ಪ್ರವಾಸೋದ್ಯಮ ಆಕರ್ಷಣೆಗೆ ಬೆಣ್ಣೆದೋಸೆ ಘಮ!

| Published : Dec 02 2023, 12:45 AM IST

ಸಾರಾಂಶ

ದೋಸೆಗೆ ಬ್ರಾಂಡಿಂಗ್ ಪ್ರಮಾಣಪತ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಚಿಂತನೆ: ಜಿಲ್ಲಾಧಿಕಾರಿ ಡಾ.ವೆಂಕಟೇಶ

ದೋಸೆಗೆ ಬ್ರಾಂಡಿಂಗ್ ಪ್ರಮಾಣಪತ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಚಿಂತನೆ: ಜಿಲ್ಲಾಧಿಕಾರಿ ಡಾ.ವೆಂಕಟೇಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶ, ವಿದೇಶದಲ್ಲಿನ ಜನರ ಬಾಯಲ್ಲಿ ನೀರೂರಿಸುವ ಪ್ರಸಿದ್ಧ ದಾವಣಗೆರೆ ಬೆಣ್ಣೆದೋಸೆಗೆ ಪ್ರವಾಸೋದ್ಯಮದೊಂದಿಗೆ ಟ್ಯಾಗ್ (ಜೋಡಣೆ) ಮಾಡುವ ಮೂಲಕ ಬ್ರಾಂಡಿಂಗ್‌ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಕಲ್ಪಿಸಲು ಕರೆಯಲಾದ ಬೆಣ್ಣೆದೋಸೆ ಹೋಟೆಲ್‌ಗಳ ಮಾಲೀಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ,

ರುಚಿಕರ ದಾವಣಗೆರೆ ಬೆಣ್ಣೆದೋಸೆಗೆ ತನ್ನದೇ ಆದ ಹೆಸರಿದ್ದು, ಅದನ್ನು ಅಂತಾರಾಜ್ಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಜಿಲ್ಲೆಯ ಹೆಸರನ್ನು ಹೆಚ್ಚಿಸಬೇಕಿದೆ. ಇದರಿಂದ ಜನರಿಗೆ ಹೆಚ್ಚು ಉದ್ಯೋಗ ಒದಗಿಸುವ ಚಿಂತನೆ ಮಾಡಲಾಗಿದೆ. ಬೆಣ್ಣೆದೋಸೆಗೆ ಬಳಸುವ ಆಹಾರ ಧಾನ್ಯಗಳು, ಮಾಡುವ ವಿಧಾನದ ಬಗ್ಗೆ ಜನರಿಗೆ ವಿಶ್ವಾಸ ಮೂಡಿಸುವ ಗುಣಮಟ್ಟದ ಖಾತರಿಯನ್ನು ಜನರಿಗೆ ಕಲ್ಪಿಸಬೇಕಿದೆ ಎಂದು ಹೇಳಿದರು.

ಅಂತಾರಾಜ್ಯ ಪ್ರಯಾಣಿಕರಿಂದಲೂ ಬೆಣ್ಣೆ ದೋಸೆ ಸವಿ:

ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಸಂಪರ್ಕ ಹೊಂದಿರುವ ಜಿಲ್ಲೆ ದಾವಣಗೆರೆ. ಗೋವಾ, ಮಹಾರಾಷ್ಟ್ರಕ್ಕೆ ಹೋಗುವ ಪ್ರವಾಸಿಗರು, ಅಂತಾರಾಜ್ಯ ಪ್ರಯಾಣಿಕರು ಕೂಡ ದಾವಣಗೆರೆಯಲ್ಲಿ ಬೆಣ್ಣೆದೋಸೆ ಸವಿಯುವಂತೆ ಮಾಡುವುದು, ರುಚಿಕರ, ಶುಚಿಕರ, ಗುಣಮಟ್ಟದ ಬೆಣ್ಣೆದೋಸೆ ಪೂರೈಸುವುದು ಜಿಲ್ಲಾಡಳಿತ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಜೊತೆಗೆ ಜೋಡಿಸುವ ಪ್ರಯತ್ನ ಇದು ಎಂದು ತಿಳಿಸಿದರು.

