ಸಾರಾಂಶ
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಏರ್ಪಿಡಿಸಿದ್ದ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ ಗಂಗಾವತಿ
ಕೊಪ್ಪಳ ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಮಾರ್ಗಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದರು.ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಏರ್ಪಿಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೈಲ್ವೆ ಮಾರ್ಗ ಮತ್ತು ಹೆದ್ದಾರಿಗಳಿಗೆ ಒತ್ತು ನೀಡುತ್ತೇನೆ. ಕೊಪ್ಪಳ ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆ ತಿಳಿಸುತ್ತೇನೆ ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿ, ನನಗೆ ಸುಳ್ಳು, ವಂಚನೆ, ಮೋಸ ಮಾಡುವುದು ಗೊತ್ತೇ ಇಲ್ಲ. ನಾನು ಅಧಿಕಾರದಲ್ಲಿರಲಿ, ಇಲ್ಲದಿರಲಿ ಜನರ ಸೇವೆ ಮತ್ತು ಕ್ಷೇತ್ರದ ಅಭಿವೃದ್ದಿಗೆ ಕೆಲಸ ಮಾಡುವ ವ್ಯಕ್ತಿಯಾಗಿದ್ದೇನೆ. ರಾಜಶೇಖರ ಹಿಟ್ನಾಳ ಗೆಲುವಿಗೆ ಹಗಲು ರಾತ್ರಿ ಕೆಲಸ ಮಾಡಿದ್ದೇವೆ. 2023ರಲ್ಲಿ ಜಿಲ್ಲೆಯ ನಾಯಕರು ಷಡ್ಯಂತರ ಮಾಡಿ ನನ್ನನ್ನು ಸೋಲಿಸಿದರು. ಆದರು ನಾನು ಕುಗ್ಗಲಿಲ್ಲ. ಆದರು ನನ್ನ ಗಂಗಾವತಿ ಅಭಿವೃದ್ಧಿ ಇಟ್ಟುಕೊಂಡು ಶ್ರಮಿಸುತ್ತಿದ್ದೇನೆ ಎಂದರು.ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ರಾಜಶೇಖರ ಹಿಟ್ನಾಳ ಗೆಲುವಿಗೆ ಇಕ್ಬಾಲ್ ಅನ್ಸಾರಿ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಸಮರ್ಥ ಆಡಳಿತ ನಡೆಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪಕ್ಷದವರು ಮಸಿಬಳೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಮತ್ತು ಎರಡು ರೈಲ್ವೆ ಮಾರ್ಗಗಳು ಅನುಷ್ಠಾನಗೊಳ್ಳಬೇಕಾಗಿದೆ. ಸಂಸದ ರಾಜಶೇಖರ ಹಿಟ್ನಾಳ ಮುತುವರ್ಜಿ ವಹಿಸಬೇಕೆಂದರು.ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ, ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಆ. 5 ಅಥವಾ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಗಭದ್ರಾ ಜಲಾಶಯಕ್ಕೆ ಭಾಗಿನ ಅರ್ಪಣೆ ಮಾಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸಂಸದ ರಾಜಶೇಖರ್ ಹಿಟ್ನಾಳ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಸನ್ಮಾನಿಸಿದರು.ಶಾಸಕ ರಾಘವೇಂದ್ರ ಹಿಟ್ನಾಳ, ರಾಜ್ಯ ಕರಕುಶಲ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷೆ ಲಲಿತರಾಣಿ ಶ್ರೀರಂಗದೇವರಾಯಲು, ನ್ಯಾಯವಾದಿ ನಾಗನಗೌಡ, ಅಮರೇಶ ಗೋನಾಳ, ನಗರಸಭಾ ಸದಸ್ಯ ಮನೋಹರಸ್ವಾಮಿ, ಎಫ್. ರಾಘವೇಂದ್ರ, ಎಸ್.ಬಿ. ಖಾದ್ರಿ, ಯಮನಪ್ಪ ವಿಠಾಲಪುರ, ಡಾ. ಇಲಿಯಾಸ ಬಾಬಾ, ಆಶ್ರಯ ಸಮಿತಿ ಸದಸ್ಯ ಉಮರ್ ಹುಸೇನ್ ಸಾಬ, ಗದ್ವಾಲ್ ಹುಸೇನಸಾಬ, ಫಕೀರಪ್ಪ ಯಮ್ನಿ, ಎಸ್.ಬಿ. ಖಾದ್ರಿ, ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ಗೋಟೂರು ಮಲ್ಲಿಕಾರ್ಜುನ, ವಿಶ್ವನಾಥ ಪಾಟೀಲ್, ವಿಷ್ಣುತೀರ್ಥ ಜೋಷಿ, ತಿರುಕಪ್ಪ ಆನೆಗೊಂದಿ, ಪುಷ್ಪಾಂಜಲಿ ಗುನ್ನಾಳ, ಸುನೀತಾ ಶ್ಯಾವಿ, ರಾಜಮ್ಮ ಇದ್ದರು.