ಧಾರವಾಡ:
ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಬುತ್ತಿ ಜಾತ್ರೆಯ ಹಬ್ಬದ ವಾತಾವರಣ ಸೃಷ್ಟಿಸಿತ್ತು.ಮಹಾದಾಸೋಹಿ ಎಂದೇ ಪ್ರಸಿದ್ಧವಾಗಿರುವ ಶ್ರೀಕಲಬುರ್ಗಿ ಶರಣ ಬಸವೇಶ್ವರರ ಹೆಸರಿನಲ್ಲಿ ವಿಶಿಷ್ಟ ದಾಸೋಹ ಸೇವೆಗೈಯಲು ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ ಗ್ರಾಮಗಳು ಸೇರಿದಂತೆ ಧಾರವಾಡ ನಗರದಿಂದಲೂ ಮಾತೆಯರು ಬುತ್ತಿಯೊಂದಿಗೆ ವಿಶೇಷ ಖಾದ್ಯಗಳನ್ನು ಹೊತ್ತು ತಂದಿದ್ದರು.
ಶ್ರೀಮಠದ ಶಾಂತಲಿಂಗ ಸ್ವಾಮೀಜಿ ಹಾಗೂ ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಹೊತ್ತು ತಂದಿದ್ದ ಬುತ್ತಿ ಬುಟ್ಟಿಗಳ ಮೆರವಣಿಗೆ ಸವದತ್ತಿ ಮುಖ್ಯ ರಸ್ತೆಯ ಅಮ್ಮಿನಬಾವಿ ಬಸ್ ನಿಲ್ದಾಣದಿಂದ ಗ್ರಾಮದ ಪ್ರಮುಖ ಓಣಿಗಳಲ್ಲಿ ಜರುಗಿತು. ರೈತ ಮಹಿಳೆಯರು ಭಕ್ತಿಯ ಬದ್ಧತೆಯಲ್ಲಿ ಹೊತ್ತು ತಂದ ಮೊಸರನ್ನದ ಬುತ್ತಿ ಜತೆಗೆ ಹುರಕ್ಕಿ ಹೋಳಿಗೆ, ಹೂರಣದ ಹೋಳಿಗೆ, ಸಜ್ಜಕದ ಹೋಳಿಗೆ, ಶೇಂಗಾ ಹೋಳಿಗೆ, ಸುರುಳಿ ಹೋಳಿಗೆ, ಗಾರಿಗೆ, ಕರ್ಚಿಕಾಯಿ, ಬುಂದೆ ಉಂಡಿ, ಜಿಲೇಬಿ, ಹೂರಣದ ಕಡಬು, ಜೋಳದ ಉಂಡಿಗಡಬು, ಕಿಚಡಿ, ಹಲವಾರು ವಿಧದ ಚಟ್ನಿ, ವಿವಿಧ ಕಾಳುಪಲ್ಯ, ತರಕಾರಿಯ ಪಲ್ಯ, ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಚಪಾತಿ ದಾಸೋಹ ಸೇವೆಗೆ ಸಮರ್ಪಿತಗೊಂಡವು.ದಾಸೋಹ ಸೇವೆಯ ನಂತರ ಬುತ್ತಿ ಹೊತ್ತು ತಂದ ಪ್ರತಿಯೊಬ್ಬ ರೈತ ಮಹಿಳೆಯರ ಬುಟ್ಟಿಗಳಿಗೆ ಶಾಂತಲಿಂಗ ಸ್ವಾಮೀಜಿ ಒಂದು ಮುಷ್ಟಿ ಅಕ್ಕಿ ಪ್ರಸಾದ ನೀಡಿ, ‘ಸದಾಕಾಲವೂ ಧಾನ್ಯ ಸಂಪತ್ತು ಸಮೃದ್ಧಿಯಾಗಲಿ, ಎಲ್ಲರ ಬಾಳು ಬಲಿಯಲಿ’ ಎಂಬ ಆಶೀರ್ವಾದ ಮಾಡಿದರು.