿಘಟನೀಯ ವಸ್ತುಗಳನ್ನು ಮಾತ್ರ ಬಳಸಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಮುದ್ರಿಸಬೇಕು. ಯಾವುದೇ ಕಾರಣಕ್ಕೂ ಪಿವಿಸಿ, ಪ್ಲಾಸ್ಟಿಕ್ ಮಿಶ್ರಿತ ವಸ್ತುಗಳನ್ನು ಬಳಸಿದ್ದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನುಮತಿ ಇಲ್ಲದೆ ಮುದ್ರಣ ಮಾಡಿದಲ್ಲಿ ವ್ಯಾಪಾರ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಮುದ್ರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಬಿಬಿಎಂಪಿ ಜಾಹೀರಾತು ವಿಭಾಗದ ವಿಶೇಷ ಆಯುಕ್ತರು ಸೂಚಿಸಿದ್ದಾರೆ.