ಪ್ರವಾಸೋದ್ಯಮಕ್ಕೆ ಹೋಟೆಲ್‌ಗಳ ಜೋಡಣೆ;

ಬೆಣ್ಣೆದೋಸೆ ಹೋಟೆಲ್ ಗಳಿಗೆ ಗುಣಮಟ್ಟದ ಖಾತರಿ ಒದಗಿಸಲು ಆಹಾರ ಸುರಕ್ಷತಾ ಕಾಯ್ದೆಯನ್ವಯ ಪರಿಶೀಲನೆ ನಡೆಸಿ, ದೋಸೆಗೆ ಬಳಸುವ ಧಾನ್ಯಗಳು, ಬೆಣ್ಣೆ, ಎಣ್ಣೆ ಮತ್ತಿತರೆ ವಸ್ತುಗಳು, ಅಲ್ಲಿನ ಆರೋಗ್ಯವಂತ ಸಿಬ್ಬಂದಿಗಳ ತಪಾಸಣೆ ಸೇರಿ ಸಾರ್ವಜನಿಕರ ಆರೋಗ್ಯ, ಸುರಕ್ಷತೆಯ ಮಾನದಂಡಗಳನ್ನು ಪರಿಶೀಲಿಸಿ, ಜಿಲ್ಲಾಡಳಿತದಿಂದ ಬ್ರಾಂಡಿಂಗ್ ಪ್ರಮಾಣಪತ್ರ ನೀಡಿ ಪ್ರವಾಸೋದ್ಯಮಕ್ಕೆ ಇಂತಹ ಹೋಟೆಲ್‌ಗಳ ಜೋಡಣೆ ಮಾಡಲಾಗುವುದು ಎಂದು ಡಿಸಿ ವಿವರಿಸಿದರು.

ಪ್ರಮಾಣಪತ್ರ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಪಾಲಿಕೆ ಆಯುಕ್ತರು, ಆಹಾರ ಸುರಕ್ಷತಾ ಕಾಯ್ದೆಯ ಅಂಕಿತ ಅಧಿಕಾರಿಗಳು, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರೀಕ ಪೂರೈಕೆ ಉಪ ನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಅಧ್ಯಯನ ವರದಿ ನೀಡಲು ಸೂಚಿಸಲಾಗಿದೆ ಎಂದು ಡಿಸಿ ಡಾ.ವೆಂಕಟೇಶ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್‌.ಲೋಕೇಶ, ಪಾಲಿಕೆ ಆಯಕ್ತೆ ರೇಣುಕಾ, ದಾವಣಗೆರೆ ಬೆಣ್ಣೆದೋಸೆ ಹೊಟೆಲ್‌ಗಳ ಸ್ಥಾಪನೆಗೆ ಕಾರಣವಾದ ಮೊದಲ ಹೊಟೆಲ್‌ ಆರಂಭಿಸಿದ ಕುಟುಂಬದಿಂದ ಈಚಿನ ಹೊಟೆಲ್‌ಗಳವರೆಗೆ ಹೊಟೆಲ್ ಮಾಲೀಕರು, ಅಧಿಕಾರಿಗಳು ಇದ್ದರು.

................

3ನೇ ವಾರದಲ್ಲಿ ದೋಸೆ ಹಬ್ಬ

ದಾವಣಗೆರೆ ಬೆಣ್ಣೆದೋಸೆ ಸವಿಯುವಂತೆ ವಿಶೇಷ ಕಾರ್ಯಕ್ರಮ ಮಾಡಲುದ್ದೇಶಿಸಿದ್ದು, ಡಿಸೆಂಬರ್ 3ನೇ ವಾರದ ಅಂತ್ಯದಲ್ಲಿ ದೋಸೆ ಹಬ್ಬ ಆಚರಿಸುವ ಮೂಲಕ ದಾವಣಗೆರೆಗೆ ಮೆರುಗು ನೀಡಲಾಗುವುದು. ಇಲ್ಲಿನ ದೋಸೆಗೆ ಅಂತಾರಾಜ್ಯ ಮಟ್ಟದಲ್ಲಿ ರುಚಿ ತೋರಿಸಲು ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿ ಉತ್ತರ ಭಾರತದ ರಾಜ್ಯಗಳಲ್ಲಿ ನಡೆಯುವ ವಿಶೇಷ ಉತ್ಸವ, ಸಮ್ಮೇಳನಗಳಿಗೆ ಇಲ್ಲಿನ ಹೋಟೆಲ್ ಮಾಲೀಕರ ಪ್ರತಿನಿಧಿಯಾಗಿ ಕಳಿಸಿ, ಇಲ್ಲಿನ ಬೆಣ್ಣೆದೋಸೆ ರುಚಿಯನ್ನು ಆ ಭಾಗದ ಜನರು ಸವಿಯುವಂತೆ ಮಾಡಲಾಗುವುದು.

* ಡಾ.ಎಂ.ವಿ.ವೆಂಕಟೇಶ, ಜಿಲ್ಲಾಧಿಕಾರಿ.